ರೋಹಿಣಿ ಸಿಂಧೂರಿಗೆ ಹಿನ್ನಡೆ, ಸರ್ಕಾರದ ಆದೇಶವನ್ನು ಎತ್ತಿ ಹಿಡಿದ ಸಿಎಟಿ

Public TV
2 Min Read

ಬೆಂಗಳೂರು: ಹಾಸನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿಗೆ ಹಿನ್ನಡೆಯಾಗಿದ್ದು, ಅವರನ್ನು ವರ್ಗಾವಣೆಗೊಳಿಸಿ ಸರ್ಕಾರ ಹೊರಡಿಸಿದ್ದ ಆದೇಶವನ್ನು ಕೇಂದ್ರೀಯ ಆಡಳಿತಾತ್ಮಕ ನ್ಯಾಯಮಂಡಳಿ(ಸಿಎಟಿ) ಎತ್ತಿ ಹಿಡಿದಿದೆ.

ಸಿಎಟಿ ರೋಹಿಣಿ ಅವರ ಅರ್ಜಿಯನ್ನು ವಜಾಗೊಳಿಸಿದೆ. ರಾಜ್ಯ ಸರ್ಕಾರ ಕಾನೂನುಬದ್ಧವಾಗಿ ಅಧಿಕಾರಿಯನ್ನು ವರ್ಗಾವಣೆ ಮಾಡಿದೆ ಎಂದು ವಾದಿಸಿದ್ದ ಹೆಚ್ಚುವರಿ ಅಡ್ವೊಕೇಟ್ ಜನರಲ್ ಎ.ಎಸ್.ಪೊನ್ನಣ್ಣ ವಾದವನ್ನು ಸಿಎಟಿ ಒಪ್ಪಿದ್ದು, ಆದೇಶ ಜಾರಿಯಾದ ದಿನದಿಂದಲೇ ವರ್ಗಾವಣೆ ಆದೇಶ ಜಾರಿ ಎಂದು ತಿಳಿಸಿದೆ.

ಆದೇಶದ ಪ್ರತಿ ಕೈ ಸೇರಿದ ಬಳಿಕ ಇದೇ 19 ರಂದು ಹೈಕೋರ್ಟ್ ನಲ್ಲಿ ರಿಟ್ ಅರ್ಜಿ ಸಲ್ಲಿಸಲಾಗುವುದು ಎಂದು ರೋಹಿಣಿ ಸಿಂಧೂರಿ ಪರ ವಕೀಲ ಸುಬ್ರಹ್ಮಣ್ಯ ಜೋಯಿಸ್ ತಿಳಿಸಿದ್ದಾರೆ.ಇದನ್ನೂ ಓದಿ: ರೋಹಿಣಿ ಸಿಂಧೂರಿ ಯಾರು? ಈ ಹಿಂದೆ ಅವರು ಮಾಡಿದ್ದ ಕೆಲಸಗಳು ಏನು?

ಏನಿದು ಪ್ರಕರಣ?
ನಿಯಮಗಳ ವಿರುದ್ಧವಾಗಿ ಅವಧಿಗೂ ಮುನ್ನ ವರ್ಗಾವಣೆ ಮಾಡಿದ್ದನ್ನು ಪ್ರಶ್ನಿಸಿ ರೋಹಿಣಿ ಸಿಂಧೂರಿ ಅವರು ಸಿಎಟಿ ಮೊರೆ ಹೋಗಿದ್ದರು. ರೋಹಿಣಿ ಸಿಂಧೂರಿ ವರ್ಗಾವಣೆ ಆದೇಶವನ್ನು ಮಾ.6 ರಂದು ಹಿಂದಕ್ಕೆ ಪಡೆದಿದ್ದ ರಾಜ್ಯ ಸರ್ಕಾರ ಮಾ.7 ರಂದು ವರ್ಗಾವಣೆ ಮಾಡಿತ್ತು. ಒಟ್ಟು 12 ಐಎಎಸ್ ಅಧಿಕಾರಿಗಳನ್ನು ಸರ್ಕಾರ ವರ್ಗಾವಣೆ ಮಾಡಿದ್ದು ರೋಹಿಣಿ ಅವರನ್ನು ಉದ್ಯೋಗ ಮತ್ತು ತರಬೇತಿ ಇಲಾಖೆ ಆಯುಕ್ತರನ್ನಾಗಿ ನೇಮಿಸಿ ವರ್ಗಾವಣೆ ಆದೇಶ ಹೊರಡಿಸಿತ್ತು.

ಮತದಾರರ ಪಟ್ಟಿ ಪರಿಷ್ಕರಣೆ ಸಂದರ್ಭದಲ್ಲಿ ಜ.22 ರಂದು ರೋಹಿಣಿ ಅವರನ್ನು ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮ(ಕೆಎಸ್‍ಐಐಡಿಸಿ) ಆಡಳಿತ ನಿರ್ದೇಶಕಿಯನ್ನಾಗಿ ನೇಮಿಸಿ ಹಠಾತ್ ವರ್ಗಾವಣೆ ಮಾಡಿದ್ದ ಸರ್ಕಾರದ ಆದೇಶಕ್ಕೆ ಕೇಂದ್ರ ಚುನಾವಣಾ ಆಯೋಗ ತಡೆ ನೀಡಿತ್ತು. ಸರ್ಕಾರದ ಕ್ರಮಕ್ಕೆ ಸಾರ್ವಜನಿಕ ವಲಯದಿಂದಲೂ ಟೀಕೆ ಕೇಳಿ ಬಂದಿತ್ತು.

