ಧೋನಿಯ ಸರಳತೆಯನ್ನು ಹೊಗಳಿದ ಚಹಲ್

Public TV
2 Min Read

ಮುಂಬೈ: ಸಂದರ್ಶನವೊಂದರಲ್ಲಿ ಸ್ಪಿನ್ನರ್ ಯಜುವೇಂದ್ರ ಚಹಲ್ ಧೋನಿಯವರ ಸರಳತೆಯನ್ನು ಕುರಿತು ಹಾಡಿ ಹೊಗಳಿದ್ದಾರೆ. ನಟ ಗೌರವ್ ಕಪೂರ್ ನಡೆಸಿಕೊಡುವ “ಬ್ರೇಕ್‍ಫಾಸ್ಟ್ ವಿತ್ ಚಾಂಪಿಯನ್ಸ್” ಸಂದರ್ಶನದಲ್ಲಿ ಮಾತನಾಡುವಾಗ ಧೋನಿಯವರ ಕುರಿತು ಕೆಲವು ನೆನಪುಗಳನ್ನು ಹಂಚಿಕೊಂಡಿದ್ದಾರೆ.

ನನ್ನ ಜೀವನದ ಮರೆಯಲಾಗದ ಘಟನೆಯಂದರೆ ಕ್ರಿಕೆಟ್ ದಿಗ್ಗಜ ಧೋನಿಯವರಿಂದ ಏಕದಿನ ಪಂದ್ಯಕ್ಕೆ ಕ್ಯಾಪ್ ಪಡೆದಿದ್ದು, ನನ್ನ ಮೊದಲ ಏಕದಿನ ಪಂದ್ಯವನ್ನು ಇಂತಹ ದಿಗ್ಗಜ ಆಟಗಾರನೊಂದಿಗೆ ಆಟವಾಡಿದ್ದು ನನಗೆ ಹೆಮ್ಮೆ ಅನಿಸುತ್ತದೆ ಎಂದು ಹೇಳಿದರು.

ಅಂದು ನನಗೆ ಧೋನಿಯವರ ಎದುರು ನಿಂತು ಮಾತನಾಡುವ ಅರ್ಹತೆ ಇರಲಿಲ್ಲ, ಆದರೆ ಅವರು ನನ್ನ ಜೊತೆ ಆತ್ಮೀಯವಾಗಿ ಮಾತನಾಡಿದ್ದರು. ಪಂದ್ಯದಲ್ಲಿ ಮೊದಲು ಅವರನ್ನು ಕಂಡಾಗ ನಾನು `ಸರ್’ ಎಂದು ಕರೆಯುತ್ತಿದ್ದೆ. ಪಂದ್ಯದ 2ನೇ ಓವರ್ ಮುಗಿದ ಬಳಿಕ ಅವರು ನನ್ನನ್ನು ಕರೆದು, ನನಗೆ ಸರ್ ಅಂತ ಕರೆಯಬೇಡ ಎಂದರು. ಸರ್ ಬದಲು ಮಾಹಿ, ಧೋನಿ, ಮಹೇಂದ್ರ ಸಿಂಗ್ ಧೋನಿ ಅಥವಾ ಭಾಯಿ ಅಂತ ನಿನಗೆ ಇಷ್ಟ ಆಗುತ್ತದೋ ಹಾಗೆ ಕರೆದು ಬಿಡು ಎಂದು ಹೇಳಿದ್ದರು. ಇದು ನನಗೆ ಅವರ ಮೇಲಿನ ಗೌರವ ಹೆಚ್ಚಾಗುವಂತೆ ಮಾಡಿತ್ತು ಎಂದು ಚಹಲ್ ತಿಳಿಸಿದರು.

ಧೋನಿಯವರ ಈ ಸರಳತೆಯು ನನಗೆ ಸ್ಫೂರ್ತಿ ನೀಡಿತು, ಯಾವುದೇ ಆಟಗಾರರನ್ನು ಸಮಾನವಾಗಿ ನೋಡುವುದು ಧೋನಿ ಮಾತ್ರವೇ ಆದ್ದರಿಂದಲೇ ನಾನು ಅವರನ್ನು ಭಾಯಿ ಎಂದೇ ಕರೆಯುತ್ತೇನೆ ಎಂದರು. ಅಷ್ಟೇ ಅಲ್ಲದೇ ತಮ್ಮ ಎಲ್ಲಾ ಸಾಧನೆಗಳನ್ನು ಧೋನಿಯವರಿಗೆ ಅರ್ಪಿಸುತ್ತೇನೆ ಎಂದು ಈ ವೇಳೆ ಹೇಳಿದರು.

27 ವರ್ಷದ ಯಜುವೇಂದ್ರ ಚಹಲ್, ಇಂದು ಭಾರತ ತಂಡದ ಪ್ರಮುಖ ಆಟಗಾರರಾಗಿದ್ದಾರೆ. ಇವರು ಕಳೆದ 12 ತಿಂಗಳಿಂದ ತಂಡದಲ್ಲಿ ಗುರುತಿಸಿಕೊಂಡಿದ್ದಾರೆ. 2016ರಲ್ಲಿ ನಡೆದ ಜಿಂಬಾಬೆ ವಿರುದ್ಧ ಪಂದ್ಯದಲ್ಲಿ ಪಾದಾರ್ಪಣೆ ಮಾಡಿದ್ದರು. ಚಹಲ್ ಲೆಗ್-ಸ್ಪಿನ್ನರ್ ಆಗಿದ್ದು, ಕಳೆದ ಒಂದು ವರ್ಷದಲ್ಲಿ ಹಲವು ವಿಕೆಟ್‍ಗಳನ್ನು ಪಡೆದು ಸೈ ಎನಿಸಿಕೊಂಡಿದ್ದಾರೆ. ಇವರ ಬೌಲಿಂಗ್ ದಾಳಿಗೆ ದಕ್ಷಿಣ ಆಫ್ರಿಕಾ ತಂಡ ತವರು ನೆಲದಲ್ಲಿಯೇ ತತ್ತರಿಸಿ ಹೋಗಿತ್ತು. ಶ್ರೀಲಂಕಾ ವಿರುದ್ದ ಉತ್ತಮ ಪ್ರದರ್ಶನ ನೀಡಿ, ಏಕದಿನ ಮತ್ತು ಟಿ-20ಗಳಲ್ಲಿ ಉತ್ತಮ ಸ್ಥಿರತೆ ಹೊಂದಿದ್ದರು.

ಜಿಂಬಾಬ್ವೆ ಪ್ರವಾಸದ ಆಯ್ಕೆ ಸಂದರ್ಭದಲ್ಲಿ, ತಂಡದ ಪ್ರಮುಖ ಸ್ಪಿನ್ನರ್ ಗಳಾದ ರವೀಂದ್ರ ಜಡೇಜಾ ಮತ್ತು ಆರ್ ಅಶ್ವಿನ್‍ರವರು ಸತತ ಟೆಸ್ಟ್ ಪಂದ್ಯಗಳನ್ನಾಡಿ ವಿಶ್ರಾಂತಿ ಪಡೆದಿದ್ದರು. ಇವರ ಅನುಪಸ್ಥಿತಿಯಲ್ಲಿ ತಂಡಕ್ಕೆ ಭಾರೀ ನಷ್ಟವುಂಟಾಗಿತ್ತು. ಈ ಸಮಯದಲ್ಲಿ ಆಯ್ಕೆಗಾರರು ಎರಡನೇ ತಂಡದಲ್ಲಿದ್ದ ಹಲವು ಸದಸ್ಯರಲ್ಲಿ ಚಹಲ್‍ರನ್ನು ಆಯ್ಕೆಮಾಡಿದ್ದರು. ಚಹಲ್ ಆಯ್ಕೆಯಲ್ಲಿ ಮಹೇಂದ್ರ ಸಿಂಗ್ ಧೋನಿ ಪ್ರಮುಖ ಪಾತ್ರವಹಿಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *