ಮನೆ ಮುಂದೆ ಬೋರ್ಡ್ ಹಾಕಿ ಅಭಿಮಾನಿಗಳಲ್ಲಿ ಮನವಿ ಮಾಡಿದ ಡಿ ಬಾಸ್

Public TV
1 Min Read

ಬೆಂಗಳೂರು: ಮನೆ ಮುಂದೆ ಬೋರ್ಡ್ ಹಾಕಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ತಮ್ಮ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸದಂತೆ ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ.

ಫೆಬ್ರವರಿ 16ರಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಹುಟ್ಟುಹಬ್ಬ. ಡಿ ಬಾಸ್ ಜನ್ಮದಿನವನ್ನು ಅಭಿಮಾನಿಗಳು ದೊಡ್ಡ ಹಬ್ಬದಂತೆ ಆಚರಿಸುತ್ತಾರೆ. ಆದರೆ ಬ್ಯಾನರ್, ಕೇಕ್, ಹಾರ ತಂದು ಅದ್ಧೂರಿಯಾಗಿ ನನ್ನ ಹುಟ್ಟುಹಬ್ಬ ಆಚರಿಸಬೇಡಿ ಎಂದು ಅಭಿಮಾನಿಗಳಿಗೆ ದರ್ಶನ್ ಹೇಳಿದ್ದಾರೆ. ಇದನ್ನೂ ಓದಿ: ಬ್ರೈನ್ ಟ್ಯೂಮರ್‌ನಿಂದ ಕುಸಿದು ಬಿದ್ದ ಯುವತಿ – ದರ್ಶನ್ ಹುಟ್ಟುಹಬ್ಬಕ್ಕೆ ಇಟ್ಟಿದ್ದ ಹಣದಲ್ಲಿ ಅಭಿಮಾನಿಗಳಿಂದ ನೆರವು

ಈ ಬಗ್ಗೆ ಅಭಿಮಾನಿಗಳಿಗೆ ತಿಳಿಸಲು ದರ್ಶನ್ ತಮ್ಮ ಮನೆ ಮುಂದೆ ದೊಡ್ಡ ಬೋರ್ಡ್ ಹಾಕಿದ್ದು, ಅದರಲ್ಲಿ “ಬ್ಯಾನರ್, ಕೇಕ್ ಹಾಗೂ ಹಾರಗಳನ್ನು ದಯಮಾಡಿ ತರಬೇಡಿ. ಅದೇ ಹಣದಲ್ಲಿ ಈ ವರ್ಷವೂ ಸಹ ನಿಮ್ಮ ಕೈಲಾದ ಅಕ್ಕಿ, ಬೇಳೆ, ಸಕ್ಕರೆ ಹಾಗೂ ಇತರೆ ದವಸ-ಧಾನ್ಯಗಳನ್ನು ದಾನ ನೀಡಿ, ಅದನ್ನು ಒಗ್ಗೂಡಿಸಿ ಸೇರಬೇಕಾದ ಅನಾಥಾಶ್ರಮ, ವೃದ್ಧಾಶ್ರಮಗಳಿಗೆ ಪ್ರಾಮಾಣಿಕವಾಗಿ ತಲುಪಿಸುವ ಜವಾಬ್ದಾರಿ ನನ್ನದು” ಎಂದು ಪ್ರೀತಿಯ ಅಭಿಮಾನಿಗಳಲ್ಲಿ ದರ್ಶನ್ ವಿನಂತಿ ಮಾಡಿಕೊಂಡಿದ್ದಾರೆ.

“ಈ ಸಂಭ್ರಮಾಚರಣೆಯ ಸಂದರ್ಭದಲ್ಲಿ ನಮ್ಮ ಮನೆಯ ಅಕ್ಕ-ಪಕ್ಕದ ನಿವಾಸಿಗಳಿಗೆ ನಿಮ್ಮಿಂದ ತೊಂದರೆಯಾಗುವುದು, ಪಟಾಕಿ ಹೊಡೆಯುವುದು, ಕಾಂಪೌಂಡ್ ಹತ್ತುವುದು, ಹೂವು ಕುಂಡಗಳನ್ನು ಬೀಳಿಸುವುದು ಹಾಗೂ ಅವರ ಸ್ವತ್ತುಗಳಿಗೆ ಹಾನಿ ಮಾಡುವುದು. ಇಂತಹ ಅನುಚಿತ ವರ್ತನೆ ನಡೆಯಬಾರದು” ಎಂದು ದರ್ಶನ್ ಅಭಿಮಾನಿಗಳಿಗೆ ತಿಳಿಸಿದ್ದಾರೆ.

ಅಷ್ಟೇ ಅಲ್ಲದೆ “ನನ್ನ ಬಗ್ಗೆ ಇಷ್ಟೆಲ್ಲ ಪ್ರೀತಿ ಅಭಿಮಾನ ಇಟ್ಟಿರುವ ನೀವೆಲ್ಲ ಈ ನನ್ನ ಕೋರಿಕೆಯನ್ನು ನಡೆಸಿಕೊಡುವಿರಿ ಎಂದು ನಂಬಿರುತ್ತೇನೆ. ಸಂಘದ ಕಾರ್ಯಕರ್ತರಿಗೆ ಮತ್ತು ಪೊಲೀಸ್ ಸಿಬ್ಬಂದಿ ವರ್ಗದವರಿಗೆ ಸಹಕರಿಸಬೇಕಾಗಿ ವಿನಂತಿಸುತ್ತೇನೆ” ಎಂದು ದರ್ಶನ್ ಕೇಳಿಕೊಂಡಿದ್ದಾರೆ.

ಕಳೆದ ವರ್ಷದ ದರ್ಶನ್ ಮಾತಿಗೆ ಬೆಲೆಕೊಟ್ಟು ಅಭಿಮಾನಿಗಳು ಅಕ್ಕಿ, ಬೇಳೆ ಸೇರಿದಂತೆ ಹಲವು ಪದಾರ್ಥಗಳನ್ನು ದಾನ ನೀಡಿ ಡಿ ಬಾಸ್ ಹುಟ್ಟುಹಬ್ಬವನ್ನು ಅರ್ಥ ಪೂರ್ಣವಾಗಿ ಆಚರಿಸಿದ್ದರು. ಈ ವರ್ಷವು ಅದೇ ರೀತಿ ಅರ್ಥಪೂರ್ಣವಾಗಿ ದರ್ಶನ್ ಹುಟ್ಟುಹಬ್ಬ ಆಚರಣೆ ಮಾಡಲು ಸಜ್ಜಾಗಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *