ಸೆಡ್ಡು ಹೊಡೆದರೆ ಗೆದ್ದೇ ತೀರುವ ಹಠದ ಒಡೆಯ!

Public TV
2 Min Read

ದರ್ಶನ್ ಅಭಿಮಾನಿಗಳ ಪಾಲಿಗೆ ಹ್ಯಾಟ್ರಿಕ್ ಹಬ್ಬದಂತೆ ಬಿಂಬಿಸಲ್ಪಟ್ಟಿದ್ದ ಚಿತ್ರ ಒಡೆಯ. ಒಂದು ಪಕ್ಕಾ ಫ್ಯಾಮಿಲಿ ಕಂ ಮಾಸ್ ಸಬ್ಜೆಕ್ಟಿನೊಂದಿಗೆ ರೂಪುಗೊಂಡಿರೋ ಈ ಚಿತ್ರವೀಗ ಬಿಡುಗಡೆಯಾಗಿದೆ. ಸಂದೇಶ್ ಪ್ರೊಡಕ್ಷನ್ ಬ್ಯಾನರಿನಡಿಯಲ್ಲಿ ನಿರ್ಮಾಣಗೊಂಡಿರುವ ಈ ಸಿನಿಮಾ ಶುರುವಾತಿನಿಂದಲೂ ಮೂಡಿಸಿದ್ದ ನಿರೀಕ್ಷೆ, ಕುತೂಹಲಗಳದ್ದೊಂದು ಚೆಂದದ ಹಾದಿ. ದರ್ಶನ್ ಯಾವುದೇ ಸಿನಿಮಾಗಳಲ್ಲಿ ಅಭಿನಯಿಸಿದರೂ ಕೂಡಾ ಇಂಥಾದ್ದೊಂದು ಕ್ರೇಜ್ ಹುಟ್ಟಿಕೊಳ್ಳೋದು ಅಪರೂಪದ ವಿದ್ಯಮಾನವೇನಲ್ಲ. ಆದರೆ, ಒಡೆಯನ ವಿಚಾರದಲ್ಲಿ ಅದರ ತೀವ್ರತೆ ತುಸು ಹೆಚ್ಚೇ ಇತ್ತು. ಅದೆಲ್ಲವೂ ತಣಿಯುವಂತೆ, ನಿರೀಕ್ಷೆಗೂ ಮೀರಿದ ಶೈಲಿಯಲ್ಲಿ ಈ ಸಿನಿಮಾವೀಗ ಪ್ರೇಕ್ಷಕರನ್ನು ಎದುರುಗೊಂಡಿದೆ.

ಈಗಾಗಲೇ ದರ್ಶನ್ ಅವರ ಹಿಟ್ ಸಿನಿಮಾಗಳನ್ನು ನಿರ್ದೇಶನ ಮಾಡಿ ಸೈ ಅನ್ನಿಸಿಕೊಂಡಿದ್ದ ಎಂ.ಡಿ ಶ್ರೀಧರ್ ನಿರ್ದೇಶನ, ಈ ಹಿಂದೆಯೇ ಎರಡು ಯಶಸ್ವೀ ಚಿತ್ರಗಳನ್ನು ದರ್ಶನ್‍ರೊಂದಿಗೆ ಕೊಡಮಾಡೊರೋ ಸಂದೇಶ್ ಪ್ರೊಡಕ್ಷನ್ ಬ್ಯಾನರ್‍ನ ನಿರ್ಮಾಣ… ಇದೆಲ್ಲದರೊಂದಿಗೆ ಮತ್ತೊಂದು ಮಹಾ ಗೆಲುವು ದಕ್ಕಿಸಿಕೊಳ್ಳುವ ಆವೇಗದೊಂದಿಗೇ ಈ ಸಿನಿಮಾ ಸಾಗಿ ಬಂದಿತ್ತು. ಒಂದರೆ ಕ್ಷಣವೂ ಅತ್ತಿತ್ತ ಕದಲದಂಥಾ ಕ್ಯೂರಿಯಾಸಿಟಿ, ಸದಾ ಅಂತರ್ಗತ ಒರತೆಯಂತೆ ಫ್ಯಾಮಿಲಿ ಸೆಂಟಿಮೆಂಟಿನ ಪಸೆಯನ್ನು ಕಾಪಾಡಿಕೊಂಡು ಸಾಗುವ ಗಟ್ಟಿ ಕಥೆ ಮತ್ತು ಇದೆಲ್ಲದರ ಕೇಂದ್ರ ಬಿಂದುವಾಗಿ ಅಬ್ಬರಿಸೋ ಗಜೇಂದ್ರನ ಪಾತ್ರಗಳೆಲ್ಲವೂ ಸೇರಿ ಒಡೆಯ ಚಿತ್ರವನ್ನು ಬೇರೆಯದ್ದೇ ಮಟ್ಟಕ್ಕೇರಿಸಿ ಬಿಟ್ಟಿವೆ.

ಇಲ್ಲಿನ ಕಥೆಯ ಕೇಂದ್ರಬಿಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ನಿರ್ವಹಿಸಿರುವ ಗಜೇಂದ್ರನ ಪಾತ್ರ. ಗಜೇಂದ್ರ ಟ್ರೇಡಿಂಗ್ ಮತ್ತು ಟ್ರಾನ್ಸ್‍ಪೋರ್ಟ್ ಕಂಪೆನಿಯ ಮಾಲೀಕ. ಹೀಗೆ ತನ್ನ ವ್ಯವಹಾರದಲ್ಲಿ ಬ್ಯುಸಿಯಾಗಿದ್ದುಕೊಂಡೇ ವ್ಯಕ್ತಿಗತವಾಗಿ ತಮ್ಮಂದಿರ ಪ್ರೀತಿಯನ್ನೇ ಜಗತ್ತೆಂದುಕೊಂಡವನು ಗಜೇಂದ್ರ. ಹಾಗಂತ ಈತನದ್ದು ತನ್ನ ವ್ಯವಹಾರ ಮತ್ತು ವೈಯಕ್ತಿಕ ಬದುಕನ್ನೇ ಜಗತ್ತಾಗಿಸಿಕೊಂಡಿರೋ ವ್ಯಕ್ತಿತ್ವಲ್ಲ. ಗಜೇಂದ್ರ ಅನ್ಯಾಯ ಕಂಡರೆ ಕೆಂಡವಾಗಿ ಆರ್ಭಟಿಸುತ್ತಾನೆ. ಪ್ರೀತಿಯ ಮುಂದೆ ಕರಗುತ್ತಲೇ ರೈತರ ಪರವಾಗಿ ನಿಂತು ಬಡಿದಾಡುತ್ತಾನೆ. ಅನ್ಯಾಯವೆಸಗುವಾತ ಎಂಥಾದ್ದೇ ರಕ್ಕಸ ಪ್ರವೃತ್ತಿ ಹೊಂದಿದವನಾಗಿದ್ದರೂ ಸೆಡ್ಡು ಹೊಡೆದು ನಿಂತು ಮಣ್ಣು ಮುಕ್ಕಿಸುತ್ತಾನೆ.

ಇದಿಷ್ಟು ಕಥಾ ಎಳೆಯೇ ದರ್ಶನ್ ಒಡೆಯನಾಗಿ ಅದ್ಯಾವ ಪರಿಯಾಗಿ ಮಿಂಚಿದ್ದಾರೆಂಬುದನ್ನು ಸಾರಿ ಹೇಳುತ್ತದೆ. ಮುಂದಿನ ಕಥೆಯ ಎಳೆ ಹೇಳೋದಕ್ಕಿಂತ ಅದನ್ನು ಸಿನಿಮಾ ಮಂದಿರಗಳಲ್ಲಿ ನೋಡಿ ಖುಷಿ ಪಡುವುದೇ ಉತ್ತಮ. ಒಟ್ಟಾರೆಯಾಗಿ ಇಡೀ ಚಿತ್ರದಲ್ಲಿ ಮಾಸ್ ಮತ್ತು ಫ್ಯಾಮಿಲಿ ಸೆಂಟಿಮೆಂಟ್ ಕಥೆಗಳು ಒಟ್ಟೋಟ್ಟಾಗಿಯೇ ಸಾಗುತ್ತವೆ. ಅದೆಲ್ಲವೂ ಕಣ್ಮನ ತಣಿಸುವಂಥಾ ದೃಷ್ಯ ವೈಭವದ ಮೂಲಕ ಮತ್ತಷ್ಟು ಪರಿಣಾಮಕಾರಿಯಾಗಿ ಮೂಡಿ ಬಂದಿದೆ. ಈ ಮೂಲಕ ನಿರ್ದೇಶಕ ಎಂ.ಡಿ ಶ್ರೀಧರ್ ತಮ್ಮ ಕುಸುರಿ ಕಲೆಯ ಪಾಂಡಿತ್ಯವನ್ನು ಸಾಬೀತುಗೊಳಿಸಿದ್ದಾರೆ. ದರ್ಶನ್ ಅವರನ್ನು ಶ್ರೀಧರ್ ಇಲ್ಲಿ ಓರ್ವ ನಟನಾಗಿ ಮತ್ತೊಂದು ಮಟ್ಟಕ್ಕೇರುವಂತೆಯೇ ದೃಶ್ಯ ಕಟ್ಟಿದ್ದಾರೆ. ದರ್ಶನ್ ಗಜೇಂದ್ರನಾಗಿ ಅಬ್ಬರಿಸಿದ ರೀತಿಯ ಬಗೆಗಂತೂ ಯಾವ ವಿವರಣಗಳ ಅಗತ್ಯವೂ ಇಲ್ಲ.

ಹೀಗೆ ದರ್ಶನ್ ಅವರೊಂದಿಗೆ ಸಲೀಸಾಗಿ ಎಣಿಸಲೂ ಕಷ್ಟವಾಗುವಷ್ಟು ದೊಡ್ಡ ತಾರಾಗಣ ಸಾಥ್ ನೀಡಿದೆ. ಆ ಇಡೀ ತಾರಾಗಣವನ್ನು ಇಲ್ಲಿನ ದೃಷ್ಯಗಳಿಗೆ ಬೇಕಾದಂತೆ ದುಡಿಸಿಕೊಳ್ಳಲಾಗಿದೆ. ಇಲ್ಲಿ ಪ್ರತಿ ಪಾತ್ರಗಳೂ ಮನಸಲ್ಲಿ ನೆಲೆ ನಿಲ್ಲುತ್ತವೆ. ರವಿಶಂಕರ್, ಶರತ್ ಲೋಹಿತಾಶ್ವ ಎಂದಿನಂತೆಯೇ ವಿಲ್ಲನ್ನುಗಳಾಗಿ ಅಬ್ಬರಿಸಿದ್ದಾರೆ. ಸಾಮಾನ್ಯವಾಗಿ ಅಬ್ಬರದ ಪಾತ್ರಗಳಲ್ಲಿ ಕಾಣಿಸಿಕೊಳ್ಳೋ ದೇವರಾಜ್ ಇಲ್ಲಿ ಮತ್ತಷ್ಟು ಭಿನ್ನವಾದ ಪಾತ್ರಕ್ಕೆ ಜೀವ ತುಂಬಿದ್ದಾರೆ. ಒಟ್ಟಾರೆಯಾಗಿ ಒಡೆಯ ಎಲ್ಲ ವರ್ಗದ ಪ್ರೇಕ್ಷಕರೂ ಕೂತು ನೋಡಿ ಮನತಣಿಸಿಕೊಳ್ಳುವಂಥಾ ಸ್ವರೂಪದಲ್ಲಿಯೇ ಮೂಡಿ ಬಂದಿದೆ.

ರೇಟಿಂಗ್: 4 / 5

Share This Article
Leave a Comment

Leave a Reply

Your email address will not be published. Required fields are marked *