‘ವೆನಿಲ್ಲಾ’ ಟ್ರೇಲರ್ ನೋಡಿ ಹೊಸ ನಟ-ನಟಿಯರಿಗೆ ಕಿವಿಮಾತು ಹೇಳಿದ ದರ್ಶನ್

Public TV
2 Min Read

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಮಂಗಳವಾರ ಸಂಜೆ ಚಾಲೆಂಜಿಂಗ್ ಸ್ಟಾರ್ ದರ್ಶನ್ `ವೆನಿಲ್ಲಾ’ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿದರು.

ಟ್ರೇಲರ್ ವೀಕ್ಷಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್, ವೆನಿಲಾ ಚಿತ್ರ ತಂಡದ ಶ್ರಮವನ್ನು ಮುಕ್ತ ಕಂಠದಿಂದ ಶ್ಲಾಘಿಸಿದರು. ನನಗೆ ಮೊದಲು ಬಣ್ಣ ಹಚ್ಚಿದ ಗುರು ಮಂಡ್ಯ ರಮೇಶ್. ಈಗ ಅವರ ಗರಡಿಯಲ್ಲೇ ಬೆಳೆದ ಅವಿನಾಶ್ ಈ ಚಿತ್ರದ ನಾಯಕ. ಆತ ಕೂಡ ನಾಯಕ ನಟನಾಗಿ ಪರಿಚಯ ಆಗುತ್ತಿರೋದು ನನಗೆ ನಿಜಕ್ಕೂ ಸಂತಸ ತಂದಿದೆ ಎಂದು ದರ್ಶನ್ ಹೇಳಿದರು.

ಪ್ರತಿ ಸಿನಿಮಾದಲ್ಲೂ ನಾನು ಹೊಸಬ ಅಂತಾನೇ ಕೆಲಸದಲ್ಲಿ ಮಗ್ನರಾಗಬೇಕಿರೋದು ಬಹಳ ಮುಖ್ಯ ಎಂದು ಹೊಸ ನಟರಿಗೆ ದರ್ಶನ್ ಕಿವಿಮಾತು ಹೇಳಿದರು. ವೆನಿಲ್ಲಾ ಸಿನಿಮಾವನ್ನು ಮೈಸೂರು ಮೂಲದ ಜೈರಾಜ್ ನಿರ್ಮಿಸುತ್ತಿದ್ದು, ನಿರ್ದೇಶಕ ಜಯತೀರ್ಥ ಈ ಚಿತ್ರದ ನಿರ್ದೇಶನ ಮಾಡುತ್ತಿದ್ದಾರೆ.

ಈ ಚಿತ್ರದ ನಾಯಕ ನಟನಾಗಿ ನಿರ್ಮಾಪಕರ ಪುತ್ರ ಅವಿನಾಶ್ ಅಭಿನಯಿಸುತ್ತಿದ್ದು, ನಾಯಕಿಯಾಗಿ ಸ್ವಾತಿ ನಟಿಸುತ್ತಿದ್ದಾರೆ. ಈ ಇಬ್ಬರಿಗೂ ಇದು ಮೊದಲ ಸಿನಿಮಾ. ಟ್ರೇಲರ್ ರಿಲೀಸ್ ನಂತರ ಮಾಧ್ಯಮದವರ ಪ್ರಶ್ನೆಗಳಿಗೆ ಉತ್ತರಿಸಿದ ದರ್ಶನ್, ಕುರುಕ್ಷೇತ್ರ ಚಿತ್ರೀಕರಣ ಸಂಪೂರ್ಣ ಮುಕ್ತಾಯವಾಗಿದೆ. ತಮ್ಮ 51ನೇ ಸಿನಿಮಾ ಬಗ್ಗೆ ಶೀಘ್ರದಲ್ಲೇ ಹೇಳುತ್ತೇವೆ ಎಂದು ತಿಳಿಸಿದರು. ಮೂರು ವರ್ಷಗಳಿಂದ ಸಂಕ್ರಾಂತಿ ಆಚರಿಸಿರಲಿಲ್ಲ. ಈ ಬಾರಿ ಅವಕಾಶ ಒದಗಿಬಂತು. ಆದ್ದರಿಂದ ಈ ಬಾರಿ ಆಚರಿಸಿದ್ದೇನೆ. ಸಂಕ್ರಾಂತಿಯನ್ನು ರೈತರು ಹೇಗೆ ಆಚರಿಸುತ್ತಾರೆ ಅದೇ ರೀತಿ ನಾನು ಆಚರಿಸಿದ್ದೇನೆ ಎಂದು ದರ್ಶನ್ ಹೇಳಿದರು. ನಂತರ ಕಾರ್ ಖರೀದಿಯ ಬಗೆಗಿನ ಪ್ರಶ್ನೆಗೆ ಉತ್ತರಿಸಲು ದರ್ಶನ್ ನಿರಾಕರಿಸಿದರು.

ಸಂಕ್ರಾಂತಿ ಹಬ್ಬದ ದಿನದಂದು ದರ್ಶನ್ ಲ್ಯಾಂಬೋರ್ಗಿನಿ ಕಾರು ಖರೀದಿಸಿದ್ದರು. ಮೈಸೂರಿಗೆ ಹೊಸ ಕಾರಿನಲ್ಲಿ ಆಗಮಿಸಿ ನಂತರ ಚಾಮುಂಡಿ ಬೆಟ್ಟಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದ್ದರು. ಬೆಟ್ಟದ ಅರ್ಚಕರಿಂದ ಪೂಜೆ ಮಾಡಿಸಿ ಚಾಮುಂಡಿ ತಾಯಿಯ ದರ್ಶನ ಪಡೆದಿದ್ದರು.

ಬೆಂಗಳೂರಿನಲ್ಲಂತೂ ಕೆಲವೇ ಕೆಲವು ಗಣ್ಯರ ಬಳಿ ಈ ಕಾರ್ ಇದ್ದು, ಸ್ಯಾಂಡಲ್ ವುಡ್‍ನಲ್ಲಿ ಫಸ್ಟ್ ಟೈಂ ಲ್ಯಾಂಬೋರ್ಗಿನಿಗೆ ದರ್ಶನ್ ಒಡೆಯರಾಗಿದ್ದಾರೆ. ಈ ಹಿಂದೆ ದರ್ಶನ್ ತಮ್ಮ ಬಳಿಯಿದ್ದ ಹಮ್ಮರ್ ಕಾರನ್ನು ಮಾರಾಟ ಮಾಡಿದ್ದರು.

ಸದ್ಯ ದರ್ಶನ್ ಈಗ ಬಹುಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಮುನಿರತ್ನ ಕುರುಕ್ಷೇತ್ರ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ದೊಡ್ಡ ತಾರಾಗಣವಿರುವ ಈ ಸಿನಿಮಾ ಬಿಡುಗಡೆಗಾಗಿ ಕರ್ನಾಟಕ ಜನತೆ ಕಾಯುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *