ಬಂಡೀಪುರ ಕಾಡಂಚಿನ ಶಾಲೆಗಳಲ್ಲಿ ಹೊಸ ಸಮಸ್ಯೆ -ವಿದ್ಯಾರ್ಥಿಗಳು ಬಂದ್ರೂ ಕ್ಲಾಸ್ ನಡೆಯೋದು ಮಧ್ಯಾಹ್ನವೇ

Public TV
2 Min Read

ಚಾಮರಾಜನಗರ: ಹುಲಿ ಸಂರಕ್ಷಿತ ಪ್ರದೇಶದ ಕಾಡಂಚಿನಲ್ಲಿ ಇರುವ ಸರ್ಕಾರಿ ಶಾಲೆಗಳಿಗೆ ಬರುವ ಬಹುತೇಕ ವಿದ್ಯಾರ್ಥಿಗಳು ಬಡತನದ ನೋವು ಉಂಡವರು. ಶಾಲೆಗಾದ್ರೂ ಸೇರಿಸಿ ಮಕ್ಕಳಿಗೆ ಜೀವನದ ಪಾಠ ಕಲಿಸಬೇಕು ಎಂಬುದು ಪೋಷಕರ ಅಭಿಲಾಷೆಯಾದ್ರೆ, ಬಸ್ ಸಮಸ್ಯೆಯಿಂದ ಅದು ಈಡೇರುತ್ತಿಲ್ಲ.

ನಗರ ಪ್ರದೇಶಗಳಲ್ಲಿ ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಲ್ಲ ಅಂತ ಒಂದು ಕಡೆ ಮುಚ್ಚುತ್ತಿದ್ದಾರೆ. ಆದರೆ ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕಾಡಂಚಿನ ಗ್ರಾಮಗಳ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳಿದ್ದರೂ ಸರಿಯಾಗಿ ಶಾಲೆಗಳು ನಡೀತಾ ಇಲ್ಲ. ಶಾಲೆಗಳಿಗೆ ಶಿಕ್ಷಕರು ಇಲ್ಲ ಅಂತೇನಲ್ಲ. ಮಕ್ಕಳೂ ಇದ್ದಾರೆ ಶಿಕ್ಷಕರೂ ಇದ್ದಾರೆ. ಆದರೆ ಶಾಲೆಗೆ ಬರೋಕೆ ಸಾರಿಗೆ ವ್ಯವಸ್ಥೆನೇ ಇಲ್ಲ. ಜಕ್ಕಳ್ಳಿ, ಎಲಚ್ಚಟ್ಟಿ, ಕಣಿಯನಪುರ, ಕಣಿಯನಪುರ ಕಾಲೋನಿ, ಮಂಗಲ, ಬಂಡಿಪುರ ಮತ್ತು ಮೇಲುಕಾಮನಹಳ್ಳಿ ಸೇರಿದಂತೆ ಒಟ್ಟು 7 ಸರ್ಕಾರಿ ಶಾಲೆಗಳಿವೆ. ಈ ಶಾಲೆಗಳಿಗೆ ಸುಮಾರು 20ಕ್ಕೂ ಹೆಚ್ಚು ಶಿಕ್ಷಕರು ಗುಂಡ್ಲುಪೇಟೆ ಪಟ್ಟಣದಿಂದಲೇ ಪ್ರತಿನಿತ್ಯ ಸಂಚರಿಸುತ್ತಾರೆ. ಶಾಲೆ ವೇಳೆಗೆ ಸರಿಯಾಗಿ ಬಸ್ ಬರದೇ ಮಧ್ಯಾಹ್ನದ ವೇಳೆಗೆ ಬರುತ್ತದೆ. ಹೀಗಾಗಿ ಸರಿಯಾದ ಸಮಯಕ್ಕೆ ಶಾಲೆ ನಡೆಯುತ್ತಿಲ್ಲ. ಮಧ್ಯಾಹ್ನದ ನಂತರ ಶಾಲೆ ಆರಂಭವಾಗುತ್ತಿದೆ ಎಂದು ಶಿಕ್ಷಕಿ ಲಕ್ಷ್ಮಿ ಹೇಳಿದ್ದಾರೆ.

ಸರ್ಕಾರಿ ಕಿರಿಯ ಮತ್ತು ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ಕಿಲೋಮೀಟರ್ ದೂರ ಕಾಡು ಪ್ರಾಣಿಗಳ ಭಯವನ್ನೂ ಲೆಕ್ಕಿಸದೇ ಶಾಲೆಗೆ ಬರುತ್ತಿದ್ದಾರೆ. ಆದರೂ ನಿಗದಿತ ಸಮಯಕ್ಕೆ ಶಾಲೆ ಆರಂಭವಾಗದೇ ಇರೋದಕ್ಕೆ ಪೋಷಕರು ಆಸಮಾಧಾನ ವ್ಯಕ್ತಪಡಿಸಿದ್ದಾರೆ. ರೆಸಾರ್ಟ್‍ಗಳಿಗೆ ಹೋಗುವ ಉದ್ಯೋಗಿಗಳಿಗಾಗಿ ಬಸ್ ವಿಳಂಬವಾಗಿ ಬರುತ್ತಿದೆ. ಗುಂಡ್ಲುಪೇಟೆ ಬಸ್ ಡಿಪೋದಿಂದ 9 ಗಂಟೆಗೆ ಬಸ್ ಬಿಟ್ಟರೇ 10 ಗಂಟೆ ವೇಳೆಗಾದ್ರೂ ಬಸ್ ಬಂದ್ರೆ ಶಾಲೆಗಳು ಹೆಚ್ಚು ಕಡಿಮೆ ಆರಂಭವಾಗುತ್ತದೆ. ಆದರೆ ರೆಸಾರ್ಟಿಗೆ ಬರೋ ಉದ್ಯೋಗಿಗಳು 11 ಗಂಟೆ ಬರುವ ಸಮಯ ಗಮನದಲ್ಲಿ ಇಟ್ಟುಕೊಂಡು ಬಸ್ ಬರುತ್ತಿದೆ. ಹೀಗಾಗಿ ಬಸ್ ನಿಗದಿತ ವೇಳೆಗೆ ಬರುವಂತೆ ಅನುಕೂಲ ಮಾಡಬೇಕು ಅಂತ ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಒಟ್ಟಾರೆ ಶಿಕ್ಷಣ ಸಚಿವರ ತವರು ಜಿಲ್ಲೆಯಲ್ಲೇ ಈ ದುಸ್ಥಿತಿ ಇರೋದು ವಿಪರ್ಯಾಸ. ಇನ್ಮುಂದೆಯಾದ್ರೂ ಸಚಿವರು ಇತ್ತ ಗಮನ ಹರಿಸಿ ಸಕಾಲದಲ್ಲಿ ಬಸ್ ವ್ಯವಸ್ಥೆ ಮಾಡಬೇಕಾಗಿದೆ.

Share This Article
Leave a Comment

Leave a Reply

Your email address will not be published. Required fields are marked *