ಮೋದಿ ಅಮೆರಿಕಗೆ ಹೋದ್ರೆ ಇಲ್ಲಿ ಯಾರೂ ಊಟ, ತಿಂಡಿ ಮಾಡಲ್ವಾ – ಸಂಸದರಿಗೆ ಸೂಲಿಬೆಲೆ ಪ್ರಶ್ನೆ

Public TV
4 Min Read

– ಮೋದಿ ಹೆಸರಿನಿಂದ ಗೆದ್ದವರಿಗೆ ಪ್ರಶ್ನಿಸುವ ಸಾಮರ್ಥ್ಯವಿಲ್ಲ
– ಬೇರೆಯವರು ಕೇಳುತ್ತಿಲ್ಲ, ಕನ್ನಡಿಗರೇ ಕೇಳುತ್ತಿದ್ದಾರೆ

ಬೆಂಗಳೂರು: ಬಿಜೆಪಿ ಸಂಸದರಿಗೆ ತಮ್ಮ ಜವಾಬ್ದಾರಿಯ ಅರಿವಿಲ್ಲ. ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರದ ನಡುವೆ ಕೊಂಡಿಯಾಗಿ ಇರುತ್ತೇವೆ ಅನ್ನೋ ಕಲ್ಪನೆಯೇ ಅವರಿಗಿಲ್ಲ ಎಂದು ಸಂಸದರ ವಿರುದ್ಧ ಚಿಂತಕ ಚಕ್ರವರ್ತಿ ಸೂಲಿಬೆಲೆ ಕಿಡಿಕಾರಿದ್ದಾರೆ.

ಇಂದು ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ತಮ್ಮನ್ನು ತಾವು ಸಮರ್ಥಿಸಿಕೊಳ್ಳುವುದು ಸರಿ. ಆದರೆ ಎಲ್ಲವನ್ನೂ ಅಂದರೆ ನೀವು ಮಾಡಿದ ತಪ್ಪುಗಳನ್ನು ಕೂಡ ಸಮರ್ಥಿಸಿಕೊಳ್ಳುವ ಮೂಲಕ ಈ ಮಟ್ಟಿಗೆ ಇಳಿದಿರುವುದು ಬೇಸರದ ಸಂಗತಿಯಾಗಿದೆ ಎಂದರು.

ಇಂದು ಬೆಳಗ್ಗಿನಿಂದ ನಾನು ಕೂಡ ಸಂಸದರ ಹೇಳಿಕೆಗಳನ್ನು ಗಮನಿಸುತ್ತಿದ್ದೇನೆ. ಮೋದಿ ಅಮೆರಿಕಕ್ಕೆ ಹೋಗಿದ್ದಾರೆ. ಹೀಗಾಗಿ ಪರಿಹಾರ ಕೊಡುವುದು ವಿಳಂಬವಾಗಿದೆ ಎನ್ನುವುದು ಹಾಸ್ಯಸ್ಪದ ಸಂಗತಿಯಾಗಿದೆ. ಹಾಗಿದ್ದರೆ ಮೋದಿಯವರು ಅಮೆರಕದಲ್ಲಿದ್ದಾಗ ಇಲ್ಲಿ ಯಾರು ಊಟ, ತಿಂಡಿ ಮಾಡುತ್ತಿಲ್ವಾ ಎಂದು ಪ್ರಶ್ನಿಸಿದರು. ಇದರಿಂದ ಮೋದಿ ಇಲ್ಲ ಅಂದರೆ ನಾವೇನೂ ಮಾಡೋದೇ ಇಲ್ಲ. ಮೋದಿ ಇಲ್ಲಿದ್ದು, ದಂಡ ಹಿಡಿದುಕೊಂಡು ಕುಳಿತಿದ್ದರೆ ಮಾತ್ರ ನಾವೆಲ್ಲ ಕೆಲಸ ಮಾಡುತ್ತೇವೆ ಅನ್ನೋ ಕೆಟ್ಟ ಮೆಸೇಜ್ ಕೊಡುತ್ತಿದ್ದಾರೆ. ಈ ಸಂದೇಶ ತೀರಾ ಹಾಸ್ಯಸ್ಪದವಾಗಿದೆ ಎಂದು ಹೇಳಿದರು.

ಬೇರೆ ರಾಜ್ಯಕ್ಕೆ ಕೊಟ್ಟಿಲ್ಲ ಎಂಬ ಸಂಸದರ ಹೇಳಿಕೆಗೆ ಪ್ರತಿಕ್ರಿಯಿಸಿದ ಸೂಲಿಬೆಲೆ, ಬೇರೆ ಯಾವ ರಾಜ್ಯದವರೂ ಕೇಳಿಲ್ಲ. ನೀವು ಮಾತ್ರ ಯಾಕೆ ಕೇಳಿತ್ತೀರಿ ಅಂತ ಮತ್ತೊಬ್ಬ ಸಂಸದ ಹೇಳಿರುವುದನ್ನು ನಾನು ಕೇಳಿದೆ. ಕೇರಳಕ್ಕೆ ಪ್ರವಾಹ ಬಂದ ಎರಡೇ ದಿನದಲ್ಲಿ ಘೋಷಣೆಯಾಯಿತು. ಅದೇ ಕೊಡಗಿಗೆ ತರಬೇಕಾದರೆ ತಿಪ್ಪರ್ಲಾಗ ಹೊಡಿಬೇಕಾಯಿತು. ಆ ಬಳಿಕ ಕರ್ನಾಟಕಕ್ಕೆ ಮಾತ್ರ ಘೋಷಣೆ ತುಂಬಾ ತಡವಾಗುತ್ತದೆ. ಆ ಕಡೆ ಬಿಹಾರದ ಮುಖ್ಯಮಂತ್ರಿಗಳ ಜೊತೆ ಮಾತನಾಡುತ್ತಾರೆ. ಅಲ್ಲಿ ಅಷ್ಟೊಂದು ಒತ್ತಡವಿರುತ್ತದೆ. ಹೀಗಾಗಿ ಅಲ್ಲಿಯ ಸಿಎಂ ಜೊತೆ ಮಾತುಕತೆ ನಡೆಸುತ್ತಾರೆ. ಆದರೆ ನಮ್ಮವರಲ್ಲಿ ಯಾರೂ ಒತ್ತಡ ಹಾಕುವವರೇ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಇದನ್ನೂ ಓದಿ: ಪ್ರಧಾನಿ ಅಮೆರಿಕಕ್ಕೆ ಹೋಗಿದ್ದರಿಂದ ನೆರೆ ಪರಿಹಾರ ಪ್ರಕಟಿಸಲು ತಡವಾಗಿದೆ – ಪ್ರಹ್ಲಾದ್ ಜೋಷಿ

ಕೇರಳಕ್ಕೆ ತಕ್ಷಣಕ್ಕೆ ಪರಿಹಾರ ಘೋಷಣೆಯಾಗುತ್ತದೆ. ಇಷ್ಟು ತಾತ್ಕಾಲಿಕ ಪರಿಹಾರ ಎಂದು ಆ ಕೂಡಲೇ ಹೇಳಲಾಗಿದೆ. ಅದು ಮಾತ್ರ ಹೇಗಾಯಿತು ಎಂದು ಮತ್ತೆ ಪ್ರಶ್ನೆಹಾಕಿದ ಅವರು 2009ರಲ್ಲಿ ಆಗಿದ್ದಾಗ ತಕ್ಷಣಕ್ಕೆ ಪರಿಹಾರ ರಿಲೀಸ್ ಮಾಡಲಾಯಿತು. ಅಂದು ಯಾಕೆ 2,3 ತಿಂಗಳು ತಡವಾಗಿಲ್ಲ. ನಮಗೂ ಅರ್ಥಗುತ್ತದೆ. ಉದಾಹರಣೆಗೆ 20 ಸಾವಿರ ಕೋಟಿ ನಷ್ಟವಾದರೆ 200 ಕೋಟಿ ರೂ ತಾತ್ಕಾಲಿಕ ಪರಿಹಾರ ಘೋಷಣೆ ಮಾಡಲು ಸಾಧ್ಯವಿಲ್ಲವೇ?. ಒಟ್ಟಿನಲ್ಲಿ ತಾತ್ಕಾಲಿಕ ಪರಿಹಾರ ಘೋಷಣೆ ಮಾಡಲೂ ಸಾಧ್ಯವಿಲ್ಲ ಅಂದರೆ ಮೋದಿಯವರ ತಪ್ಪು ಹೌದೋ ಅಲ್ಲವೋ ಗೊತ್ತಿಲ್ಲ. ಆದರೆ ಸಂಸದರಿಗೆ ಕೇಳುವ ಸಾಮರ್ಥ್ಯ ಕಳೆದು ಹೋಯಿತು ಅನ್ನೋದು ಸ್ಪಷ್ಟವಾಗುತ್ತದೆ ಎಂದು ಹೇಳಿದರು.

ನಿರ್ಮಲಾ ಸೀತಾರಾಮನ್ ಅವರು ತುಂಬಾ ಡೀಸೆಂಟ್ ಹಾಗೂ ಶ್ರದ್ಧೆಯಿಂದ ಟ್ವೀಟ್ ಮಾಡಿದ್ದರು. ನಿನ್ನೆ ಅವರು ಟ್ವೀಟ್ ಮಾಡುವವರೆಗೂ ಇವರಿಗೆ ಏನಾಗ್ತಿದೆ ಅಂತ ಗೊತ್ತಿರಲಿಲ್ಲ. ಸೋ ಕಾಲ್ಡ್ ಮಿನಿಸ್ಟರ್ ಹಾಗೂ ನರೇಂದ್ರ ಮೋದಿಯವರ ಟೀಂ ನಲ್ಲಿರುವ ಸದಾನಂದ ಗೌಡರು, ಪರಿಹಾರದ ವಿಚಾರದಲ್ಲಿ ದಾರಿ ತಪ್ಪಿಸುತ್ತಿದ್ದಾರೆ ಎಂದು ನಿನ್ನೆ ರಾತ್ರಿ ಟ್ವೀಟ್ ಮಾಡಿದ್ದಾರೆ. ಇಲ್ಲಿ ದಾರಿ ತಪ್ಪಿಸುವವರು ಯಾರು ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ:  ಯಾರೂ ಕಿಸೆಯಿಂದ ಪರಿಹಾರ ಕೊಡಲು ಆಗಲ್ಲ: ಪ್ರತಾಪ್ ಸಿಂಹ

ನನ್ನ ಮನೆ ಬಿತ್ತು ಅಂತ ಕಣ್ಣೀರು ಹಾಕುತ್ತಿರುವವನಾ, ನನಗೆ ಸ್ಕೂಲಿಗೆ ಹೋಗಲು ಪುಸ್ತಕವಿಲ್ಲ ಎಂದು ಹೇಳುತ್ತಿರುವ ಮಗುನಾ, ಪತ್ರಕರ್ತರು ಅಲ್ಲಿ ಹೋಗಿ ಪ್ರತಿ ದಿನ ವಿಡಿಯೋ ಮಾಡಿ ತೋರಿಸುತ್ತಿದ್ದಾರೆ ಅವರಾ ಅಥವಾ ಲಕ್ಷಾಂತರ ಜನ ಟ್ವೀಟ್ ಮಾಡಿಕೊಂಡು ನರೇಂದ್ರ ಮೋದಿಯವರಿಗೆ ನೀವು ಪರಿಹಾರ ಕೊಡಬೇಕು ಎಂದು ಕೇಳುತ್ತಿದ್ದಾರಲ್ವ ಅವರಾ ದಾರಿ ತಪ್ಪಿಸುವವರು ಅಥವಾ ಇಡೀ ಕನ್ನಡಿಗರೇ ಸುಳ್ಳರಾ ಎಂದು ಪ್ರಶ್ನೆಗಳ ಮೇಲೆ ಪ್ರಶ್ನೆಗಳನ್ನು ಹಾಕಿದರು.

ಪ್ರಧಾನಿ ದೇವರಿದ್ದಂತೆ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ಸೂಲಿಬೆಲೆ, ಹೀಗಂತ ಪ್ರಧಾನಿಗಳು ಹೇಳಲ್ಲ, ಇವರುಗಳಿಗೆಲ್ಲ ಪ್ರಧಾನಿಗಳ ಮೂರ್ತಿಯನ್ನು ಮುಂದಿಟ್ಟುಕೊಂಡು ಹಿಂದೆ ಮುಚ್ಚಿಟ್ಟುಕೊಂಡಿರಬೇಕು ಅಂತ ಇದೆ. ಪ್ರಧಾನಿಗಳ ಕುರಿತು ಯಾರಾದರೂ ಮಾತನಾಡಿದರೆ ಜನ ಒಗ್ಗಟ್ಟಾಗಿ ಬಿಡುತ್ತಾರೆ ಅನ್ನೋದು ಅವರಿಗೂ ಗೊತ್ತಿರಲಿ. ಈ ನಾಡಿನ ಜನರು ತುಂಬಾ ಪ್ರಜ್ಞಾವಂತರಿದ್ದಾರೆ. ಪ್ರಧಾನಿಗಳ ಒಳ್ಳೆಯ ಕೆಲಸಗಳನ್ನು ಹೆಮ್ಮೆಯಿಂದ, ಪ್ರೀತಿಯಿಂದ ಅಭಿನಂದಿಸುತ್ತೇವೆಯೋ, ಹಾಗೆಯೇ ಇಂತಹ ವಿಚಾರಗಳಲ್ಲಿ ಅವರನ್ನು ಪ್ರಶ್ನಿಸುವ ಅಧಿಕಾರವೂ ನಮಗಿದೆ ಎಂದರು. ಇದನ್ನೂ ಓದಿ: ಸಿಂಹಗೆ ಮೋದಿ ದೇವ್ರು ಇರ್ಬೋದು, ಬೇಕಾದ್ರೆ ಪೂಜೆ ಮಾಡ್ಲಿ – ಆದ್ರೆ ಮೊದ್ಲು ಪರಿಹಾರ ಕೊಡ್ಲಿ: ಕಾಂಗ್ರೆಸ್ ಕಿಡಿ

ಅವರು ಕೇಳಬೇಕು, ಕೇಳಿದಾಗಲೇ ನಮಗೆ ಮಾಡಲು ಸಾಧ್ಯವಾಗುವುದು. ನಾವು ತಪ್ಪಿದ್ದರೆ ಅವರು ಹೇಳಬೇಕು ಎಂದು ಸಿಟಿ ರವಿ ಅವರು ಸುಂದರವಾದ ಕಾಮೆಂಟ್ ಕೊಟ್ಟಿದ್ದಾರೆ. ಇವರ ಈ ಹೇಳಿಕೆ ನನಗೆ ತುಂಬಾ ಇಷ್ಟವಾಯಿತು. ಇಂತಹ ಒಂದು ಡೀಸೆಂಟ್ ಹೇಳಿಕೆ ಕೊಡಬೇಕು ಎಂಬುದು ಒಬ್ಬ ಸಂಸದರಲ್ಲೂ ಇಲ್ಲ. ನಾವು ತಪ್ಪು ಮಾಡಿದ್ದೇವೆ. ಪರಿಹಾರ ಕೊಡಿಸಲು ಒತ್ತಡ ಹಾಕುತ್ತೇವೆ ಅನ್ನೋ ಮಾತುಗಳನ್ನು ಹೇಳುವ ಪ್ರಜ್ಞೆಯೂ ಯಾರಿಗೂ ಇರದೇ ಇರುವುದು ದುರ್ದೈವದ ಸಂಗತಿಯಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ: ನೆರೆ ಪರಿಹಾರಕ್ಕೆ ಯಾರ ಶಿಫಾರಸ್ಸು ಬೇಕಾಗಿಲ್ಲ: ಬಿಎಸ್‍ವೈ ಕಿಡಿ

ಒಟ್ಟಿನಲ್ಲಿ ಸ್ವಂತ ಬಲದಿಂದ ಗೆದ್ದಿದ್ದರೆ ಈ ಸಮಸ್ಯೆ ಇರಲಿಲ್ಲ. ಇವರೆಲ್ಲ ಮೋದಿ ಹೆಸರಲ್ಲಿ ಗೆದ್ದುಕೊಂಡು ಬಂದಿದ್ದಾರೆ. ಹೀಗಾಗಿ ಮೋದಿ ವಿರುದ್ಧ ಮಾತನಾಡಿದರೆ ಉಳಿಗಾಲವಿಲ್ಲ ಎಂಬುದು ಅವರಿಗೆ ತಿಳಿದಿದೆ. ಅವರ ಪ್ರಕಾರ, ಇಲ್ಲಿ ಯಾರೆಲ್ಲ ಪರಿಹಾರ ಕೇಳುತ್ತಾರೆ, ಅವರೆಲ್ಲ ಮೋದಿ ವಿರೋಧಿಗಳು ಎಂದು ಬಿಂಬಿಸುವ ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಇಂದು ಪರಿಹಾರ ಕೇಳುತ್ತಿರುವವರು ಯಾವುದೋ ಬೇರೆ ಪಕ್ಷದವರು ಅಲ್ಲ. ಬದಲಾಗಿ ಕನ್ನಡಿಗನಾಗಿ ಕೇಳುತ್ತಿದ್ದಾರೆ ಎಂಬುದು ಎಲ್ಲಾ ಸಂಸದರಿಗೂ ನೆನಪಿನಲ್ಲಿರಲಿ ಎಂದು ಹೇಳಿದ್ದಾರೆ.

ಪರಿಹಾರ ಕೇಳುವವರಲ್ಲಿ ಬಹುತೇಕರು ಮೋದಿ ಗೆದ್ದು ಬರಲಿ ಎಂದು ಓಡಾಡಿದವರಾಗಿದ್ದಾರೆ. ಇಂದು ಅವರೇ ಎದ್ದು ನಿಂತು ಇಂದು ಪರಿಹಾರ ಕೊಡಿ ಎಂದು ಕೇಳುತ್ತಿದ್ದಾರೆ. ಹೀಗಾಗಿ 25 ಜನ ಸಂಸದರು ಮೋದಿ, ಅಮಿತ್ ಶಾ, ಹಣಕಾಸು ಸಚಿವರ ಮುಂದೆ ಕೂತು ದಯಮಾಡಿ ಮಾಡಿಕೊಡಿ ಎಂದು ಕೇಳಿಕೊಳ್ಳಲು ಒಂದು ಒಳ್ಳೆಯ ಅವಕಾಶ ಇದೆ. ಇಂತಹ ಅವಕಾಶವನ್ನು ಬಿಟ್ಟುಕೊಡಬೇಡಿ ಎಂದು ಸಂಸದರಿಗೆ ಸೂಲಿಬೆಲೆ ಸಲಹೆ ನೀಡಿದರು. ಇದನ್ನೂ ಓದಿ: ಸದಾನಂದ ಗೌಡ್ರ ವಿರುದ್ಧ ಸೂಲಿಬೆಲೆ ಆಕ್ರೋಶ

Share This Article
Leave a Comment

Leave a Reply

Your email address will not be published. Required fields are marked *