ಬೆಳಗ್ಗೆ 9:15ರೊಳಗೆ ಕಚೇರಿಗೆ ಬರದಿದ್ದರೇ ಅರ್ಧ ದಿನದ ಸಂಬಂಳ ಕಟ್ – ಕೇಂದ್ರ ಸರ್ಕಾರಿ ನೌಕರರಿಗೆ ಡಿಒಪಿಟಿ ಎಚ್ಚರಿಕೆ!

Public TV
1 Min Read

ನವದೆಹಲಿ: ಸರಿಯಾದ ಸಮಯಕ್ಕೆ ಕಚೇರಿಗೆ ಆಗಮಿಸದ ಅಧಿಕಾರಿಗಳ ವಿರುದ್ಧ ಕೇಂದ್ರದ ಸಿಬ್ಬಂದಿ ಮತ್ತು ತರಬೇತಿ ಇಲಾಖೆ (DoPT) ಚಾಟೀ ಬೀಸಿದೆ. ಗರಿಷ್ಠ 15 ನಿಮಿಷಗಳ ವಿಳಂಬವನ್ನು ಕ್ಷಮಿಸಲು ನಿರ್ಧರಿಸಿದ್ದು, ದೇಶಾದ್ಯಂತ ಕೇಂದ್ರ ಸರ್ಕಾರದ ಉದ್ಯೋಗಿಗಳು (Government Employees) ಬೆಳಗ್ಗೆ 9.15ಕ್ಕೆ ಕಚೇರಿಗೆ ಹಾಜರಾಗಿ, ಹಾಜರಾತಿಯನ್ನು ದಾಖಲಿಸಲು ಸುತ್ತೊಲೆಯಲ್ಲಿ ತಿಳಿಸಿದೆ.

ಕೇಂದ್ರ ಸರ್ಕಾರಿ ಕಚೇರಿಗಳು ಬೆಳಗ್ಗೆ 9 ರಿಂದ ಸಂಜೆ 5.30 ಗಂಟೆ ವರೆಗೆ ತೆರೆದಿರುತ್ತವೆ. ಆದರೆ ಕಿರಿಯ ಹಂತದ ಉದ್ಯೋಗಿಗಳು ತಡವಾಗಿ ಬರುವುದು ಮತ್ತು ಬೇಗನೆ ಹೊರಡುವುದು ಸಹಜವಾಗಿದೆ. ಇದರಿಂದ ಸಾರ್ವಜನಿಕ ಕೆಲಸಗಳು (Public Work) ಸೇರಿದಂತೆ, ಜನರಿಗೆ ಅನಾನುಕೂಲವಾಗಿದೆ. ಈ ಹಿನ್ನೆಲೆಯಲ್ಲಿ ಹಾಜರಾತಿಯನ್ನು ಕಡ್ಡಾಯಗೊಳಿಸಿದೆ ಎಂದು ತಿಳಿಸಲಾಗಿದೆ.

ಕೊವೀಡ್ ಬಳಿಕ ಕೇಂದ್ರ ಸರ್ಕಾರದ ನೌಕರರು ಬಯೋಮೆಟ್ರಿಕ್ (Biometric) ಬಳಕೆ ಮಾಡುತ್ತಿಲ್ಲ. ಮುಂದಿನ ದಿನಗಳಲ್ಲಿ ಕಡ್ಡಾಯವಾಗಿ ಹಿರಿಯ ಅಧಿಕಾರಿಗಳು ಸಹಿತ ಎಲ್ಲರೂ ಬಯೋ ಮೆಟ್ರಿಕ್ ಮೂಲಕವೇ ಹಾಜರಾತಿ ದಾಖಲಿಸಬೇಕು ಎಂದು ಸೂಚಿಸಿದೆ. ಬೆಳಗ್ಗೆ 9.15 ರೊಳಗೆ ಬಾರದಿದ್ದಲ್ಲಿ ಅರ್ಧ ದಿನದ ವೇತನ ಕಡಿತಗೊಳಿಸಲಾಗುವುದು ಎಂದು ಸಹ ಎಚ್ಚರಿಕೆ ನೀಡಿದೆ.

ಅನಿವಾರ್ಯ ಕಾರಣಗಳಿಂದ ಯಾವುದೇ ಉದ್ಯೋಗಿಗೆ ನಿರ್ದಿಷ್ಟ ದಿನದಂದು ಕಚೇರಿಗೆ ಹಾಜರಾಗಲು ಸಾಧ್ಯವಾಗದಿದ್ದರೆ ಅದನ್ನು ಮುಂಚಿತವಾಗಿ ತಿಳಿಸಬೇಕು ಮತ್ತು ಸಾಂದರ್ಭಿಕ ರಜೆಗೆ ಅರ್ಜಿ ಸಲ್ಲಿಸಬೇಕು ಎಂದು ಸುತ್ತೋಲೆಯಲ್ಲಿ ತಾಕೀತು ಮಾಡಿದೆ. ಹಿರಿಯ ಅಧಿಕಾರಿಗಳು ನೌಕರರ ಹಾಜರಾತಿ ಮತ್ತು ಸಮಯಪ್ರಜ್ಞೆಯನ್ನು ಮೇಲ್ವಿಚಾರಣೆ ಮಾಡುತ್ತಾರೆ ಎಂದು ಸುತ್ತೊಲೆಯಲ್ಲಿ ಹೇಳಲಾಗಿದೆ.

GOVT EMPLOYEES
ಸಾಂದರ್ಭಿಕ ಚಿತ್ರ

2014 ರಲ್ಲಿ ನರೇಂದ್ರ ಮೋದಿ ಮೊದಲ ಬಾರಿ ಪ್ರಧಾನಿಯಾದ ಬಳಿಕ ಕಚೇರಿ ಸಮಯವನ್ನು ಕಡ್ಡಾಯವಾಗಿ ಜಾರಿಗೊಳಿಸಲು ಪ್ರಯತ್ನಿಸಿತು‌. ಇದನ್ನು ನೌಕರರು ವಿರೋಧಿಸಿದ್ದರು. ಅವರಲ್ಲಿ ಹಲವರು ದೂರದ ಪ್ರಯಾಣ ಮಾಡುತ್ತಾರೆ ಎಂದು ವಾದಿಸಿದ್ದರು. ಬಳಿಕ ಆಧಾರ್-ಸಕ್ರಿಯಗೊಳಿಸಿದ ಬಯೋಮೆಟ್ರಿಕ್ ಹಾಜರಾತಿ ವ್ಯವಸ್ಥೆಯನ್ನು ಜಾರಿಗೊಳಿಸಿದೆ, ಹಾಜರಾತಿ ಖಚಿತಪಡಿಸಿಕೊಳ್ಳಲು, ಮೇಲ್ವಿಚಾರಣೆ ಮಾಡಲಾಯಿತು ಸೂಚಿಸಿತ್ತು. ಕೋವಿಡ್ ಬಳಿಕ ಈ ವ್ಯವಸ್ಥೆ ಮತ್ತೆ ಹಾದಿ ತಪ್ಪಿದೆ ಎನ್ನಲಾಗಿದೆ‌.

Share This Article