ಕೋವಿನ್ ಪೋರ್ಟಲ್ ಸಂಪೂರ್ಣ ಸುರಕ್ಷಿತವಾಗಿದೆ: ಕೇಂದ್ರ ಸರ್ಕಾರ

Public TV
1 Min Read

ನವದೆಹಲಿ: ಕೋವಿನ್ ಪೋರ್ಟಲ್‍ (CoWin Portal) ನಿಂದ ಅತ್ಯಂತ ಸೂಕ್ಷ್ಮ ದತ್ತಾಂಶ ಸೋರಿಕೆ ಆಗಿವೆ ಎಂಬ ಸುದ್ದಿಯನ್ನು ಕೇಂದ್ರ ಸರ್ಕಾರ (Central Govt) ತಳ್ಳಿ ಹಾಕಿದೆ.

ಯಾವುದೇ ಆಧಾರಗಳು ಇಲ್ಲದೇ ಡಾಟಾ ಲೀಕ್ ಆಗಿದೆ ಎಂದು ಹೇಳುವುದು ಸರಿಯಲ್ಲ. ಒಟಿಪಿ (OTP) ಇಲ್ಲದೆ ಡೇಟಾವನ್ನು ಹೊರಗೆಳೆಯುವ ಯಾವುದೇ ಸಾರ್ವಜನಿಕ ಅಪ್ಲಿಕೇಶನ್‍ಗಳಿಲ್ಲ. ಕೋವಿನ್ ಪೋರ್ಟಲ್‍ನಲ್ಲಿ ಎಲ್ಲಾ ದತ್ತಾಂಶಗಳು ಅತ್ಯಂತ ಸೇಫ್ ಆಗಿವೆ. ಸಾರ್ವಜನಿಕರು ಆತಂಕಪಡುವ ಅಗತ್ಯ ಇಲ್ಲ ಎಂದು ಕೇಂದ್ರ ಆರೋಗ್ಯ ಇಲಾಖೆ ಸ್ಪಷ್ಟಪಡಿಸಿದೆ. ಈ ಬಗ್ಗೆ ವರದಿ ಸಲ್ಲಿಸುವಂತೆ ಸಿಇಆರ್ ಟಿಗೆ ಸೂಚನೆ ನೀಡಿದೆ. ಇದನ್ನೂ ಓದಿ: ಎರಡು ತಿಂಗಳ GST ಪಾಲು ಬಿಡುಗಡೆ ಮಾಡಿದ ಕೇಂದ್ರ ಸರ್ಕಾರ- ಕರ್ನಾಟಕಕ್ಕೆ ಸಿಕ್ಕಿದ್ದೆಷ್ಟು?

ಕೋವಿಡ್ ವ್ಯಾಕ್ಸಿನ್ (Covid Vaccine) ಹಾಕಿಸಿಕೊಂಡವರ ಆಧಾರ್ ಕಾರ್ಡ್, ಫೋನ್ ನಂಬರ್ ಗಳು, ಎಲ್ಲೆಲ್ಲಿ ಎಷ್ಟು ಬಾರಿ ಲಸಿಕೆ ಹಾಕಿಸಿಕೊಂಡಿದ್ದಾರೆ ಎಂಬ ಸಂಪೂರ್ಣ ಮಾಹಿತಿ ಟೆಲಿಗ್ರಾಮ್‍ನಲ್ಲಿ ಲೀಕ್ ಆಗಿದೆ. ಯಾವುದೇ ವ್ಯಕ್ತಿಯ ಫೋನ್ ನಂಬರ್ ಇಲ್ಲವೇ ಆಧಾರ್ ನಂಬರ್ ನಮೂದಿಸಿದ್ರೆ ಅವರ ಎಲ್ಲಾ ಮಾಹಿತಿ ಲಭ್ಯವಾಗುತ್ತಿದೆ ಎಂದು ವರದಿಯಾಗಿತ್ತು. ಇದಕ್ಕೆ ಪ್ರತಿಕ್ರಿಯಿಸಿರುವ ಆರೋಗ್ಯ ಸಚಿವಾಲಯ, ಈ ವರದಿ ಆಧಾರರಹಿತ. ಜನರನ್ನು ತಪ್ಪಿಸುವುದಾಗಿದೆ ಎಂದಿದೆ. ಈ ಹಿಂದೆಯೂ ದತ್ತಾಂಶ ಸೋರಿಕೆ ಆಪಾದನೆ ಕೇಳಿಬಂದಿತ್ತು.

ಡೇಟಾ ಗೌಪ್ಯತೆಗಾಗಿ ಸಾಕಷ್ಟು ಸುರಕ್ಷತೆಗಳನ್ನು ಕೈಗೊಳ್ಳಲಾಗಿದೆ ಎಂದು ಸ್ಪಷ್ಟನೆ ನೀಡುತ್ತಾ, ಕೋವಿನ್ ಪೋರ್ಟಲ್‍ಗಾಗಿ ತೆಗೆದುಕೊಂಡ ಭದ್ರತಾ ಕ್ರಮಗಳ ಬಗ್ಗೆಯೂ ಆರೋಗ್ಯ ಸಚಿವಾಲಯ ವಿವರಣೆ ನೀಡಿದೆ. ಕೇಂದ್ರ ಆರೋಗ್ಯ ಸಚಿವಾಲಯದ ಕೋವಿನ್ ಪೋರ್ಟಲ್ ಕೋವಿಡ್ 19 ವಿರುದ್ಧ ಲಸಿಕೆಯನ್ನು ಪಡೆದ ಫಲಾನುಭವಿಗಳ ಎಲ್ಲಾ ಡೇಟಾದ ಭಂಡಾರವಾಗಿದೆ. ಈ ಸಮಸ್ಯೆಯನ್ನು ಪರಿಶೀಲಿಸಲು ಮತ್ತು ವರದಿಯನ್ನು ಸಲ್ಲಿಸಲು ಭಾರತೀಯ ಕಂಪ್ಯೂಟರ್ ತುರ್ತು ಪ್ರತಿಕ್ರಿಯೆ ತಂಡಕ್ಕೆ (CERT-In) ತಿಳಿಸಲಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.

Share This Article