ಸ್ಮಶಾನದ ಜಾಗಕ್ಕೆ ಪೊಲೀಸರಿಂದ ಬೇಲಿ – ಶವ ಮಣ್ಣು ಮಾಡಲು ಪರದಾಡುತ್ತಿದ್ದಾರೆ ದಲಿತರು

Public TV
1 Min Read

ರಾಮನಗರ: ಪೊಲೀಸ್ ಇಲಾಖೆಯ ಅಧಿಕಾರಿಗಳು ಸ್ಮಶಾನದ ಜಾಗಕ್ಕೆ ಬೇಲಿ ಹಾಕಿರುವುದರಿಂದ ಸಿಎಂ ಸ್ವಕ್ಷೇತ್ರ ಚನ್ನಪಟ್ಟಣದಲ್ಲೇ ದಲಿತರಿಗೆ ಸ್ಮಶಾನಕ್ಕೆ ಜಾಗವಿದ್ದರೂ ಅಂತ್ಯಸಂಸ್ಕಾರಕ್ಕೆ ಪರದಾಡುತ್ತಿರುವ ಘಟನೆ ನಡೆದಿದೆ.

ಚನ್ನಪಟ್ಟಣ ತಾಲೂಕಿನ ವಂದಾರಗುಪ್ಪೆ ಸಮೀಪದ ಕರಿಕಲ್ ದೊಡ್ಡಿ ಗ್ರಾಮದ ಪರಿಶಿಷ್ಟ ಜಾತಿ ಹಾಗೂ ಪಂಗಡದ ಜನರು ಸ್ಮಶಾನವಿದ್ದರೂ ಅದನ್ನು ಬಳಸದಂತಾಗಿದೆ. 2016 ರಲ್ಲಿ ಜಿಲ್ಲಾಧಿಕಾರಿಗಳು ಹೊನ್ನಿಗನಹಳ್ಳಿ ಗ್ರಾಮದ ಸರ್ಕಾರಿ ಗೋಮಾಳ ಸರ್ವೇ ನಂಬರ್ 46 ಪಿ 1ರಲ್ಲಿ 1 ಎಕರೆ ಜಮೀನನ್ನ ಸ್ಮಶಾನಕ್ಕೆ ಮಂಜೂರು ಮಾಡಿದ್ದರು. ಆದರೆ ಗ್ರಾಮದ ಪಕ್ಕದಲ್ಲಿನ ಪೊಲೀಸ್ ತರಬೇತಿ ಕೇಂದ್ರವು ಸ್ಮಶಾನಕ್ಕೆ ನೀಡಿದ್ದ ಜಾಗವನ್ನ ತನ್ನದೆಂದು ಹೇಳಿ ತಡೆಗೋಡೆ ನಿರ್ಮಿಸಿಕೊಂಡಿದೆ.

ಈ ಬಗ್ಗೆ ಸಾಕಷ್ಟು ಬಾರಿ ಜಿಲ್ಲಾಡಳಿತ, ಸಿಎಂ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಸ್ಮಶಾನಕ್ಕಾಗಿ ಹೋರಾಟ ನಡೆಸಿದ್ದ ಗ್ರಾಮದ ಕಾಳಯ್ಯನ ಶವವನ್ನೇ ಸ್ಮಶಾನಕ್ಕೆ ಜಾಗ ಸಿಕ್ಕಿದ ನಂತರವೂ ಕೆರೆಯಲ್ಲಿ ಅಂತ್ಯಸಂಸ್ಕಾರ ನಡೆಸುವಂತಾಗಿದೆ. ಇಂದು ಸಾವನ್ನಪ್ಪಿದ ವ್ಯಕ್ತಿಯೊಬ್ಬರ ಶವವನ್ನ ಸ್ಮಶಾನದ ಜಾಗದಲ್ಲಿ ಅಂತ್ಯಸಂಸ್ಕಾರ ನಡೆಸಲು ಸಿದ್ದತೆ ನಡೆಸಿದಾಗ, ಪೊಲೀಸ್ ಬಂದೋಬಸ್ತ್ ಮೂಲಕ ಗ್ರಾಮಸ್ಥರನ್ನ ಹೆದರಿಸಿ, ಬೇರೆಡೆ ಅಂತ್ಯಸಂಸ್ಕಾರ ನಡೆಸುವಂತೆ ಮಾಡಲಾಗಿದೆ.

ಇದರಿಂದ ರೊಚ್ಚಿಗೆದ್ದಿರುವ ಜನರು ಮಂಜೂರಾಗಿರುವ ಸ್ಮಶಾನದ ಜಾಗ ಬಿಡದಿದ್ದಲ್ಲಿ ಮುಂದಿನ ದಿನಗಳಲ್ಲಿ ಶವವನ್ನ ತಹಶಿಲ್ದಾರ್ ಕಚೇರಿ, ಇಲ್ಲವೇ ಜಿಲ್ಲಾಧಿಕಾರಿ ಕಚೇರಿ ಎದುರು ಇಟ್ಟು ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *