ರಾಯಚೂರು: ಮಂತ್ರಾಲಯದಲ್ಲಿ ಗುರು ರಾಘವೇಂದ್ರ ಸ್ವಾಮಿಗಳ 354ನೇ ಆರಾಧನಾ ಮಹೋತ್ಸವಕ್ಕೆ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥ ಸ್ವಾಮಿ ಧ್ವಜಾರೋಹಣ ಮೂಲಕ ಚಾಲನೆ ನೀಡಿದರು. ಇಂದಿನಿಂದ ಏಳುದಿನಗಳ ಕಾಲ ಮಂತ್ರಾಲಯದಲ್ಲಿ ಸಪ್ತರಾತ್ರೋತ್ಸವ ವಿಜೃಂಭಣೆಯಿಂದ ನಡೆಯಲಿದೆ.
ಗೋ, ಗಜ,ಅಶ್ವ, ಧಾನ್ಯ,ಲಕ್ಷ್ಮಿ ಪೂಜೆಯೊಂದಿಗೆ ವಿದ್ಯುಕ್ತ ಚಾಲನೆ ಸಿಕ್ಕಿದೆ. ಆಗಸ್ಟ್ 8 ರಿಂದ 14 ರವರೆಗೆ ಏಳುದಿನಗಳ ಕಾಲ ಸಪ್ತರಾತ್ರೋತ್ಸವ ನಡೆಯಲಿದ್ದು ಆಗಸ್ಟ್ 10 ಕ್ಕೆ ಪೂರ್ವಾರಾಧನೆ, 11 ಕ್ಕೆ ಮಧ್ಯಾರಾಧನೆ, 12 ಕ್ಕೆ ಉತ್ತರಾರಾಧನೆ ನಡೆಯಲಿದೆ. ಇಂದಿನಿಂದ ಏಳು ದಿನಕಾಲ ರಾಯರ ಮಠದಲ್ಲಿ ವಿಶೇಷ ಪೂಜೆ ,ರಥೋತ್ಸವ, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ಉತ್ತರಾರಾಧನೆ ದಿನ ಮಠದ ರಾಜಬೀದಿಯಲ್ಲಿ ಮಹಾರಥೋತ್ಸವ ಜರುಗಲಿದೆ. ಆರಾಧಾನ ಮಹೋತ್ಸವ ಹಿನ್ನೆಲೆ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ಮಂತ್ರಾಲಯಕ್ಕೆ ಬರುವ ನಿರೀಕ್ಷೆಯಿದೆ. ಮಧುವಣಗಿತ್ತಿಯಂತೆ ಸಿಂಗಾರಗೊಂಡಿರುವ ಮಂತ್ರಾಲಯ ರಾಯರ ಮಠ ಭಕ್ತರನ್ನ ಆಕರ್ಷಿಸುತ್ತಿದೆ.