ಫೆಬ್ರವರಿ 28ಕ್ಕೆ ಮತದಾರರ ಪಟ್ಟಿ ಪರಿಷ್ಕರಣೆ ನಡೆಯಲಿದ್ದು, ಮತದಾರ ಪಟ್ಟಿ ಪರಿಷ್ಕರಣೆ ಮುಗಿಯುವವರೆಗೆ ವರ್ಗಾವಣೆ ಬೇಡ. ವರ್ಗಾವಣೆ ಆದೇಶ ಜಾರಿಯನ್ನು ಕೂಡಲೇ ನಿಲ್ಲಿಸಬೇಕು. ಚುನಾವಣಾ ಪ್ರಕ್ರಿಯೆಯಲ್ಲಿ ತೊಡಗಿರುವವರನ್ನ ಅದೇ ಸ್ಥಾನದಲ್ಲಿ ಮುಂದುವರಿಸಬೇಕು. ವರ್ಗಾವಣೆ ಬಗ್ಗೆ ಕೇಂದ್ರ ಚುನಾವಣಾ ಆಯೋಗದ ಗಮನಕ್ಕೆ ತರಬೇಕು. ವರ್ಗಾಯಿತ ಜಿಲ್ಲೆಗಳಿಗೆ ತೆರಳದಂತೆ 7 ಜಿಲ್ಲಾಧಿಕಾರಿಗಳಿಗೂ ಚುನಾವಣಾ ಆಯೋಗ ಈ ಹಿಂದೆ ಸೂಚನೆ ನೀಡಿತ್ತು.

ರೋಹಿಣಿ ಪರ ಹಿರಿಯ ವಕೀಲ ಸುಬ್ರಹ್ಮಣ್ಯ ಜೋಯಿಸ್ ವಾದ ಮಂಡಿಸಿದರೆ, ಸರ್ಕಾರದ ಪರವಾಗಿ ಹೆಚ್ಚುವರಿ ಅಡ್ವೊಕೇಟ್ ಜನರಲ್ ಎಎಸ್ ಪೊನ್ನಣ್ಣ ವಾದ ಮಾಡಿದ್ದರು. ಸಾರ್ವಜನಿಕ ಉದ್ದೇಶಕ್ಕಾಗಿ ರೋಹಿಣಿ ಅವರನ್ನು ವರ್ಗಾವಣೆ ಮಾಡಲಾಗಿದೆ. ಇದರಲ್ಲಿ ಕನಿಷ್ಠ ಎರಡು ವರ್ಷದ ನಿಯಮ ಅನ್ವಯವಾಗುವುದಿಲ್ಲ. ಐಎಎಸ್ ಅಧಿಕಾರಿಗಳ ವರ್ಗಾವಣೆಗೆ ಯಾವುದೇ ರೀತಿಯ ಮಂಡಳಿ ಇಲ್ಲ. ಮಂಡಳಿ ಇದ್ದರೆ ಮಾತ್ರ ನಿಯಮಗಳು ಅನ್ವಯ ಆಗುತ್ತವೆ. ಸಾರ್ವಜನಿಕ ಹಿತಾಸಕ್ತಿಯಿಂದ ವರ್ಗಾವಣೆ ಮಾಡಲಾಗಿದೆ ಎಂದು ಪೊನ್ನಣ್ಣ ವಾದಿಸಿದ್ದರು.

ರೋಹಿಣಿ ಪರ ಹಿರಿಯ ವಕೀಲ ಜೋಯಿಸ್, ರಾಜ್ಯದ ಮುಖ್ಯಮಂತ್ರಿಗಳಾಗಿ ನಿಯಮಗಳನ್ನು ಮೀರುವಂತಿಲ್ಲ. ಇಲ್ಲಿ ಯಾವುದೇ ಸಾರ್ವಜನಿಕ ಹಿತಾಸಕ್ತಿ ಇಲ್ಲ. ಎಲ್ಲಾ ವೈಯಕ್ತಿಕ ಹಿತಾಸಕ್ತಿಯಿಂದ ಕೂಡಿದ ವರ್ಗಾವಣೆ ಇದು. ಅವಧಿಗಿಂತ ಮುಂಚೆ ವರ್ಗಾವಣೆ ಮಾಡಿದರೆ ಅದಕ್ಕೆ ಸೂಕ್ತ ಕಾರಣಗಳನ್ನು ನೀಡಲೇಬೇಕು. ಕಾರಣಗಳಿಲ್ಲದೆ ವರ್ಗಾವಣೆ ಮಾಡುವಂತಿಲ್ಲ. ವರ್ಗಾವಣೆಗೂ ಮುನ್ನ ನೋಟಿಸ್ ನೀಡಬೇಕು ಎಂದು ವಾದಿಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *