ಚಾಮರಾಜನಗರ | ಸಂಪುಟ ಸಭೆಯಲ್ಲಿ 3,647 ಕೋಟಿ ವೆಚ್ಚದ ಯೋಜನೆಗಳಿಗೆ ಅಸ್ತು

Public TV
3 Min Read

– ಉಗ್ರದಾಳಿ ಖಂಡಿಸಿ ಖಂಡನಾ ನಿರ್ಣಯ

ಚಾಮರಾಜನಗರ: ಪ್ರಸಿದ್ಧ ಯಾತ್ರಾಸ್ಥಳವಾದ ಹನೂರು ತಾಲೂಕಿನ ಮಲೆ ಮಹದೇಶ್ವರ (Male Mahadeshwar) ಬೆಟ್ಟದಲ್ಲಿ ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ವಿವಿಧ ಇಲಾಖೆಗಳ 3,647 ಕೋಟಿ ರೂ. ಅನುಮೋದನೆ ನೀಡಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ (CM Siddaramaiah) ಹೇಳಿದರು.

ಸಂಪುಟ ಸಭೆ ಆರಂಭಕ್ಕೂ ಮುನ್ನ ಉಗ್ರದಾಳಿಯಲ್ಲಿ ಬಲಿಯಾದವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಮ್ಮು ಮತ್ತು ಕಾಶ್ಮೀರದ (Jammu Kashmir) ಪಹಲ್ಗಾಮ್‌ನಲ್ಲಿ (Pahalgam) ಮುಗ್ಧ ನಾಗರಿಕರ ಮೇಲೆ ಉಗ್ರರು ನಡೆಸಿದ ದಾಳಿಯನ್ನು ನಮ್ಮ ಸರ್ಕಾರವು ತೀವ್ರವಾಗಿ ಖಂಡಿಸಿದೆ. ಎಲ್ಲ ರೀತಿಯ ಉಗ್ರವಾದವನ್ನು ಬುಡಸಮೇತ ಕಿತ್ತು ಹಾಕಲು ಇಡೀ ದೇಶ ಒಂದಾಗಿ ನಿಂತು ಶ್ರಮಿಸಬೇಕು. ಈ ಘಟನೆಗೆ ಕಾರಣವಾಗಿರುವ ವೈಫಲ್ಯಗಳ ಕುರಿತು ಸಮರ್ಥವಾಗಿ ಮತ್ತು ಸಮರ್ಪಕವಾಗಿ ತನಿಖೆ ನಡೆಸಬೇಕು ಎಂದು ಖಂಡನಾ ನಿರ್ಣಯ ಕೈಗೊಳ್ಳಲಾಯಿತು ಎಂದರು.ಇದನ್ನೂ ಓದಿ: ಡಾ.ರಾಜ್ ಕುಮಾರ್ ಕನ್ನಡದ ಸಂಸ್ಕೃತಿಯ ಪ್ರತೀಕ – ಶಾಸಕ ರಿಜ್ವಾನ್ ಅರ್ಷದ್

ಇನ್ನೂ ಈ ಸಂಪುಟ ಸಭೆಯಲ್ಲಿ 78 ವಿಚಾರಗಳ ಬಗ್ಗೆ ಚರ್ಚೆಯಾಗಿದ್ದು, 3647.62 ಕೋಟಿ ರೂ. ಅನುದಾನವನ್ನು ಸಂಪುಟ ಅನುಮೋದನೆ ನೀಡಿದೆ ಎಂದರು.

ಗಡಿಜಿಲ್ಲೆಯಲ್ಲಿ ಮಾನವ-ಆನೆ ಸಂಘರ್ಷ ತಡೆಗೆ 210 ಕೋಟಿ ರೂ., ಕುಡಿಯುವ ನೀರಿನ ಯೋಜನೆಗೆ 315 ಕೋಟಿ ರೂ., ಕೊಳ್ಳೇಗಾಲದಲ್ಲಿ ಉಪವಿಭಾಗ ಆಸ್ಪತ್ರೆಯನ್ನು ಜಿಲ್ಲಾಸ್ಪತ್ರೆಯಾಗಿ ಪರಿವರ್ತನೆ ಮಾಡಿ 250 ಹಾಸಿಗೆ ಆಸ್ಪತ್ರೆ ನಿರ್ಮಾಣ ಮಾಡಲು ನಿರ್ಣಯ, ಹನೂರಿನಲ್ಲಿ ತಾಲೂಕು ಆಸ್ಪತ್ರೆ ನಿರ್ಮಾಣ, ಚಿಕ್ಕಲ್ಲೂರಲ್ಲಿ ಮಂಟೇಸ್ವಾಮಿ, ರಾಚಪ್ಪಾಜಿ ಅಭಿವೃದ್ಧಿ ಪ್ರಾಧಿಕಾರ ಪ್ರಾರಂಭಿಸಲು ತೀರ್ಮಾನ ಮಾಡಿರುವುದಾಗಿ ತಿಳಿಸಿದರು.

ಮೈಸೂರಿನ ಇಲವಾಲದಲ್ಲಿ ಕ್ರಿಕೆಟ್ ಸ್ಟೇಡಿಯಂಗೆ ನಮ್ಮ ಸರ್ಕಾರ ಸ್ಥಳ ನೀಡಲಿದ್ದು, ಅಲ್ಲಿ ಕ್ರಿಕೆಟ್ ಸಂಸ್ಥೆಯಿಂದ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣ ಆಗಲಿದೆ. ಬದನವಾಳು ಗ್ರಾಮದಲ್ಲಿ ಖಾದಿ ಗ್ರಾಮೋದ್ಯೋಗ ಅಭಿವೃದ್ಧಿಗೆ ಬದನವಾಳುವಿಗೆ 40 ಕೋಟಿ ರೂ. ಅನುದಾನ, ಮೈಸೂರು ವಿಮಾನ ನಿಲ್ದಾಣದ ರನ್ ವೇ ವಿಸ್ತರಣೆಗೆ ಜಾಗ ಖರೀದಿಸಿ ಕೊಡುವುದು, ಮೈಸೂರಿನ ಹಳೆಯ ಜಿಲ್ಲಾಧಿಕಾರಿ ಕಚೇರಿಯನ್ನು 37 ಕೋಟಿ ರೂ. ಖರ್ಚು ಮಾಡಿ ಮ್ಯೂಸಿಯಂ ಆಗಿ ಪರಿವರ್ತನೆ, ಚಾಮರಾಜನಗರದಲ್ಲಿ ನೂತನ ಪ್ರವಾಸಿ ಮಂದಿರ ಸ್ಥಾಪನೆ, ಚಾಮರಾಜನಗರ ಜಿಲ್ಲಾಕೇಂದ್ರಕ್ಕೆ ಒಳಚರಂಡಿ, ಕುಡಿಯುವ ನೀರಿನ ವ್ಯವಸ್ಥೆ, 15 ಕೋಟಿ ರೂ. ಅನುದಾನದಲ್ಲಿ ಚಾಮರಾಜನಗರ ಜಿಲ್ಲಾ ಕ್ರೀಡಾಂಗಣ ಅಭಿವೃದ್ಧಿ ಮಾಡಲು ಸಂಪುಟ ಒಪ್ಪಿಗೆ ಕೊಟ್ಟಿದೆ ಎಂದರು.ಇದನ್ನೂ ಓದಿ: ಕಾಶ್ಮೀರದ ಉಗ್ರರ ದಾಳಿ ಹೊಣೆಯನ್ನ ಕೇಂದ್ರ ಸರ್ಕಾರವೇ ಹೊರಬೇಕು: ಹೆಚ್.ಸಿ ಬಾಲಕೃಷ್ಣ

ಬಿಜೆಪಿಗೆ ತಿರುಗೇಟು:
ರಾಜ್ಯದ ನಾಲ್ಕು ಕಂದಾಯ ವಿಭಾಗದಲ್ಲಿ ಸಂಪುಟ ಸಭೆ ನಡೆಸಲು ಸರ್ಕಾರ ತೀರ್ಮಾನಿಸಿದ್ದು, ಈ ಹಿಂದೆ ಕಲಬುರಗಿಯಲ್ಲಿ ಕ್ಯಾಬಿನೆಟ್ ಮೀಟಿಂಗ್ ನಡೆದಿತ್ತು. ಇಂದು ಚಾಮರಾಜನಗರದಲ್ಲಿ ನಡೆಸಿದ್ದೇವೆ. ಬೆಳಗಾವಿ ವಿಭಾಗದಲ್ಲಿ ವಿಜಯಪುರ, ಬೆಂಗಳೂರು ವಿಭಾಗದ ಸಂಪುಟ ಸಭೆಯನ್ನು ನಂದಿಬೆಟ್ಟದಲ್ಲಿ ನಡೆಸಲು ತೀರ್ಮಾನಿಸಲಾಗಿದೆ ಎಂದರು. ಬಿಜೆಪಿ ಅವರು ಸರ್ಕಾರದಲ್ಲಿ ದುಡ್ಡಿಲ್ಲ ಎಂದು ಸುಳ್ಳು ಹೇಳುತ್ತಾರೆ, ಸರ್ಕಾರದ ವಿರುದ್ಧದ ದ್ವೇಷದಿಂದ ಈ ಸುಳ್ಳು ಹೇಳುತ್ತಿದ್ದು, ಸರ್ಕಾರದ ಬಳಿ ಹಣ ಇಲ್ಲದಿದ್ದರೇ 3,600 ಕೋಟಿ ರೂ. ವೆಚ್ಚದ ಯೋಜನೆಗಳಿಗೆ ಅನುಮೋದನೆ ಕೊಡಲು ಆಗುತ್ತಿತ್ತಾ ಎಂದು ಕಿಡಿಕಾರಿದರು.

ಕೃಷ್ಣದೇವರಾಯ ಸಮಾಧಿ ಅಭಿವೃದ್ಧಿ:
ವಿಜಯನಗರದ ಪ್ರಮುಖ ಚಕ್ರವರ್ತಿ ಕೃಷ್ಣದೇವರಾಯ ಅವರ ಸಮಾಧಿಯನ್ನು ಅಭಿವೃದ್ಧಿ ಮಾಡಲು ಸಂಪುಟ ಅನುಮೋದನೆ ನೀಡಿದ್ದು, ಪ್ರಸ್ತಾವನೆ ಸಲ್ಲಿಸುತ್ತಿದ್ದಂತೆ ಹಣವನ್ನು ಬಿಡುಗಡೆ ಮಾಡುತ್ತೇವೆ ಎಂದು ತಿಳಿಸಿದರು.

ಉಳುವವನೆ ಭೂಮಿಯ ಒಡೆಯ:
ಚಾಮರಾಜನಗರದಲ್ಲಿ ತಮ್ಮ ಹೆಸರಿನ ಆಸ್ತಿಗಳನ್ನು ಖಾತೆ ಮಾಡಿಕೊಡುವಂತೆ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಅವರು ಪತ್ರ ಬರೆದಿದ್ದು, ರೈತರು ಆತಂಕಕ್ಕೆ ಒಳಗಾಗಿದ್ದಾರೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, 60-70 ವರ್ಷಗಳಿಂದ ಅವರು ಉಳುಮೆ ಮಾಡುತ್ತಿದ್ದರೇ ಅವರೇ ಮಾಲೀಕರು, ಉಳುವವರೇ ಭೂಮಿ ಒಡೆಯರು, ಕಾನೂನಿನಡಿಯಲ್ಲೂ ಮಾಲೀಕತ್ವ ಬದಲಾವಣೆ ಮಾಡಲಾಗುವುದಿಲ್ಲ ಎಂದರು.

ಚಾಮರಾಜನಗರ-ಹೆಜ್ಜಾಲ ರೈಲು ಮಾರ್ಗಕ್ಕೆ ರಾಜ್ಯ ಸರ್ಕಾರ ಭೂಮಿ ಕೊಟ್ಟಿಲ್ಲ ಎಂಬ ಸೋಮಣ್ಣ ಹೇಳಿಕೆಗೆ ಪ್ರತಿಕ್ರಿಯಿಸಿ, ನಾವೇ ಭೂಮಿಯನ್ನು ಕೊಡುತ್ತೇವೆ, ಯೋಜನೆ ಕಾಮಗಾರಿ ಅರ್ಧ ಹಣವನ್ನು ಭರಿಸುತ್ತೇವೆ ಆದರೂ ಕೇಂದ್ರ ಸರ್ಕಾರ ಏನೂ ಮಾಡುವುದಿಲ್ಲ ಎಂದು ವಾಗ್ದಾಳಿ ನಡೆಸಿದರು.

ಒಟ್ಟಿನಲ್ಲಿ ಶ್ರೀ ಕ್ಷೇತ್ರದಲ್ಲಿ ಸಂಪುಟ ಸಭೆ ಸುಗಮವಾಗಿ ನಡೆದಿದ್ದು, ಜಿಲ್ಲೆ ಸೇರಿದಂತೆ ಹಳೇ ಮೈಸೂರು ಭಾಗದ ಅಭಿವೃದ್ಧಿಗೆ ಹೊಸ ವೇಗ ಬಂದಿದೆ.ಇದನ್ನೂ ಓದಿ: ನವನಿರ್ದೇಶಕನ ಸಿನಿಮಾಗೆ ಕೈಜೋಡಿಸಿದ ಶಿವಣ್ಣ

Share This Article