ಮಸೂದೆ ಅಂಗೀಕರಿಸಲು ರಾಜ್ಯಪಾಲರಿಗೆ ಸಮಯ ನಿಗದಿ ಪಡಿಸಲು ಸಾಧ್ಯವಿಲ್ಲ: ಸುಪ್ರೀಂ

3 Min Read
ಮಸೂದೆ ಅಂಗೀಕರಿಸಲು ರಾಜ್ಯಪಾಲರಿಗೆ ಸಮಯ ನಿಗದಿ ಪಡಿಸಲು ಸಾಧ್ಯವಿಲ್ಲ: ಸುಪ್ರೀಂ

– ರಾಷ್ಟ್ರಪತಿ ಮುರ್ಮು ಸಲ್ಲಿಸಿದ್ದ ಅರ್ಜಿಯಲ್ಲಿ ಕೇಂದ್ರಕ್ಕೆ ಜಯ

ನವದೆಹಲಿ: ಮಸೂದೆ ಅಂಗೀಕರಿಸಲು ರಾಷ್ಟ್ರಪತಿಗಳು ಮತ್ತು ರಾಜ್ಯಪಾಲರಿಗೆ (Governor) ಸಮಯ ನಿಗದಿ ಪಡಿಸಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್‌ (Supreme Court) ಮಹತ್ವದ ತೀರ್ಪು ನೀಡಿದ್ದು ಕೇಂದ್ರ ಸರ್ಕಾರಕ್ಕೆ ದೊಡ್ಡ ಜಯ ಸಿಕ್ಕಿದೆ.

ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಸಲ್ಲಿಸಿದ್ದ ಮರುಪರಿಶೀನಾ ಅರ್ಜಿ ವಿಚಾರಣೆ ನಡೆಸಿದ ಭಾರತದ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ, ನ್ಯಾ.ಸೂರ್ಯಕಾಂತ್, ನ್ಯಾ.ವಿಕ್ರಮ್ ನಾಥ್, ನ್ಯಾ. ಪಿ.ಎಸ್. ನರಸಿಂಹ ಮತ್ತು ನ್ಯಾ.ಎ.ಎಸ್. ಚಂದೂರ್ಕರ್ ಅವರನ್ನೊಳಗೊಂಡ ಪೀಠವು ಹತ್ತು ದಿನಗಳ ಕಾಲ ಈ ಪ್ರಕರಣದ ವಿಚಾರಣೆ ನಡೆಸಿ ಸೆಪ್ಟೆಂಬರ್ 11 ರಂದು ತನ್ನ ತೀರ್ಪನ್ನು ಕಾಯ್ದಿರಿಸಿತ್ತು.

ರಾಷ್ಟ್ರಪತಿಗಳು, ರಾಜ್ಯಪಾಲರಿಗೆ ಸಮಯ ನಿಗದಿ ಪಡಿಸಲು ಸಾಧ್ಯವಿಲ್ಲ ಎಂದಿರುವ ಕೋರ್ಟ್‌ ಅನಿರ್ದಿಷ್ಟಾವಧಿಯವರೆಗೆ ಮಸೂದೆಗಳಿಗೆ ಸಹಿ ಹಾಕಲು ವಿಳಂಬ ಮಾಡುವಂತಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದೆ.

ಮಸೂದೆಗಳನ್ನು ಅನುಮೋದಿಸುವ ವಿಷಯದಲ್ಲಿ ರಾಷ್ಟ್ರಪತಿಗಳು ಮತ್ತು ರಾಜ್ಯಪಾಲರನ್ನು ಸಮಯ ಮಿತಿಗೆ ಒಳಪಡಿಸಲು ಸಾಧ್ಯವಿಲ್ಲ. ರಾಷ್ಟ್ರಪತಿಗಳು ಅಥವಾ ರಾಜ್ಯಪಾಲರ ಕ್ರಮಗಳು ನ್ಯಾಯಸಮ್ಮತವಲ್ಲ ಮತ್ತು ಮಸೂದೆ ಕಾನೂನಾದಾಗ ಮಾತ್ರವೇ ನ್ಯಾಯಾಂಗದ ಪರಿಶೀಲನೆಗೆ ಒಳಪಡಬಹುದು ಎಂದು ಹೇಳಿದೆ.

