ನವಭಾರತದ ದೇವಾಲಯ ಎಚ್‍ಎಎಲ್‍ಗೆ ಕೇಂದ್ರದಿಂದ ಅವಮಾನ: ರಾಹುಲ್ ಗಾಂಧಿ

Public TV
2 Min Read

ಬೆಂಗಳೂರು: ರಫೇಲ್ ಯುದ್ಧ ವಿಮಾನದ ಒಪ್ಪಂದವನ್ನು ಬೇರೆ ಸಂಸ್ಥೆಗೆ ನೀಡುವ ಮೂಲಕ ದೇಶದ ರಕ್ಷಣಾ ವ್ಯವಸ್ಥೆಗೆ ಮಹತ್ವದ ಕೊಡುಗೆಗಳನ್ನು ನೀಡಿದ್ದ ಎಚ್‍ಎಎಲ್ ಸಂಸ್ಥೆಗೆ ಮೋದಿ ಸರ್ಕಾರ ಅವಮಾನ ಮಾಡಿದೆ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.

ನಿವೃತ್ತ ಎಚ್‍ಎಎಲ್ ನೌಕಕರೊಂದಿಗಿನ ಸಂವಾದದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಎಚ್‍ಎಎಲ್ ಸಂಸ್ಥೆ ಸುಮಾರು 78 ವರ್ಷಗಳ ಹಳೆಯ ಸಂಸ್ಥೆಯಾಗಿದ್ದು, ಹಲವು ಮಾದರಿಯ ವಿಮಾನಗಳು, ಹೆಲಿಕಾಪ್ಟರ್ ಗಳನ್ನು ತಯಾರಿಸುತ್ತಿದೆ. ಅಲ್ಲದೇ ದೇಶದ ವೈಮಾನಿಕ ರಂಗಕ್ಕೆ ತನ್ನದೇ ಆದ ಕೊಡುಗೆಯನ್ನು ನೀಡಿದೆ. ದೇಶದ ಬೆನ್ನೆಲುಬು ನಮ್ಮ ರಕ್ಷಣಾ ಕ್ಷೇತ್ರ. ಆದರೆ ಕೇಂದ್ರ ಸರ್ಕಾರ ರಫೇಲ್ ಯುದ್ಧ ವಿಮಾನದ ಒಪ್ಪಂದವನ್ನು ಬೇರೆ ಸಂಸ್ಥೆಗೆ ನೀಡಿದೆ. ಝೀರೋ ಪರ್ಸೆಂಟ್ ಅನುಭವವಿಲ್ಲದವರಿಗೆ ಟೆಂಡರ್ ನೀಡುವ ಮೂಲಕ ಎಚ್‍ಎಎಲ್ ಸಂಸ್ಥೆಗೆ ಕೇಂದ್ರ ಅವಮಾನ ಮಾಡಿದೆ ಎಂದು ದೂರಿದರು.

ನಾನು ನಿಮ್ಮೊಂದಿಗೆ ಯಾವುದೇ ರಾಜಕೀಯ ಭಾಷಣ ಮಾಡಲು ಬಂದಿಲ್ಲ. ಕೇವಲ ಕೇಂದ್ರ ಸರ್ಕಾರ ಭ್ರಷ್ಟಚಾರದ ಬಗ್ಗೆ ಮಾತನಾಡಲು ನನಗೆ ವೇದಿಕೆ ಸಿಕ್ಕಿದೆ. ಎಚ್‍ಎಎಲ್ ದೇಶಕ್ಕೆ ನೀಡಿದ್ದ ಕೊಡುಗೆಗಳ ಬಗ್ಗೆ ಮಾತನಾಡಲು ನಾನು ಬಂದಿದ್ದೇನೆ. ಇಲ್ಲಿ ಸೇರಿರುವ ನಿಮಗೆಲ್ಲ ಅಭಿನಂದನೆಗಳು. ಭಾರತದ ವೈಮಾನಿಕ ಕ್ಷೇತ್ರಕ್ಕೆ ತನ್ನದೆಯಾದ ಕೊಡುಗೆಯನ್ನು ನೀಡಿರುವ ಸಂಸ್ಥೆ ಹಾಗೂ 70 ವರ್ಷಗಳ ನೌಕರರ ಶ್ರಮಕ್ಕೆ ಕೇಂದ್ರ ಸರ್ಕಾರ ಅಪಮಾನ ಮಾಡಿದೆ. ಎಚ್‍ಎಎಲ್ ರಫೇಲ್ ಯುದ್ಧ ವಿಮಾನ ತಯಾರಿಸುವ ಸಾಕಷ್ಟು ಸಾಮರ್ಥ್ಯ ಹೊಂದಿದೆ. ಆದರೆ ಪ್ರಧಾನಿ ಮೋದಿಯವರು ಅನಿಲ್ ಅಂಬಾನಿಯವರಿಗೆ ಸಹಾಯ ಮಾಡುತ್ತಿದ್ದಾರೆ ಎಂದು ಮತ್ತೊಮ್ಮೆ ಆರೋಪಿಸಿದರು.

ಈ ಒಪ್ಪಂದದಲ್ಲಿ ಅನಿಲ್ ಅಂಬಾನಿಗೆ ಯಾವುದೇ ಅನುಭವವಿಲ್ಲ. ಎಚ್‍ಎಎಲ್ ಸಂಸ್ಥೆ ನಷ್ಟದಲ್ಲಿಲ್ಲ, ಆದರೆ ರಿಲಯನ್ಸ್ ನಷ್ಟದಲ್ಲಿದೆ. ಅನಿಲ್ ಅಂಬಾನಿಗಾಗಿ ಎಚ್‍ಎಎಲ್ ಸಂಸ್ಥೆಯನ್ನು ನಾಶ ಮಾಡುತ್ತಿದ್ದಾರೆ. ಪ್ರಧಾನಿ ಮೋದಿಯವರು ಅನಿಲ್ ಅಂಬಾನಿ ಒಡೆತನದ ಸಂಸ್ಥೆಗೆ ರಫೇಲ್ ಒಪ್ಪಂದ ನೀಡುವ ಮೂಲಕ ದೇಶದ ಸಾವಿರಾರು ಜನರ ಉದ್ಯೋಗವನ್ನು ಕಿತ್ತುಕೊಂಡಿದ್ದಾರೆ. ಅಲ್ಲದೇ 35,000 ಕೋಟಿ ರೂಪಾಯಿ ಕೊಟ್ಟು ಒಪ್ಪಂದ ಮಾಡುವಲ್ಲಿ ಪ್ರಧಾನಿ ಉತ್ಸುಕರಾಗಿದ್ದಾರೆ. ಸತ್ಯ ಇವತ್ತು ಕೇಂದ್ರದವರಿಗೆ ಬೇಕಾಗಿಲ್ಲ. ಮಾಧ್ಯಮಗಳು ಕೂಡ ಸತ್ಯವನ್ನ ಮರೆಮಾಚುತ್ತಿವೆ ಎಂದು ಆರೋಪಿಸಿದರು.

ಎಚ್‍ಎಎಲ್ ಅನ್ನು ದೇವಾಲಯಕ್ಕೆ ಹೋಲಿಸಿ ಮಾತನಾಡಿದ ಅವರು, ಇದು ನವಭಾರತದ ದೇವಾಲಯವಿದ್ದಂತೆ ಆದರೆ ಇದನ್ನು ಪ್ರೀತಿಸಲು ನಮ್ಮಿಂದ ಆಗುತ್ತಿಲ್ಲ. 70 ವರ್ಷಗಳ ಸಾಧನೆ ಮತ್ತು ಮಹತ್ವದ ಕೆಲಸವನ್ನು ಯಾರೂ ಗಮನಿಸುತ್ತಿಲ್ಲ. ಕೇಂದ್ರ ಸರ್ಕಾರದ ಹಿರಿಯರೊಬ್ಬರು ಎಚ್‍ಎಎಲ್ ಸಾಮರ್ಥ್ಯ ವಿಲ್ಲವೆಂದು ಹೇಳುತ್ತಿದ್ದಾರೆ. ನಾನು ಅವರನ್ನು ಕೇಳುತ್ತೇನೆ ನಿಮಗಿರುವ ಸಾಮಥ್ರ್ಯವಾದರೂ ಏನು? ನಾನು ಚಿಕ್ಕವನಿದ್ದಾಗಿನಿಂದಲೂ ಎಚ್‍ಎಎಲ್ ಸಾಧನೆಗಳ ಬಗ್ಗೆ ಕೇಳಿಕೊಂಡು ಬೆಳೆದಿದ್ದೇನೆ. ಇದನ್ನು ನೋಡುವ ದೃಷ್ಟಿಕೋನ ನಮ್ಮ ಸರ್ಕಾರಕ್ಕಿಲ್ಲ. ಸರ್ಕಾರ ನಿಮ್ಮ ಬಳಿ ಕ್ಷಮೆ ಕೇಳದಿದ್ದರೆ ನಾನು ನಿಮ್ಮನ್ನು ಕ್ಷಮೆ ಕೋರುತ್ತೇನೆ. ರಫೇಲ್ ಗುತ್ತಿಗೆ ನಿಮ್ಮ ಹಕ್ಕು, ಆ ಹಕ್ಕಿಗೆ ನಿಮ್ಮ ಜೊತೆ ನಾನು ಶ್ರಮಿಸುತ್ತೇನೆ. ದಿನದ 24 ಗಂಟೆಯೂ ಹೋರಾಟ ಮಾಡಲು ನಾನು ಸಿದ್ಧನಿದ್ದೇನೆ ಎಂದು ತಿಳಿಸಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *