ಕೊಬ್ಬರಿ ಬೆಳೆಗಾರರಿಗೆ ಗುಡ್‌ನ್ಯೂಸ್‌ – ಬೆಂಬಲ ಬೆಲೆ ಹೆಚ್ಚಿಸಿದ ಕೇಂದ್ರ ಸರ್ಕಾರ

2 Min Read

ನವದೆಹಲಿ: 2026ರ ಹಂಗಾಮಿಗೆ ಕೊಬ್ಬರಿಯ ಕನಿಷ್ಠ ಬೆಂಬಲ ಬೆಲೆಗೆ (MSP) ಪ್ರಧಾನಿ ನರೇಂದ್ರ ಮೋದಿ (Narendra Modi) ಅಧ್ಯಕ್ಷತೆಯ ಆರ್ಥಿಕ ವ್ಯವಹಾರಗಳ ಸಚಿವ ಸಂಪುಟ ಸಮಿತಿ ಅನುಮೋದನೆ ನೀಡಿದೆ.

ಮಿಲ್ಲಿಂಗ್ (ಚಿಕ್ಕ ಚಿಕ್ಕ ತುಂಡು) ಕೊಬ್ಬರಿಯ (Dry Coconut) ಬೆಂಬಲ ಬೆಲೆಯನ್ನ ಪ್ರತಿ ಕ್ವಿಂಟಲ್‌ಗೆ 445 ರೂ. ಹೆಚ್ಚಿಸಿ 12,027 ರೂ. ನಿಗದಿಪಡಿಸಲಾಗಿದೆ. ಉಂಡೆ ಕೊಬ್ಬರಿಯ ಎಂಎಸ್‌ಪಿಯನ್ನು ಕ್ವಿಂಟಲ್‌ಗೆ 400 ರೂ. ಹೆಚ್ಚಿಸಿ 12,500 ರೂ. ಮಾಡಲಾಗಿದೆ. ತೆಂಗು ಬೆಳೆಗಾರರಿಗೆ ಉತ್ತಮ ಲಾಭ ಖಚಿತಪಡಿಸಲು ಮತ್ತು ತೆಂಗಿನ ಉತ್ಪನ್ನಗಳಿಗೆ ಹೆಚ್ಚುತ್ತಿರುವ ಬೇಡಿಕೆ ಪೂರೈಸಲು, ಉತ್ಪಾದನೆ ಹೆಚ್ಚಿಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ (Ashwini Vaishnaw) ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಇದನ್ನೂ ಓದಿ: 2027ರ ಜನಗಣತಿಗೆ 11,718 ಕೋಟಿ ಬಿಡುಗಡೆಗೆ ಕೇಂದ್ರ ಅಸ್ತು – 2 ಹಂತಗಳಲ್ಲಿ ಸೆನ್ಸಸ್‌

ಕೃಷಿ ವೆಚ್ಚ ಮತ್ತು ಬೆಲೆಗಳ ಆಯೋಗದ ಶಿಫಾರಸಿನ ಮೇರೆಗೆ ಕೊಬ್ಬರಿಯ ‘ನ್ಯಾಯಯುತ ಮತ್ತು ಸರಾಸರಿ ಗುಣಮಟ್ಟ’ಕ್ಕೆ ಎಂಎಸ್‌ಪಿ ನಿಗದಿಪಡಿಸಲಾಗಿದೆ. ಬೆಂಬಲ ಬೆಲೆ ಯೋಜನೆಯಡಿ ರಾಷ್ಟ್ರೀಯ ಕೃಷಿ ಸಹಕಾರಿ ಮಾರುಕಟ್ಟೆ ಒಕ್ಕೂಟ (ನಫೇಡ್) ಹಾಗೂ ರಾಷ್ಟ್ರೀಯ ಸಹಕಾರಿ ಗ್ರಾಹಕರ ಒಕ್ಕೂಟವು (ಎನ್‌ಸಿಸಿಎಫ್) ಕೇಂದ್ರ ನೋಡಲ್ ಏಜೆನ್ಸಿಗಳಾಗಿ ಕಾರ್ಯನಿರ್ವಹಿಸುವುದನ್ನು ಮುಂದುವರಿಸುತ್ತವೆ ಎಂದು ವೈಷ್ಣವ್ ಹೇಳಿದರು.

2014 ರಿಂದ ಕೇಂದ್ರ ಸರ್ಕಾರವು ಮಿಲ್ಲಿಂಗ್ ಕೊಬ್ಬರಿಯ ಎಂಎಸ್‌ಪಿಯನ್ನು ಗಣನೀಯವಾಗಿ ಹೆಚ್ಚಿಸಿದೆ. 2014ರ ಮಾರುಕಟ್ಟೆ ಋತುವಿನಲ್ಲಿ ಕ್ವಿಂಟಲ್‌ಗೆ ಎಂಎಸ್‌ಪಿ 5,250 ರೂ. ಇತ್ತು. ದಶಕದಲ್ಲೇ ಬೆಂಬಲ ಬೆಲೆ ಶೇ.129 ರಷ್ಟು ಜಾಸ್ತಿ ಆಗಿದೆ. ಉಂಡೆ ಕೊಬ್ಬರಿಯ ಬೆಲೆಯು ಕ್ವಿಂಟಲ್‌ಗೆ 5,500 ರೂ.ನಿಂದ 12,500 ರೂ.ಗೆ ಏರಿಕೆಯಾಗಿದ್ದು, ಶೇ.127 ರಷ್ಟು ಹೆಚ್ಚಳವಾಗಿದೆ ಎಂದು ಅವರು ಮಾಹಿತಿ ನೀಡಿದರು. ಇದನ್ನೂ ಓದಿ: ರಾಜ್ಯದ ರೈತರಿಗೆ ಗುಡ್‌ನ್ಯೂಸ್‌; ಬೆಂಬಲ ಬೆಲೆಯಲ್ಲಿ ತೊಗರಿ ಬೇಳೆ ಖರೀದಿಗೆ ಕೇಂದ್ರ ಅಸ್ತು

ಬೆಳೆಗಾರರಿಗೆ ಲಾಭದಾಯಕ ಬೆಲೆ ಒದಗಿಸುವ ಸಲುವಾಗಿ ಸರ್ಕಾರವು 2018-19ರ ಬಜೆಟ್‌ನಲ್ಲಿ, ಎಲ್ಲ ಬೆಳೆಗಳ ಎಂಎಸ್‌ಪಿಯನ್ನು ಅಖಿಲ ಭಾರತ ಸರಾಸರಿ ಉತ್ಪಾದನಾ ವೆಚ್ಚದ ಕನಿಷ್ಠ 1.5 ಪಟ್ಟು ಮಟ್ಟದಲ್ಲಿ ನಿಗದಿಪಡಿಸಲಾಗುವುದು ಎಂದು ಘೋಷಿಸಿತ್ತು ಎಂದು ಅವರು ನೆನಪಿಸಿದರು.

ಸದ್ಯ ದೇಶದಲ್ಲಿ ಕೊಬ್ಬರಿ ಮಾರುಕಟ್ಟೆ ಋತುವು ಸಾಮಾನ್ಯವಾಗಿ ಜನವರಿಯಿಂದ ಏಪ್ರಿಲ್ ವರೆಗೆ ಇರುತ್ತದೆ. ಕರ್ನಾಟಕ, ತಮಿಳುನಾಡು ಮತ್ತು ಕೇರಳದಲ್ಲಿ ಅಧಿಕ ಪ್ರಮಾಣದಲ್ಲಿ ಕೊಬ್ಬರಿ ಉತ್ಪಾದನೆ ಆಗುತ್ತದೆ. ಇದನ್ನೂ ಓದಿ: ದ್ವೇಷ ಭಾಷಣಕ್ಕೆ 10 ವರ್ಷ ಜೈಲು – ಕಾಂಗ್ರೆಸ್‌ನ ಕ್ರೂರ ಸಂಪ್ರದಾಯದ ಪ್ರತಿಬಿಂಬ: ಜೋಶಿ ಕಿಡಿ

Share This Article