ದೇಶದಲ್ಲಿ ಇ-ಸಿಗರೇಟ್ ನಿಷೇಧ – ಮಾರಾಟ ಮಾಡಿದ್ರೆ ಬೀಳುತ್ತೆ ಭಾರೀ ದಂಡ

Public TV
2 Min Read

ನವದೆಹಲಿ: ದೇಶದಲ್ಲಿ ಎಲೆಕ್ಟ್ರಾನಿಕ್ ಸಿಗರೇಟ್ ನಿಷೇಧಿಸುವ ಮಹತ್ವದ ನಿರ್ಧಾರವನ್ನು ಕೇಂದ್ರ ಸಚಿವ ಸಂಪುಟ ಇಂದು ತೆಗೆದುಕೊಂಡಿದೆ.

ಎಲೆಕ್ಟ್ರಾನಿಕ್ ನಿಕೋಟಿನ್ ಡೆಲಿವರಿ ಸಿಸ್ಟಮ್ (ಇಎನ್‍ಡಿಎಸ್) ಎಂದು ಕರೆಯಲ್ಪಡುವ ಇ-ಸಿಗರೇಟ್‍ಗಳು ದೇಶದಲ್ಲಿ ವ್ಯಾಪಕ ಜನಪ್ರಿಯತೆಯನ್ನು ಗಳಿಸಿದೆ. ಆದರೆ ಇವುಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಹೀಗಾಗಿ ಇ-ಸಿಗರೇಟ್ ಮೇಲೆ ನಿಷೇಧ ಹೇರಬೇಕು ಎಂಬ ಕೂಗು ಹಲವು ವರ್ಷಗಳಿಂದ ಕೇಳಿ ಬಂದಿತ್ತು.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಕೇಂದ್ರ ಸಚಿವ ಸಂಪುಟದಲ್ಲಿ ಈ ಮಹತ್ವದ ನಿರ್ಧಾರ ತೆಗೆದುಕೊಳ್ಳಲಾಗಿದೆ. ಸಭೆ ಬಳಿಕ ಕೇಂದ್ರ ಸಚಿವ ಪ್ರಕಾಶ್ ಜಾವ್ಡೇಕರ್ ಜೊತೆಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಜಂಟಿ ಸುದ್ದಿಗೋಷ್ಠಿ ನಡೆಸಿ, ಸುಗ್ರೀವಾಜ್ಞೆ ಹೊರಡಿಸಿ ಸಂಪುಟದ ತೀರ್ಮಾನಗಳನ್ನು ಪ್ರಕಟಿಸಿದ್ದಾರೆ.

ಇ-ಸಿಗರೇಟ್ ಬಳಕೆದಾರರಿಗೆ ಅಷ್ಟೇ ಅಲ್ಲದೆ ಉತ್ಪಾದನೆ, ಸಂಗ್ರಹಣೆ, ಮಾರಾಟ ಮಾಡುವವರಿಗೆ ಭಾರೀ ದಂಡ ವಿಧಿಸಲು ತೀರ್ಮಾನ ತೆಗೆದುಕೊಳ್ಳಲಾಗಿದೆ. ಮೊದಲು ಬಾರಿಗೆ ಈ ಪ್ರಕರಣದಲ್ಲಿ ಸಿಕ್ಕಿಬಿದ್ದರೆ 1 ಲಕ್ಷ ರೂ.ದಂಡ ಇಲ್ಲವೇ ಒಂದು ವರ್ಷ ಜೈಲು ಶಿಕ್ಷೆ ಅಥವಾ ಎರಡಕ್ಕೂ ಗುರಿಯಾಗುತ್ತಾರೆ. ಒಂದು ವೇಳೆ ಎರಡನೇ ಬಾರಿಯೂ ಇದೇ ಅಪರಾಧ ಎಸಗಿದರೆ 5 ಲಕ್ಷ ರೂ. ದಂಡ ಇಲ್ಲವೇ 3 ವರ್ಷ ಜೈಲು ಶಿಕ್ಷೆ ಅಥವಾ ಎರಡನ್ನು ಅನುಭವಿಸಬೇಕಾಗುತ್ತದೆ.

ಇ-ಸಿಗರೇಟ್‍ನ ಉತ್ಪಾದನೆ, ಆಮದು, ರಫ್ತು, ಸಾಗಾಟ, ಮಾರಾಟ, ವಿತರಣೆ, ಸಂಗ್ರಹಣೆ ಹಾಗೂ ಜಾಹೀರಾತು ಎಲ್ಲವನ್ನೂ ನಿಷೇಧಿಸಲು ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಸಮ್ಮತಿ ಸಿಕ್ಕಿದೆ. ಇ-ಸಿಗರೇಟ್‍ನ ಚಟಕ್ಕೆ ಅಂಟಿಕೊಂಡವರಿಗೆ ಅದು ಆಹ್ಲಾದಕರ ಎನಿಸುತ್ತದೆ. ದೇಶದಲ್ಲಿ 400ಕ್ಕೂ ಅಧಿಕ ಇ-ಸಿಗರೇಟ್ ಬ್ರಾಂಡ್‍ಗಳಿವೆ. ಆದರೆ ಯಾವ ಇ-ಸಿಗರೇಟ್ ಕೂಡ ಭಾರತದಲ್ಲಿ ತಯಾರಾಗುತ್ತಿಲ್ಲ. ಸದ್ಯ 150 ಫ್ಲೇವರ್ ನ ಇ-ಸಿಗರೇಟ್‍ಗಳು ಮಾರುಕಟ್ಟೆಯಲ್ಲಿವೆ ಎಂದು ವರದಿಯಾಗಿದೆ.

ಸರ್ಕಾರ ಮತ್ತು ಆರೋಗ್ಯ ಸಚಿವಾಲಯದ ಪರವಾಗಿ ಮಾತನಾಡಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕಾರ್ಯದರ್ಶಿ ಪ್ರೀತಿ ಸುಡಾನ್, ಇ-ಸಿಗರೇಟ್ ವಿಚಾರವಾಗಿ ಹೊರಹೊಮ್ಮುತ್ತಿರುವ ಅಂತರಾಷ್ಟ್ರೀಯ ಸಾಕ್ಷ್ಯಗಳನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಸಚಿವಾಲಯಕ್ಕೆ ಅನುಸಾರವಾಗಿ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಸಮಗ್ರ ದಾಖಲೆಗಳನ್ನು ಸಿದ್ಧ ಪಡಿಸಿದೆ. ಈ ಪ್ರಯತ್ನಗಳ ಫಲವಾಗಿ, ಶ್ವೇತಪತ್ರವನ್ನು ಉಲ್ಲೇಖಿಸಿ ಇ-ಸಿಗರೇಟ್ ಮತ್ತು ಇ-ಹುಕ್ಕಾಗಳನ್ನು ನಿಷೇಧಿಸಲು ಸಚಿವಾಲಯ ಶಿಫಾರಸು ಮಾಡಿದೆ. ನಿರ್ಧಾರವು ತಾಂತ್ರಿಕ ಸಲಹಾ ಸಮಿತಿಗಳ ಮೂಲಕ ಸಾಗಿದೆ ಎಂದು ತಿಳಿಸಿದ್ದಾರೆ.

ಐಸಿಎಂಆರ್ ಮೇ 2019ರಲ್ಲಿ ಬಿಡುಗಡೆ ಮಾಡಿದ ವರದಿಯಲ್ಲಿ ಕೆಲವು ಪ್ರಮುಖ ಅಂಶಗಳನ್ನು ತಿಳಿಸಲಾಗಿದೆ. ಇಎನ್‍ಡಿಎಸ್ ಹೆಚ್ಚು ವ್ಯಸನಕಾರಿ ನಿಕೋಟಿನ್ ದ್ರಾವಣವನ್ನು ಮಾತ್ರವಲ್ಲದೆ ಸುವಾಸನೆ ನೀಡುವ ಏಜೆಂಟ್ ಮತ್ತು ಆವಿಯಾಗುವಂತಹ ಇತರ ಅಪಾಯಕಾರಿ ವಸ್ತುಗಳನ್ನು ಸಹ ಒಳಗೊಂಡಿದೆ. ಇಎನ್‍ಡಿಎಸ್ ಉತ್ಪನ್ನಗಳ ಹಾನಿಕಾರಕ ಪರಿಣಾಮಗಳನ್ನು ಪಟ್ಟಿ ಮಾಡುವುದರ ಹೊರತಾಗಿ, ಈ ಉತ್ಪನ್ನಗಳು ತಂಬಾಕು ಚಟಕ್ಕೆ ಒಂದು ಗೇಟ್‍ವೇ ಆಗಿ ಕಾರ್ಯನಿರ್ವಹಿಸುತ್ತವೆ ಅಂತ ತಿಳಿದು ಬಂದಿದೆ ಎಂದು ಪ್ರೀತಿ ಸುಡಾನ್ ಮಾಹಿತಿ ನೀಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *