ಉಡುಪಿಯಲ್ಲಿ ಗ್ರೀಸ್ ಹಚ್ಚಿಕೊಂಡು ಚಡ್ಡಿಯಲ್ಲೇ ಕಳ್ಳತನಕ್ಕಿಳಿದ ಗ್ಯಾಂಗ್ – ಸಿಸಿಟಿವಿಯಲ್ಲಿ ದೃಶ್ಯ ಸೆರೆ

Public TV
1 Min Read

ಉಡುಪಿ: ಕರಾವಳಿ ಜಿಲ್ಲೆ ಉಡುಪಿಯಲ್ಲಿ (Udupi) ಉತ್ತರ ಭಾರತದ ಕಿಲಾಡಿ ಕಳ್ಳರ ಗ್ಯಾಂಗ್ ಹೋಲುವ ತಂಡವೊಂದು ಹುಟ್ಟಿಕೊಂಡಿದೆ. ಕಳ್ಳರ ಗ್ಯಾಂಗ್ ಮೈಗೆ ಎಣ್ಣೆ, ಗ್ರೀಸ್ ಹಚ್ಚಿಕೊಂಡು ಬಂದು ಲಕ್ಷಾಂತರ ರೂ. ಹಣ ಲಪಟಾಯಿಸಿ ಪರಾರಿಯಾಗಿದೆ.

ನಗರದ ಸಂತಕಟ್ಟೆಯಲ್ಲಿನ ಬೇಕರಿ ಒಂದರ ಮಾಲೀಕರ ಮನೆಯಲ್ಲಿ ಕಳ್ಳತನ ಮಾಡುವಾಗ ಸಿಸಿಟಿವಿಯಲ್ಲಿ ದೃಶ್ಯ ಸೆರೆಯಾಗಿದೆ. ಕಳ್ಳರು ಕೇವಲ ಚಡ್ಡಿಯನ್ನು ಹಾಕಿಕೊಂಡು, ಮೈ ತುಂಬಾ ಎಣ್ಣೆ ಹಚ್ಚಿಕೊಳ್ಳುತ್ತಿರುವ ದೃಶ್ಯಗಳು ಲಭ್ಯವಾಗಿದೆ. ಮನೆಮಂದಿ ನಿದ್ದೆಯಲ್ಲಿರುವಾಗ ಬಾಗಿಲನ್ನು ಒಡೆದು ಒಳಪ್ರವೇಶಿಸಿದ ಕಳ್ಳರು 2.5 ಲಕ್ಷ ರೂ. ಮೌಲ್ಯದ ಚಿನ್ನ, ಬೆಳ್ಳಿಯನ್ನು ಕದ್ದಿದ್ದಾರೆ. ಇದರ ಆಧಾರದಲ್ಲಿ ಉಡುಪಿಯಲ್ಲೊಂದು ನಟೋರಿಯಸ್ ಗ್ಯಾಂಗ್ ಸಕ್ರಿಯವಾಗಿರುವುದು ಖಚಿತಗೊಂಡಿದೆ. ಇದನ್ನೂ ಓದಿ: ಹೆರಿಗೆ ಮಾಡಿಸಲು ಲಂಚಕ್ಕೆ ಬೇಡಿಕೆ ಇಟ್ಟಿದ್ದ ವೈದ್ಯ ಲೋಕಾಯುಕ್ತ ಬಲೆಗೆ

ಇದೇ ಮಾದರಿಯಲ್ಲಿ ಚಡ್ಡಿ ಗ್ಯಾಂಗ್ ಉತ್ತರ ಭಾರತದಲ್ಲಿ ವಿಲಕ್ಷಣ ಮಾದರಿಯಲ್ಲಿ ಕಳ್ಳತನ ನಡೆಸುತ್ತಿತ್ತು. ಸೊಂಟಕ್ಕೆ ಎರಡು ಚಪ್ಪಲಿಯನ್ನು ಸಿಕ್ಕಿಸಿಕೊಂಡು ಕಸುಬಿಗೆ ಇಳಿಯುವ ಈ ತಂಡ, ಕೃತ್ಯ ನಡೆಸಿದ ಸ್ಥಳದಲ್ಲಿ ಒಂದು ಚಪ್ಪಲಿಯನ್ನು ಬಿಟ್ಟು ಹೋಗುತ್ತಿತ್ತು. ಈ ತಂಡ ಸಹ ಅದೇ ರೀತಿ ಮಾಡುತ್ತಿದೆ. ಇದೇ ರೀತಿ ನಗರದ ರೆಸಿಡೆನ್ಸಿಯಲ್ ಏರಿಯಾಗಳಲ್ಲಿ ಕಳ್ಳರು ಎಸಗುತ್ತಿರುವ ಕೃತ್ಯ ಪೊಲೀಸರ ನಿದ್ದೆಗೆಡಿಸಿದೆ.

1990 – 91ರಲ್ಲಿ ಈಶಾನ್ಯ ಭಾರತದ ರಾಜ್ಯಗಳು ಸೇರಿದಂತೆ ದೆಹಲಿಯಲ್ಲಿ ಕಚ್ಚಾ ಬನಿಯನ್ ಗ್ಯಾಂಗ್ ಎಂಬ ಹೆಸರಿನ ತಂಡ ದರೋಡೆ, ಮನೆ ಕಳ್ಳತನ, ಕೊಲೆಗಳನ್ನು ನಡೆಸುತ್ತಾ ಸಕ್ರಿಯವಾಗಿತ್ತು. ಅಲ್ಲಿಯೂ ಆರೋಪಿಗಳು ಬರೀ ಮೈಗೆ ಸಂಪೂರ್ಣ ಎಣ್ಣೆಯನ್ನು ಹಚ್ಚಿಕೊಂಡು ಕೇವಲ ಚಡ್ಡಿಯನ್ನು ಹಾಕಿಕೊಂಡು, ರಾತ್ರಿ ವೇಳೆ ದರೋಡೆ ನಡೆಸುತ್ತಿದ್ದರು. ಈ ನೈಜ ಘಟನೆ ಆಧಾರಿತ ಡೆಲ್ಲಿ ಕ್ರೈಮ್ -2 ಎಂಬ ವೆಬ್ ಸೀರಿಸ್ ಬಂದಿದೆ.

ನಗರದಲ್ಲಿ ನಡೆದ ಮನೆಗಳ್ಳತನ ಪ್ರಕರಣದಲ್ಲಿ ಹಲವಾರು ಸಿಸಿಟಿವಿ ದೃಶ್ಯಾವಳಿಗಳನ್ನು ವಶಕ್ಕೆ ಪಡೆದು ತನಿಖೆ ಮಾಡುತ್ತಿದ್ದಾರೆ. ನಗರ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಪೊಲೀಸ್ (Police) ಗಸ್ತು ಹೆಚ್ಚಿಸಬೇಕು ಎಂಬ ಒತ್ತಾಯ ಜನರಿಂದ ಕೇಳಿಬಂದಿದೆ. ಇದನ್ನೂ ಓದಿ: ಪ್ರಥಮ ಪಿಯುಸಿ ವಿದ್ಯಾರ್ಥಿ ಹೃದಯಾಘಾತದಿಂದ ಸಾವು

Share This Article