ಹಾಸನ: ಸರ್ಕಾರಿ ಕಚೇರಿಯಲ್ಲಿ (Government Office) ಖಾಸಗಿ ವ್ಯಕ್ತಿಯೊಬ್ಬರ ಹುಟ್ಟುಹಬ್ಬವನ್ನು (Birthday) ಸಂಭ್ರಮದಿಂದ ಆಚರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಕಲೇಶಪುರ (Sakleshpura) ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ (ಎಆರ್‌ಟಿಓ) ಎಸ್.ಎನ್.ಮಧುರಾ ಸೇರಿ ಮೂವರು ನೌಕರರನ್ನು ಸೇವೆಯಿಂದ ಅಮಾನತು (Suspend) ಮಾಡಲಾಗಿದೆ.
ಎಆರ್‌ಟಿಓ ಜೊತೆಗೆ ಕಚೇರಿ ಅಧೀಕ್ಷಕ ಎಂ.ಕೆ.ಗಿರೀಶ್, ಮೋಟಾರು ವಾಹನ ನಿರೀಕ್ಷಕಿ ಎನ್.ಆರ್.ಆಶಾ ಅಮಾನತುಗೊಂಡವರು. ಜು.11ರಂದು ಶುಕ್ರವಾರ ಡ್ರೈವಿಂಗ್ ಶಾಲೆಯೊಂದರ ಮುಖ್ಯಸ್ಥ ಮೋಹನ್ ಶೆಟ್ಟಿ ಎಂಬವರ ಹುಟ್ಟುಹಬ್ಬವನ್ನು ಕಚೇರಿಯಲ್ಲಿ ಆಚರಿಸಲಾಗಿತ್ತು. ಇದರ ಬಗ್ಗೆ ದೃಶ್ಯ ಮಾಧ್ಯಮಗಳಲ್ಲಿ ವರದಿ ಪ್ರಸಾರವಾಗಿತ್ತು. ಕರ್ತವ್ಯ ಲೋಪ ಎಸಗಿದ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕೆಂದು ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಸಾರಿಗೆ ಮತ್ತು ಶಿಸ್ತು ಪ್ರಾಧಿಕಾರ ಆಯುಕ್ತ ಎ.ಎಂ.ಯೋಗೀಶ್ ಅವರು ಮೂವರನ್ನು ಅಮಾನತು ಮಾಡಿ ಸೋಮವಾರ ಆದೇಶಿಸಿದ್ದಾರೆ. ಇದನ್ನೂ ಓದಿ: ದಾವಣಗೆರೆ ಶೃಂಗ ಸಮ್ಮೇಳನ – 15 ವರ್ಷಗಳ ಬಳಿಕ ಒಂದಾದ ಪಂಚಪೀಠಾಧೀಶರು
ಪ್ರಕರಣ ಕುರಿತು ಸ್ಪಷ್ಟನೆ ಕೋರಿದ್ದ ಮೇಲಧಿಕಾರಿಗಳಿಗೆ ಎಆರ್‌ಟಿಓ ಎಸ್.ಎನ್.ಮಧುರಾ ಅವರು ನೀಡಿದ ಸಮಜಾಯಿಷಿಯಲ್ಲಿ ಖಾಸಗಿ ವ್ಯಕ್ತಿ ಮೋಹನ್ ಶೆಟ್ಟಿ ಅವರನ್ನು ಪರ ಲಿಖಿತ ಹೇಳಿಕೆ ಕೊಟ್ಟಿದ್ದರು. ಆ ವ್ಯಕ್ತಿ ಡ್ರೈವಿಂಗ್ ಶಾಲೆಯ ಮುಖ್ಯಸ್ಥರಾಗಿದ್ದು, ಕಚೇರಿ ಆವರಣದ ಗೇಟ್ ಹಾಗೂ ಬೀಗದ ವ್ಯವಸ್ಥೆ ಉಚಿತವಾಗಿ ನೀಡಿದ ದಾನಿಗಳಾಗಿದ್ದಾರೆ. ಶುಕ್ರವಾರ ಎಂದಿನಂತೆ ಪೂಜೆ ಮಾಡುತ್ತಿದ್ದೆವು. ಮೋಹನ್ ಶೆಟ್ಟಿ ಅವರ ಹುಟ್ಟುಹಬ್ಬ ಹಾಗೂ ಕಚೇರಿಯಲ್ಲಿ ಆಚರಿಸುವ ಕುರಿತು ಮಾಹಿತಿ ಇರಲಿಲ್ಲ. ಏಕಾಏಕಿ ಕೇಕ್, ಶಾಲು, ಹಾರ ತಂದಿದ್ದರು. ನಾನು ಅವರಿಗೆ ಜನ್ಮ ದಿನದ ಶುಭಾಶಯ ಕೋರಿದ್ದೇನೆ ಹೊರತು ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡಿಲ್ಲವೆಂದು ತಿಳಿಸಿದ್ದರು. ಇವರಲ್ಲದೆ ಎಂ.ಕೆ.ಗಿರೀಶ್ ಹಾಗೂ ಎನ್.ಆರ್.ಆಶಾ ಸಹ ಇದೇ ರೀತಿ ಸಮಜಾಯಿಷಿ ನೀಡಿದ್ದಾರೆ. ಇದನ್ನೂ ಓದಿ: 1.25 ಲಕ್ಷ ಹಣ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದ ಮಹಿಳಾ ಪಿಎಸ್‌ಐ
ಎಎಆರ್‌ಟಿಓ ಹಾಗೂ ಇತರ ಇಬ್ಬರು ನೌಕರರ ಸಮಜಾಯಿಷಿಯನ್ನು ಪರಿಶೀಲಿಸಿದ ಮೇಲಧಿಕಾರಿಗಳು, ಸಂಭ್ರಮಾಚರಣೆಯಲ್ಲಿ ಭಾಗವಹಿಸಿದ್ದನ್ನು ಪರಿಗಣಿಸಿ ಅಮಾನತು ಮಾಡಿದ್ದಾರೆ. ಸರ್ಕಾರಿ ಕಚೇರಿಯಲ್ಲಿ ಗಣ್ಯ ವ್ಯಕ್ತಿಗಳ ಜಯಂತಿ ಮತ್ತು ಕಾರ್ಯಕ್ರಮ ಆಯೋಜಿಸಲು ಮಾತ್ರ ಅವಕಾಶವಿದೆ. ಪ್ರಸ್ತುತ ಪ್ರಕರಣದಲ್ಲಿ ಸರ್ಕಾರಿ ಕಚೇರಿಯಲ್ಲಿ ಖಾಸಗಿ ವ್ಯಕ್ತಿಯೊಬ್ಬರ ಹುಟ್ಟುಹಬ್ಬ ಆಚರಿಸುವುದು ಸಾಕ್ಷಿ ಸಮೇತ ಕಂಡುಬಂದಿದ್ದು, ಕಚೇರಿ ಶಿಸ್ತು ಉಲ್ಲಂಘನೆ ಮಾಡಿದ್ದಾರೆಂದು ಅಮಾನತು ಮಾಡಲಾಗಿದೆ. ಇದನ್ನೂ ಓದಿ: D-CET ಶುಲ್ಕ ಪಾವತಿಗೆ ದಿನಾಂಕ ವಿಸ್ತರಣೆ: KEA