ಹಣಕ್ಕಾಗಿ ಕುರಿಗಾಹಿಯನ್ನ ಮಾರಕಾಸ್ತ್ರದಿಂದ ಕೊಲೆಗೈದ ಗಾಂಜಾ ವ್ಯಸನಿ

Public TV
2 Min Read

– ಕೊಲೆಗೈದು ಶವವನ್ನು ಬೇಲಿಗೆ ಎಸೆದಿದ್ದ ಪಾಪಿ
– ವಿಚಾರಣೆ ವೇಳೆ ಹೊರಬಿದ್ವು ಮತ್ತಷ್ಟು ಪ್ರಕರಣಗಳು

ಚಾಮರಾಜನಗರ: ಮದ್ಯ ಹಾಗೂ ಗಾಂಜಾ ವ್ಯಸನಿಯೊಬ್ಬ ಹಣಕ್ಕಾಗಿ ಕುರಿಗಾಹಿಯನ್ನು ಅಮಾನುಷವಾಗಿ ಕೊಲೆ ಮಾಡಿದ್ದ ಆರೋಪಿಯನ್ನು ಚಾಮರಾಜನಗರ ಪೊಲೀಸರು ಬಂಧಿಸಿದ್ದಾರೆ.

ಹಂಡ್ರಕಳ್ಳಿ ಮೋಳೆ ಗ್ರಾಮದ ಮಹೇಶ್ ಅಲಿಯಾಸ್ ಗೋಪಿ ಬಂಧಿತ ಆರೋಪಿ. ಮಹೇಶ್ ಫೆಬ್ರುವರಿ 4ರಂದು ಚಾಮರಾಜನಗರ ತಾಲೂಕು ಮಂಗಲ ಗ್ರಾಮದ ಮಹದೇವೆಗೌಡ (65) ಅವರನ್ನು ಕೊಲೆ ಮಾಡಿದ್ದ. ಪ್ರಕರಣದ ಬೆನ್ನುಹತ್ತಿದ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಫೆಬ್ರುವರಿ 4ರಂದು ಕುರಿ ಮೇಯಿಸಲು ಹೋಗಿದ್ದ ಮಹದೇವೆಗೌಡ ರಾತ್ರಿಯಾದರೂ ವಾಪಸ್ ಬಂದಿರಲಿಲ್ಲ. ಅನುಮಾನಗೊಂಡ ಮಹದೇವೇಗೌಡ ಅವರ ಕುಟುಂಬಸ್ಥರು ಬೆಳಗ್ಗೆ ಹುಡುಕಾಟ ನಡೆಸಿದ್ದರು. ಆಗ ಮಂಗಳ ಹಂಡ್ರಕಳ್ಳಿ ರಸ್ತೆಯ ಬೇಲಿಯೊಂದರಲ್ಲಿ ಮಹದೇವೆಗೌಡ ಅವರ ಶವ ಪತ್ತೆಯಾಗಿತ್ತು. ಮಾರಾಕಾಸ್ತ್ರದಿಂದ ಮುಖ ಹಾಗೂ ತಲೆಗೆ ಹೊಡೆದು ಲುಂಗಿಯಿಂದ ಕುತ್ತಿಗೆಯನ್ನು ಬಿಗಿದು ಕೊಲೆ ಮಾಡಿ ಶವವನ್ನು ಬೇಲಿಯಲ್ಲಿ ಬಿಸಾಡಲಾಗಿತ್ತು. ಮಹದೇವೇಗೌಡರ ಬಳಿ ಇದ್ದ ಮೂರು ಸಾವಿರ ರೂಪಾಯಿ ನಗದು ಹಾಗೂ ಚಿನ್ನದ ಉಂಗುರವನ್ನು ದೋಚಲಾಗಿತ್ತು.

ಕೊಲೆ ಯಾರು ಮಾಡಿದ್ದಾರೆ? ಹಣಕ್ಕಾಗಿ ಮಾಡಿದ್ದಾರೆಯೇ ಅಥವಾ ದ್ವೇಷಕ್ಕಾಗಿ ಮಾಡಿದ್ದಾರೆಯೇ ಎಂಬುದು ಮಾತ್ರ ನಿಗೂಢವಾಗಿತ್ತು. ಸ್ಥಳಕ್ಕೆ ಭೇಟಿ ನೀಡಿದ ಚಾಮರಾಜನಗರ ಪೂರ್ವ ಗ್ರಾಮಾಂತರ ಪೊಲೀಸರು ಇದೊಂದು ವಿಶೇಷ ಪ್ರಕರಣ ಪರಿಗಣಿಸಿ ತನಿಖೆ ಆರಂಭಿಸಿದ್ದರು. ಮೊದಲು ಇದು ಹಣಕ್ಕಾಗಿಯೇ ನಡೆದಿರುವ ಕೊಲೆ ಎಂಬ ತೀರ್ಮಾನಕ್ಕೆ ಬಂದ ಪೊಲೀಸರು ಇದೇ ಹಿನ್ನೆಲೆಯಲ್ಲಿ ತನಿಖೆ ಚುರುಕುಗೊಳಿಸಿದ್ದರು. ಅದರಂತೆ ಮಂಗಳ ಹಂಡ್ರಕಳ್ಳಿ ಭಾಗದಲ್ಲಿದ್ದ ಮದ್ಯ ವ್ಯಸನಿಗಳು ಜೂಜೂಕೋರರ ಮಾಹಿತಿ ಕಲೆ ಹಾಕಿದ್ದರು. ಆಗ ಸಿಕ್ಕಿಬಿದ್ದವನೇ ಹಂಡ್ರಕಳ್ಳಿ ಮೋಳೆ ಗ್ರಾಮದ ಮಹೇಶ್ ಅಲಿಯಾಸ್ ಗೋಪಿ.

ಮಹೇಶ್‍ನನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆಗೆ ಒಳಪಡಿಸಿದಾಗ ಆತ ಗಾಂಜಾ ವ್ಯಸನಿಯಾಗಿದ್ದ. ಕುಡಿತದ ಚಟಕ್ಕೆ ಬಿದ್ದಿದ್ದಾನೆ ಎಂಬುದು ಪೊಲೀಸರಿಗೆ ಕಂಡುಬಂದಿತ್ತು. ಕುಡಿತಕ್ಕೆ ಹಣವಿಲ್ಲದಾಗ ಮಹೇಶ್ ತಲೆಯಲ್ಲಿ ಬಂದಿದ್ದು ಕುರಿಗಾಹಿ ಮಹದೇವೆಗೌಡ. ಏಕೆಂದರೆ ಮಹದೇವೇಗೌಡ ಅವರು ಕುರಿಗಳ ಮಾಲೀಕನಷ್ಟೆ ಅಲ್ಲ. ಲೇವಾದೇವಿ ವ್ಯವಹಾರ ನಡೆಸುತ್ತಿದ್ದ, ದಲ್ಲಾಳಿ ವ್ಯಾಪಾರ ಮಾಡುತ್ತಿದ್ದರು. ಹಾಗಾಗಿ ಅವರ ಬಳಿ ಹಣ ಇದ್ದೇ ಇರುತ್ತದೆ ಎಂದು ಲೆಕ್ಕಾಚಾರ ಹಾಕಿದ್ದ ಮಹೇಶ್, ಫೆಬ್ರವರಿ 3ರಂದು ಹಂಡ್ರಕಳ್ಳಿ ರಸ್ತೆ ಬದಿಯ ಜಮೀನೊಂದರಲ್ಲಿ ಕುರಿ ಮೇಯಿಸುತ್ತಿದ್ದ ಮಹದೇವೇಗೌಡನ ಮೇಲೆ ಎರಗಿ ಕೊಲೈಗೈದಿದ್ದರ. ಬಳಿಕ ಹಣ ಹಾಗೂ ಚಿನ್ನ ಉಂಗುರ ದೋಚಿಕೊಂಡು ಪರಾರಿಯಾಗಿದ್ದ ಎಂಬ ಸತ್ಯ ವಿಚಾರಣೆ ವೇಳೆ ಹೊರ ಬಿದ್ದಿದೆ.

ಕೊಲೆಗಾರ ಮಹೇಶ್ ಈ ಹಿಂದೆಯೂ ಇದೇ ರೀತಿಯ ಪ್ರಕರಣಗಳಲ್ಲಿ ಭಾಗಿಯಾಗಿರುವುದು ವಿಚಾರಣೆ ವೇಳೆ ಗೊತ್ತಾಗಿದೆ. ಅಷ್ಟೇ ಅಲ್ಲದೆ ಕುಡಿತಕ್ಕೆ ಹಣ ಇಲ್ಲದಿದ್ದಾಗ ಹೆತ್ತ ತಾಯಿಯ ಚಿನ್ನದ ಸರವನ್ನೆ ಕದ್ದಿದ್ದ. ಇದೀಗ ಕುಡಿತಕ್ಕಾಗಿ ಕುರಿಗಾಹಿಯನ್ನು ಕೊಲೆ ಮಾಡಿ ಜೈಲು ಪಾಲಾಗಿದ್ದಾನೆ.

Share This Article
Leave a Comment

Leave a Reply

Your email address will not be published. Required fields are marked *