ನಿರ್ದಿಷ್ಟ ಅವಧಿಯೊಳಗೆ ಒಪ್ಪಿಗೆ ನೀಡದೇ ಇದ್ದರೆ ಮಸೂದೆಯು ಸ್ವಯಂಚಾಲಿತವಾಗಿ ಕಾನೂನಾಗುವುದಿಲ್ಲ ಎಂದು ತೀರ್ಪಿನಲ್ಲಿ ಉಲ್ಲೇಖಿಸಿದೆ. ಈ ವೇಳೆ ಮಸೂದೆಯ ಬಗ್ಗೆ ದೀರ್ಘ ಕಾಲ ವಿಳಂಬ ಮಾಡಿ ಶಾಸಕಾಂಗ ಪ್ರಕ್ರಿಯೆಯನ್ನು ಅಡ್ಡಿಪಡಿಸಿದರೆ ರಾಜ್ಯಪಾಲರಿಗೆ ಕಾಲಮಿತಿಯೊಳಗೆ ನಿರ್ಧರಿಸುವಂತೆ ನಿರ್ದೇಶಿಸಲು ನ್ಯಾಯಾಲಯವು ಸೀಮಿತ ನ್ಯಾಯಾಂಗ ಪರಿಶೀಲನೆಯಲ್ಲಿರುವ ಅಧಿಕಾರವನ್ನು ಬಳಸಬಹುದು ಎಂದು ಅಭಿಪ್ರಾಯಪಟ್ಟಿದೆ.

ಭಾರತದ ಅಟಾರ್ನಿ ಜನರಲ್ ಆರ್ ವೆಂಕಟರಮಣಿ, ರಾಷ್ಟ್ರಪತಿ ಮತ್ತು ರಾಜ್ಯಪಾಲರು 200 ಮತ್ತು 201 ನೇ ವಿಧಿಗಳ ಅಡಿಯಲ್ಲಿ ತಮ್ಮ ಅಧಿಕಾರವನ್ನು ಚಲಾಯಿಸಲು ನ್ಯಾಯಾಲಯವು ಸಮಯ ಮಿತಿಯನ್ನು ನಿಗದಿಪಡಿಸುವುದರ ವಿರುದ್ಧ ವಾದಿಸಿದ್ದರು. ಮಸೂದೆಗಳಿಗೆ ಒಪ್ಪಿಗೆ ಎಂದು ಘೋಷಿಸುವ ಮೂಲಕ ನ್ಯಾಯಾಲಯವು ರಾಜ್ಯಪಾಲರ ಕಾರ್ಯಗಳನ್ನು ವಹಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಅವರು ಪ್ರತಿಪಾಸಿದ್ದರು.

ಕೇಂದ್ರ ಸರ್ಕಾರದ ಪರವಾಗಿ ಭಾರತದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ರಾಜ್ಯಪಾಲರಿಗೆ ಕೋರ್ಟ್‌ ಸಮಯ ಮಿತಿಯನ್ನು ನಿಗದಿ ಪಡಿಸಿದ್ದನ್ನು ವಿರೋಧಿಸಿದ್ದರು. ರಾಜ್ಯಪಾಲರು ಮಸೂದೆಗಳ ಮೇಲೆ ಅನಿರ್ದಿಷ್ಟವಾಗಿ ವಿಚಾರಣೆ ನಡೆಸಲು ಸಾಧ್ಯವಿಲ್ಲ ಎಂದು ಒಪ್ಪಿಕೊಂಡರೂ, ನ್ಯಾಯಾಲಯಗಳು ನೇರವಾಗಿ ಮಸೂದೆಗಳಿಗೆ ಒಪ್ಪಿಗೆ ನೀಡಲು ಸಮಯ ನಿಗದಿಪಡಿಸಲು ಸಾಧ್ಯವಿಲ್ಲ ಎಂದು ಎಸ್ ಜಿ ಮೆಹ್ತಾ ಪ್ರತಿಪಾದಿಸಿದ್ದರು. ಸಾಂವಿಧಾನಿಕ ಉನ್ನತ ಅಧಿಕಾರಿಗಳಿಗೆ ತಮ್ಮ ವಿವೇಚನಾ ಅಧಿಕಾರವನ್ನು ಚಲಾಯಿಸುವುದಕ್ಕೆ ಸಂಬಂಧಿಸಿದಂತೆ ಆದೇಶ ಹೊರಡಿಸುವುದು ಅಧಿಕಾರಗಳ ಪ್ರತ್ಯೇಕತೆಯ ತತ್ವದ ಉಲ್ಲಂಘನೆಯಾಗಿದೆ ಎಂದು ಕೋರ್ಟ್‌ ಗಮನಕ್ಕೆ ತಂದಿದ್ದರು.

ರಾಜ್ಯಪಾಲರ ವಿಳಂಬ ಪ್ರಕರಣಗಳಲ್ಲಿ ನ್ಯಾಯಾಂಗ ಹಸ್ತಕ್ಷೇಪ ಮತ್ತು ಸಮಯ ಮಿತಿಯನ್ನು ಬೆಂಬಲಿಸಿ ಹಿರಿಯ ವಕೀಲರಾದ ಕಪಿಲ್ ಸಿಬಲ್ (ಪಶ್ಚಿಮ ಬಂಗಾಳ), ಹಿರಿಯ ವಕೀಲ ಅಭಿಷೇಕ್‌ ಮನು ಸಿಂಘ್ವಿ(ತಮಿಳುನಾಡು), ಕೆ.ಕೆ. ವೇಣುಗೋಪಾಲ್ (ಕೇರಳ) ಗೋಪಾಲ್ ಸುಬ್ರಮಣಿಯಂ (ಕರ್ನಾಟಕ) ಅರವಿಂದ್ ಪಿ. ದಾತಾರ್ (ಪಂಜಾಬ್) ವಾದ ಮಂಡಿಸಿದ್ದರು.

ಮಹಾರಾಷ್ಟ್ರ ಪರವಾಗಿ ಹಿರಿಯ ವಕೀಲ ಹರೀಶ್ ಸಾಳ್ವೆ ಮತ್ತು ಛತ್ತೀಸ್‌ಗಢ ಪರವಾಗಿ ಹಿರಿಯ ವಕೀಲ ಮಹೇಶ್ ಜೇಠ್ಮಲಾನಿ ಕೇಂದ್ರದ ನಿಲುವನ್ನು ಬೆಂಬಲಿಸಿ ವಾದಿಸಿದ್ದರು.

ಏನಿದು ಪ್ರಕರಣ?
ತನ್ನ ಮಸೂದೆಗಳಿಗೆ ರಾಜ್ಯಪಾಲರು ತಡೆ ಹಿಡಿದಿದ್ದನ್ನು ಪ್ರಶ್ನಿಸಿ ತಮಿಳುನಾಡು ಡಿಎಂಕೆ ಸರ್ಕಾರ ಸುಪ್ರೀಂಕೋರ್ಟ್‌ ಮೊರೆ ಹೋಗಿತ್ತು. ಅರ್ಜಿ ವಿಚಾರಣೆ ನಡೆಸಿದ್ದ ನ್ಯಾ. ಜೆ.ಬಿ. ಪಾರ್ದಿವಾಲಾ ಮತ್ತು ನ್ಯಾ.ಆರ್. ಮಹಾದೇವನ್ ಅವರಿದ್ದ ದ್ವಿಸದಸ್ಯ ಪೀಠ, ರಾಜ್ಯಪಾಲರು ಸಂವಿಧಾನದ 200ನೇ ವಿಧಿಯಡಿ ರಾಜ್ಯ ಸರ್ಕಾರದ ಸಲಹೆಗೆ ಬದ್ಧರಾಗಿರಬೇಕು. ಮಸೂದೆಗಳನ್ನು ಅನಿರ್ದಿಷ್ಟವಾಗಿ ತಡೆಹಿಡಿಯುವ ಅಧಿಕಾರ ಅವರಿಗಿಲ್ಲ. ಈ ನಡೆ ಸಂವಿಧಾನಕ್ಕೆ ವಿರುದ್ಧವಾಗಿದೆ ಎಂದು ಏಪ್ರಿಲ್‌ನಲ್ಲಿ ಮಹತ್ವದ ತೀರ್ಪು ಪ್ರಕಟಿಸಿತ್ತು.

ರಾಜ್ಯಪಾಲರು ಮಸೂದೆಯನ್ನು ವೀಟೋ ಮಾಡಲು ಅಥವಾ ಪಾಕೆಟ್ ವೀಟೋ ಮಾಡಲು ಸಾಧ್ಯವಿಲ್ಲ. ಮಸೂದೆಗಳನ್ನು ಸೀಟಿನ ಕೆಳಗಿಟ್ಟುಕೊಂಡು ಕೂರುವಂತಿಲ್ಲ. ರಾಜ್ಯಪಾಲರು ಮಸೂದೆಯನ್ನು ಅನುಮೋದಿಸಬಹುದು ಅಥವಾ ರಾಷ್ಟ್ರಪತಿಗಳ ಪರಿಗಣನೆಗೆ ಕಳುಹಿಸಬಹುದು. ರಾಜ್ಯಪಾಲರು ಮಸೂದೆಯನ್ನು 2ನೇ ಬಾರಿಗೆ ರಾಷ್ಟ್ರಪತಿಗಳ ಪರಿಶೀಲನೆಗೆ ಕಳುಹಿಸುವಂತೆ ಕೇಳುವ ಮೂಲಕ ಅದನ್ನು ತಡೆಯಲು ಸಾಧ್ಯವಿಲ್ಲ. ಕಳುಹಿಸಿದ ದಿನಾಂಕದಿಂದ ಮೂರು ತಿಂಗಳ ಒಳಗಡೆ ಅನುಮತಿ ನೀಡಬೇಕು. ಒಂದು ವೇಳೆ ನಿರ್ದಿಷ್ಟ ಅವಧಿಯೊಳಗೆ ಒಪ್ಪಿಗೆ ನೀಡದೇ ಇದ್ದರೆ ಮಸೂದೆಯು ಸ್ವಯಂಚಾಲಿತವಾಗಿ ಕಾನೂನಾಗುತ್ತದೆ ಎಂದು ತೀರ್ಪಿನಲ್ಲಿ ಹೇಳಿತ್ತು.

ರಾಷ್ಟ್ರಪತಿಗಳಿಂದ ಅರ್ಜಿ:
ರಾಜ್ಯದ ಮಸೂದೆಗಳ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ರಾಜ್ಯಪಾಲರು ಮತ್ತು ರಾಷ್ಟ್ರಪತಿಗಳಿಗೆ ಗಡುವನ್ನು ಹೇಗೆ ವಿಧಿಸಿದೆ? ಸಂವಿಧಾನದಲ್ಲಿ ಮಸೂದೆಗೆ ಒಪ್ಪಿಗೆ ನೀಡುವ ವಿಚಾರದಲ್ಲಿ ಯಾವುದೇ ನಿಬಂಧನೆಗಳಿಲ್ಲದಿದ್ದರೂ, ನ್ಯಾಯಾಲಯವು ಈ ಗಡುವು ವಿಧಿಸಿದ್ದು ಹೇಗೆ ಎಂದು ಪ್ರಶ್ನಿಸಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅರ್ಜಿ ಸಲ್ಲಿಸಿದ್ದರು. ಅರ್ಜಿಯಲ್ಲಿ ರಾಷ್ಟ್ರಪತಿಗಳು 14 ಪ್ರಶ್ನೆಗಳನ್ನು ಕೇಳಿದ್ದರು.

Share This Article