ರಾಜ್‌ ಬಿ ಶೆಟ್ಟಿ ಜೊತೆ ಕೈಜೋಡಿಸಿದ ನಟಿ- ‘ರೂಪಾಂತರ’ ಚಿತ್ರದಲ್ಲಿ ಚೈತ್ರಾ

Public TV
2 Min Read

ಚಿಟಿ ಚಿಟಿ ಜಿನುಗುವ ಮಳೆಯಲ್ಲಿ ಹಾಡೊಂದನ್ನು ಕೇಳುವುದು ಯಾರಿಗೆ ತಾನೆ ಇಷ್ಟವಿಲ್ಲ. ಇದನ್ನು ಚೆನ್ನಾಗಿ ಅರಿತಂತಿದೆ ‘ರೂಪಾಂತರ’ ಚಿತ್ರತಂಡ. ಹೌದು ‘ಒಂದು ಮೊಟ್ಟೆಯ ಕಥೆ’ಯ ಮೂಲಕ ಚಿತ್ರರಂಗಕ್ಕೆ ಬಂದು ಜನರ ಮೆಚ್ಚುಗೆ ಗಳಿಸಿದ ಅದೇ ಚಿತ್ರತಂಡ ‘ರೂಪಾಂತರ’ (Roopantara Film) ಎನ್ನುವ ಸಿನಿಮಾ ಮಾಡಿ ಬಿಡುಗಡೆಗೆ ಸಿದ್ಧವಾಗಿದ್ದು, ಅದರ ‘ಕಿತ್ತಾಳೆ’ ಎನ್ನುವ ಹಾಡನ್ನು ಬಿಡುಗಡೆಗೊಳಿಸುವ ಮೂಲಕ ಸಿನಿರಸಿಕರ, ಸಂಗೀತ ಆಸ್ವಾದಕರ ಮನವನ್ನು ತಣಿಸಿದೆ.

‘ಒಂದು ಮೊಟ್ಟೆಯ ಕಥೆ’ಯ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ರಾಜ್ ಬಿ ಶೆಟ್ಟಿ ಮತ್ತು ಮಿಧುನ್ ಮುಕುಂದನ್ ಯಶಸ್ವಿ ಜೋಡಿಯಾಗಿ ಅನೇಕ ಹಿಟ್ ಹಾಡುಗಳನ್ನು ಕೊಡುತ್ತಾ ಬಂದಿದ್ದು, ಈಗ ‘ರೂಪಾಂತರ’ ಚಿತ್ರದ ಕಿತ್ತಾಳೆ ಹಾಡನ್ನು ಬಿಡುಗಡೆಗೊಳಿಸುವ ಮೂಲಕ ಮತ್ತೊಮ್ಮೆ ಎಲ್ಲರ ಗಮನವನ್ನು ಸೆಳೆದಿದ್ದಾರೆ. ಈ ಹಿಂದೆ ಅನೇಕ ಚಿತ್ರಗಳಿಗೆ ರಾಜ್ ಸಾಹಿತ್ಯ ಬರೆದು ಮಿಧುನ್ ಸಂಗೀತ ನೀಡಿದ್ದರು. ಈ ಹಾಡು ಇಬ್ಬರಿಗೂ ಚಿತ್ರರಂಗದಲ್ಲಿ ಹೊಸ ಗುರುತನ್ನು ನೀಡಲಿದೆ. ಮಿಧುನ್ ಅವರ ಸಂಗೀತಕ್ಕೆ ರಾಜ್ ಅವರ ರಸಭರಿತ ಸಾಹಿತ್ಯ ಸಿಹಿಯಾದ ಕಿತ್ತಾಳೆ ಹಣ್ಣನ್ನು ಸವಿದಂತ ಅನುಭವವನ್ನು ನೀಡುತ್ತಿದೆ ಎಂದು ಅನೇಕ ಅಭಿಮಾನಿಗಳು ಕಾಮೆಂಟ್ ಮಾಡಿದ್ದಾರೆ. ಗರುಡ ಗಮನ ವೃಷಭ ವಾಹನ, ಮಾದೇವ ಖ್ಯಾತಿಯ ಗಾಯಕಿ ಚೈತ್ರ ಜೆ ಆಚಾರ್ (Chaithra J Achar) ಅವರು ಈ ಹಾಡಿಗೆ ಧ್ವನಿ ನೀಡಿದ್ದು ಇನ್ನೊಂದು ಹೈಲೈಟ್.

ಮೊನ್ನೆಯಷ್ಟೆ ಫಸ್ಟ್ ಲುಕ್ ಪೋಸ್ಟರ್‌ನ ಮೂಲಕ ಗಮನ ಸೆಳೆದ ಮಿಥಿಲೇಶ್ ಎಡವಲತ್ ಅವರ ಚೊಚ್ಚಲ ಚಿತ್ರ ಇದಾಗಿದ್ದು, ಕನ್ನಡ ಚಿತ್ರರಂಗದಲ್ಲೊಂದು ಹೊಸ ಅಲೆಯನ್ನು ಸೃಷ್ಟಿ ಮಾಡುವ ಎಲ್ಲಾ ಲಕ್ಷಣ ಕಾಣಿಸುತ್ತಿದೆ. ರಾಜ್ ಬಿ ಶೆಟ್ಟಿಯವರು (Raj B Shetty) ಈ ಚಿತ್ರದಲ್ಲಿ ಪ್ರಮುಖ ಪಾತ್ರವೊಂದರಲ್ಲಿ ನಟಿಸಿದ್ದಾರೆ. ಅಲ್ಲದೆ, ಸಂಭಾಷಣೆಯನ್ನು ಬರೆದಿದ್ದಾರೆ. ಜೊತೆಗೆ ತಮ್ಮ ನಿರ್ಮಾಣ ಸಂಸ್ಥೆಯಾದ ಲೈಟರ್ ಬುದ್ಧ ಫಿಲ್ಮ್‌ ಮೂಲಕ ತೆರೆಗೂ ತರುತ್ತಿದ್ದಾರೆ. ‘ಒಂದು ಮೊಟ್ಟೆಯ ಕಥೆ’ಯ ನಿರ್ಮಾಪಕರಾದ ಸುಹಾನ್ ಪ್ರಸಾದ್ ಈ ಚಿತ್ರದ ನಿರ್ಮಾಣವನ್ನು ಮಾಡಿದ್ದಾರೆ. ಪ್ರವೀಣ್ ಶ್ರೀಯಾನ್ ಛಾಯಗ್ರಹಣ, ಮಿಧುನ್ ಮುಕುಂದನ್ ಸಂಗೀತವನ್ನೂ ನೀಡುವ ಮೂಲಕ ಈ ಜೋಡಿ ಮತ್ತೊಮ್ಮೆ ಪ್ರೇಕ್ಷಕರನ್ನು ರಂಚಿಸಲು ಹೊರಟಿದೆ.

ಉಳಿದಂತೆ ಸೋಮಶೇಖರ್ ಬೋಲೇಗಾಂವ್, ಲೇಖಾ ನಾಯ್ಡು, ಹನುಮ್ಮಕ್ಕ, ಭರತ್ ಜಿ.ಬಿ, ಅಂಜನ್ ಭಾರಧ್ವಾಜ್ ಮತ್ತಿರರ ತಾರಗಣ ಚಿತ್ರಕ್ಕಿದೆ. ಸಂಕಲನ ಭುವನೇಶ್ ಮಣಿವಣ್ಣನ್, ನಿರ್ಮಾಣ ವಿನ್ಯಾಸ ಪ್ರವೀಣ್ ಮತ್ತು ಅರ್ಷದ್ ನಾಕ್ಕೋತ್ ಅವರದ್ದಾಗಿದೆ. ಇದನ್ನೂ ಓದಿ:‘ಕಲ್ಕಿ 2898 ಎಡಿ’ ಚಿತ್ರ ನೋಡಲು ಜಪಾನ್‌ನಿಂದ ಹೈದರಾಬಾದ್‌ಗೆ ಬಂದ ಪ್ರಭಾಸ್ ಫ್ಯಾನ್ಸ್

ಹಾಡು ಲೈಟರ್ ಬುದ್ಧ ಸಂಸ್ಥೆಯ ಯೂಟ್ಯೂಬ್ ಚಾನೆಲ್‌ನಲ್ಲಿ ಲಭ್ಯವಿದ್ದು, ಈ ಹೊಸ ಪ್ರಯತ್ನವನ್ನು ಕನ್ನಡಿಗರು ಸ್ವಾಗತಿಸುತ್ತಾರೆ ಎಂಬುದು ಸಂಸ್ಥೆಯ ಕಾರ್ಯಕಾರಿ ನಿರ್ದೇಶಕರಾದ ಬಾಲಕೃಷ್ಣ ಅರ್ವಾಂಕರ್ ಅವರ ಅಭಿಪ್ರಾಯ.

Share This Article