– ವೆಬ್‌ಪೋರ್ಟಲ್ ಮೂಲಕ ಸ್ವಯಂ ಗಣತಿಗೂ ಅವಕಾಶ
ಬೆಂಗಳೂರು: ಇಲ್ಲಿನ ಪೂರ್ವ ನಗರಪಾಲಿಕೆ ವ್ಯಾಪ್ತಿಯಲ್ಲಿ ರಾಷ್ಟ್ರೀಯ ಜನಗಣತಿ–2027ರ (Census 2027) ಪ್ರಯುಕ್ತ ಏಪ್ರಿಲ್ 1 ರಿಂದ ಮನೆ ಪಟ್ಟಿ ಮತ್ತು ಮನೆ ಗಣತಿ (House Census) ಕಾರ್ಯ ಆರಂಭವಾಗಲಿದೆ. ಜನಗಣತಿ ಕಾರ್ಯವನ್ನ ಸಮರ್ಪಕವಾಗಿ ಹಾಗೂ ಸಮಯೋಚಿತವಾಗಿ ಕೈಗೊಳ್ಳುವ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನ ಕೈಗೊಳ್ಳಲಾಗುತ್ತಿದೆ ಎಂದು ಪೂರ್ವ ನಗರ ಪಾಲಿಕೆ ಆಯುಕ್ತರಾದ ಡಿ.ಎಸ್ ರಮೇಶ್ ಅವರು ತಿಳಿಸಿದರು.
ರಾಜ್ಯ ಸರ್ಕಾರದ (Karnatka Government) ಆದೇಶದ ಮೇರೆಗೆ ಜನಗಣತಿ–2027ರ ಪ್ರಥಮ ಹಂತದಲ್ಲಿ ಮನೆಪಟ್ಟಿ ಮತ್ತು ಮನೆ ಗಣತಿ ಕಾರ್ಯಾಚರಣೆಗೆ ಸಂಬಂಧಿಸಿದಂತೆ ಪೂರ್ವ ಸಿದ್ಧತಾ ಕಾರ್ಯಗಳನ್ನ ವೇಗಗೊಳಿಸಲಾಗಿದ್ದು, ನಾಗರಿಕರು ತಮ್ಮ ಮನೆ ಹಾಗೂ ಕುಟುಂಬದ ಮೂಲಭೂತ ಮಾಹಿತಿಯನ್ನ ನಿಖರವಾಗಿ ದಾಖಲಿಸುವುದು ಅತ್ಯಂತ ಮಹತ್ವದ್ದಾಗಿರುತ್ತದೆ ಎಂದು ಆಯುಕ್ತರು ಈ ಸಂದರ್ಭದಲ್ಲಿ ತಿಳಿಸಿದರು. ಇದನ್ನೂ ಓದಿ: ಪ್ಲಾಸ್ಟಿಕ್ ಬಾಟಲಿಗೆ ಪೆಟ್ರೋಲ್ ಹಾಕದ್ದಕ್ಕೆ ಆಕ್ರೋಶ – ಚಿಕ್ಕಬಳ್ಳಾಪುರದಲ್ಲಿ ಬಂಕ್ ಕ್ಲೋಸ್ ಮಾಡಿಸಿದ ರೈತರು
ಕೇಂದ್ರ ಗೃಹ ಮಂತ್ರಾಲಯವು 2027ರ ಜನಗಣತಿಯನ್ನು 2 ಹಂತಗಳಲ್ಲಿ ನಡೆಸಲು ಉದ್ದೇಶಿಸಿದ್ದು, ಮೊದಲ ಹಂತದಲ್ಲಿ ಮನೆಪಟ್ಟಿ ಮತ್ತು ಮನೆ ಗಣತಿಯನ್ನು ಏಪ್ರಿಲ್ 01 ರಿಂದ ಏಪ್ರಿಲ್ 15 ರ ವರೆಗೆ 15 ದಿನಗಳ ಕಾಲ ವೆಬ್ ಪೋರ್ಟಲ್ https://se.census.gov.in ಮೂಲಕ ಸ್ವಯಂ-ಗಣತಿಗೆ ಅವಕಾಶ ಕಲ್ಪಿಸಿದೆ. ಅದರಂತೆ, ಮನೆಯ ಯಾವುದೇ ಒಬ್ಬ ಸದಸ್ಯರು ಸುಮಾರು 15-20 ನಿಮಿಷಗಳ ಅವಧಿಯಲ್ಲಿ ಸ್ವಯಂ-ಗಣತಿ ಮಾಡಿ ಮನೆಯ ವಿವರಗಳನ್ನು ಒದಗಿಸಬಹುದು ಮತ್ತು ಮೊಬೈಲ್/ಇಮೇಲ್‌ನಲ್ಲಿ ಸ್ವಯಂ-ಗಣತಿ ಐಡಿಯನ್ನು ಪಡೆಯಬಹುದಾಗಿರುತ್ತದೆ.
ಜನಗಣತಿ-2027ರ 2ನೇ ಹಂತದಲ್ಲಿ ಏ.16 ರಿಂದ ಮೇ 15 ರ ವರೆಗೆ ಗಣತಿದಾರರು ಮನೆ-ಮನೆಗೆ ಭೇಟಿ ನೀಡಿ ಮನೆಪಟ್ಟಿ ಮತ್ತು ಮನೆ ಗಣತಿ ಮಾಹಿತಿಯನ್ನು ಸಂಗ್ರಹಿಸಲಿದ್ದಾರೆ. ಗಣತಿದಾರರು ಮನೆಗೆ ಭೇಟಿ ನೀಡಿದಾಗ, ದೃಢೀಕರಿಸಲು ಮತ್ತು ಸ್ವಯಂ-ಗಣತಿ ದತ್ತಾಂಶದ ಅಂತಿಮ ಸಲ್ಲಿಕೆಗಾಗಿ ಸ್ವಯಂ-ಗಣತಿ ಐಡಿಯನ್ನು ಗಣತಿದಾರರೊಂದಿಗೆ ಹಂಚಿಕೊಳ್ಳಬೇಕಾಗಿರುತ್ತದೆ. ಸ್ವಯಂ ಗಣತಿ ಪ್ರಕ್ರಿಯೆಗಾಗಿ ನಿಗದಿಪಡಿಸಿರುವ ಅವಧಿಯಲ್ಲಿ ನಾಗರಿಕರು ತಮ್ಮ ಮಾಹಿತಿಯನ್ನು ದಾಖಲಿಸಲು ಅವಕಾಶವಿದ್ದು, ಇದರಿಂದ ಜನಗಣತಿ ಕಾರ್ಯದಲ್ಲಿ ಪಾರದರ್ಶಕತೆ, ವೇಗ ಮತ್ತು ನಿಖರತೆ ಹೆಚ್ಚಲಿದೆ ಎಂದು ಆಯುಕ್ತರು ವಿವರಿಸಿದರು. ಇದನ್ನೂ ಓದಿ: ಕುವೈತ್ ಮೇಲೆ ಇರಾನ್ ದಾಳಿ – ವಿದ್ಯುತ್ ಸ್ಥಾವರದಲ್ಲಿದ್ದ ಭಾರತೀಯ ಕಾರ್ಮಿಕ ಸಾವು
ಸಮಗ್ರ ಅಭಿವೃದ್ಧಿಗೆ ಪೂರಕ ಹೆಜ್ಜೆ
ಜನಗಣತಿ–2027ರ ಮಾಹಿತಿಯ ಆಧಾರದ ಮೇಲೆ ಭವಿಷ್ಯದ ನಗರ ಯೋಜನೆ, ಮೂಲಸೌಕರ್ಯ ಅಭಿವೃದ್ಧಿ ಹಾಗೂ ಸಾರ್ವಜನಿಕ ಕಲ್ಯಾಣ ಕಾರ್ಯಕ್ರಮಗಳನ್ನು ರೂಪಿಸಲಾಗುತ್ತದೆ. ಆದ್ದರಿಂದ, ಎಲ್ಲಾ ನಾಗರಿಕರು ಸ್ವಯಂ ಗಣತಿಯಲ್ಲಿ ತಮ್ಮ ಸರಿಯಾದ ಮಾಹಿತಿಯನ್ನ ಒದಗಿಸುವ ಮೂಲಕ ಜನಗಣತಿ ಪ್ರಕ್ರಿಯೆಯಲ್ಲಿ ನಾಗರಿಕರ ಸಹಭಾಗಿತ್ವ ಅತ್ಯಂತ ಅಗತ್ಯವಾಗಿದೆ ಎಂದು ಆಯುಕ್ತರು ತಿಳಿಸಿದರು.
ಸಾರ್ವಜನಿಕರಿಗೆ ಮನವಿ
ಬೆಂಗಳೂರು ಪೂರ್ವ ನಗರ ಪಾಲಿಕೆ ವ್ಯಾಪ್ತಿಯ ಸಾರ್ವಜನಿಕರು ಸ್ವಯಂ ಗಣತಿ ವ್ಯವಸ್ಥೆಯನ್ನು ಬಳಸಿಕೊಂಡು ತಮ್ಮ ಮಾಹಿತಿಯನ್ನ ಸಲ್ಲಿಸುವಂತೆ ಹಾಗೂ ಗಣತಿದಾರ ಸಿಬ್ಬಂದಿಗೆ ಸಹಕರಿಸುವಂತೆ ಈ ಮೂಲಕ ಸಾರ್ವಜನಿಕರಲ್ಲಿ ಆಯುಕ್ತರು ಮನವಿ ಮಾಡಿದರು. ಇದನ್ನೂ ಓದಿ: ಅಕ್ರಮ ಸಂಬಂಧಕ್ಕೆ ಬಿತ್ತು ಹೆಣ – ಮಹಿಳೆಯನ್ನ ಕೊಂದು ಅರ್ಧ ದೇಹವನ್ನ ಫ್ರಿಡ್ಜ್‌ನಲ್ಲಿಟ್ಟಿದ್ದ ನೌಕಾಪಡೆ ಉದ್ಯೋಗಿ




