ಕದನ ವಿರಾಮ ಉಲ್ಲಂಘನೆ; ಥೈಲ್ಯಾಂಡ್‌ – ಕಾಂಬೋಡಿಯಾ ನಡುವಿನ ಸಂಘರ್ಷಕ್ಕೆ ಕಾರಣವೇನು?

4 Min Read

ಡಿ ವಿಚಾರದಲ್ಲಿ ಥೈಲ್ಯಾಂಡ್‌ (Thailand) ಮತ್ತು ಕಾಂಬೋಡಿಯಾ (Cambodia) ನಡುವೆ ಮತ್ತೆ ಯುದ್ಧ ಮುಂದುವರಿದಿದೆ. ಈ ಯುದ್ಧ ಇದೀಗ ಎರಡನೇ ವಾರಕ್ಕೆ ಕಾಲಿಟ್ಟಿದೆ. ಗಡಿಯ ಅಪಾಯಕಾರಿ ಪ್ರದೇಶದಿಂದ ಸ್ಥಳಾಂತರಗೊಂಡ ಜನರು ಆಶ್ರಯ ಪಡೆದ ತಾಣಗಳ ಮೇಲೆಯೂ ಥೈಲ್ಯಾಂಡ್‌ ತೀವ್ರ ಬಾಂಬ್‌ ದಾಳಿ ನಡೆಸುತ್ತಿದೆ ಎಂದು ಕಾಂಬೋಡಿಯಾ ಹೇಳಿದೆ. ಹಾಗಿದ್ರೆ ಥೈಲ್ಯಾಂಡ್‌ -ಕಾಂಬೋಡಿಯಾ ನಡುವೆ ಯುದ್ಧ ನಡೆಯುತ್ತಿರುವುದೇಕೆ? ಎರಡು ಬೌದ್ಧ ದೇಶಗಳ ನಡುವಿನ ಸಂಘರ್ಷಕ್ಕೆ ಕಾರಣವೇನು ಎಂಬ ಕುರಿತು ಇಲ್ಲಿ ವಿವರಿಸಲಾಗಿದೆ.

ಜುಲೈ ಬಳಿಕ ಮೊದಲ ಬಾರಿಗೆ ಡಿ.8ರಂದು ಕಾಂಬೋಡಿಯಾದ ಮಿಲಿಟರಿ ನೆಲೆಗಳ ಮೇಲೆ ಥೈಲ್ಯಾಂಡ್‌ ವೈಮಾನಿಕ ದಾಳಿ ನಡೆಸಿದೆ. ಇದಕ್ಕೆ ಪ್ರತಿಕ್ರಿಯೆಯಾಗಿ ಕಾಂಬೋಡಿಯಾ ಸೇನೆಯೂ ದಾಳಿ ಮಾಡಿದೆ. ಇದೀಗ ಈ ಯುದ್ಧ ಎರಡನೇ ವಾರಕ್ಕೆ ಕಾಲಿಟ್ಟಿದೆ. ಒಡ್ಡರ್‌ ಮೀಂಚೆ ಪ್ರಾಂತ್ಯದ ಚೋಂಗ್‌ ಕಲ್‌ ಜಿಲ್ಲೆ ಮತ್ತು ಸೀಯೆಮ್‌ ರೀಪ್‌ ಪ್ರಾಂತ್ಯದ ಸ್ರೇಯಿ ಸ್ನಾಮ್‌ ಜಿಲ್ಲೆಯ ಗಡಿ ಪ್ರದೇಶಗಳಿಂದ ಸ್ಥಳಾಂತರಗೊಂಡಿರುವ ಜನರ ನಿರಾಶ್ರಿತ ಶಿಬಿರಗಳ ಬಳಿ ಥಾಯ್‌ನ ಎಫ್-16 ಯುದ್ಧ ವಿಮಾನಗಳು ಎರಡು ಬಾಂಬ್‌ ಹಾಕಿವೆ ಎಂದು ಕಾಂಬೋಡಿಯಾದ ರಕ್ಷಣಾ ಮತ್ತು ಮಾಹಿತಿ ಸಚಿವಾಲಯ ಹೇಳಿದೆ. ಉಭಯ ಬೌದ್ಧ ದೇಶಗಳ ನಡುವಿನ ಸೇನಾ ಸಂಘರ್ಷಕ್ಕೆ 900 ವರ್ಷಗಳ ಹಳೆಯ ಹಿಂದೂ ದೇಗುಲ ಕಾರಣ ಎಂದು ಹೇಳಲಾಗಿದೆ.

ಹೌದು, ಶಿವನಿಗೆ ಅರ್ಪಿತವಾದ 900 ವರ್ಷ ಹಳೆಯ ಪ್ರಿಯಾ ವಿಹಾರ್ ದೇವಾಲಯವು ಕಾಂಬೋಡಿಯಾದ ಡಾಂಗ್ರೆಕ್ ಪರ್ವತಗಳಲ್ಲಿ 525 ಮೀಟರ್ ಬಂಡೆಯ ಮೇಲೆ ನೆಲೆಗೊಂಡಿದೆ. ಪಶ್ಚಿಮಕ್ಕೆ ಸರಿಸುಮಾರು 95 ಕಿಮೀ ದೂರದಲ್ಲಿ 12ನೇ ಶತಮಾನದ ಶಿವ ದೇವಾಲಯವಾದ ತಾ ಮುಯೆನ್ ಥಾಮ್ ದೇವಾಲಯವಿದೆ. ಖಮೇರ್ ಸಾಮ್ರಾಜ್ಯದ ಅಡಿಯಲ್ಲಿ ನಿರ್ಮಿಸಲಾದ ಇದು ಕಾಂಬೋಡಿಯನ್ನರಿಗೆ ಮಾತ್ರವಲ್ಲದೆ ಥೈಲ್ಯಾಂಡ್‌ನವರಿಗೂ ಪವಿತ್ರ ಧಾರ್ಮಿಕ ಸ್ಥಳವಾಗಿದೆ.

ಯುದ್ಧಕ್ಕೆ ಕಾರಣವೇನು?
11 ನೇ ಶತಮಾನದ ಪ್ರಿಯಾ ವಿಹಾರ್ ದೇವಾಲಯವು ಥೈಲ್ಯಾಂಡ್ ಮತ್ತು ಕಾಂಬೋಡಿಯಾ ನಡುವಿನ ಯುದ್ಧಕ್ಕೆ ಕಾರಣವಾಗಿದೆ. ಈ ದೇವಾಲಯವು ಕಾಂಬೋಡಿಯಾದ ಪ್ರಿಯಾ ವಿಹಾರ್ ಪ್ರಾಂತ್ಯ ಮತ್ತು ಥೈಲ್ಯಾಂಡ್‌ನ ಸಿಸಾಕೆಟ್ ಪ್ರಾಂತ್ಯದ ಗಡಿಯಲ್ಲಿದೆ. 1962ರಲ್ಲಿ, ಅಂತರರಾಷ್ಟ್ರೀಯ ನ್ಯಾಯಾಲಯ (ICJ) ಈ ದೇವಾಲಯವು ಕಾಂಬೋಡಿಯಾಕ್ಕೆ ಸೇರಿದೆ ಎಂದು ತೀರ್ಪು ನೀಡಿತ್ತು. ಈ ಭೂಮಿ ತನಗೆ ಸೇರಿದೆ ಎಂದು ಥೈಲ್ಯಾಂಡ್ ಹೇಳುತ್ತದೆ.

ಈ ದೇವಾಲಯವನ್ನು 11ನೇ ಶತಮಾನದಲ್ಲಿ ಖಮೇರ್ ಚಕ್ರವರ್ತಿ ಸೂರ್ಯವರ್ಮನ್ ಶಿವನಿಗಾಗಿ ನಿರ್ಮಿಸಿದ್ದಾರೆ . ಕಾಲಾನಂತರದಲ್ಲಿ, ಈ ದೇವಾಲಯವು ಕೇವಲ ನಂಬಿಕೆಯ ಕೇಂದ್ರವಲ್ಲ, ಆದರೆ ರಾಷ್ಟ್ರೀಯತೆ, ರಾಜಕೀಯ ಮತ್ತು ಮಿಲಿಟರಿ ಶಕ್ತಿಯ ಕ್ಷೇತ್ರವಾಗಿದೆ. ಈ ದೇವಾಲಯದಲ್ಲಿ ಇನ್ನೂ ಶಿವಲಿಂಗವಿದೆ.

ವಿವಾದ ಯಾವಾಗ ಪ್ರಾರಂಭವಾಯಿತು?
ಈ ವಿವಾದ 1907ರಲ್ಲಿ ಪ್ರಾರಂಭವಾಯಿತು. ಆಗ ಕಾಂಬೋಡಿಯಾವನ್ನು ಆಳುತ್ತಿದ್ದ ಫ್ರಾನ್ಸ್, ಕಾಂಬೋಡಿಯಾದಲ್ಲಿನ ದೇವಾಲಯವನ್ನು ತೋರಿಸುವ ನಕ್ಷೆಯನ್ನು ಮಾಡಿತು. ಥೈಲ್ಯಾಂಡ್ ಈ ನಕ್ಷೆಯನ್ನು ಎಂದಿಗೂ ಸಂಪೂರ್ಣವಾಗಿ ಸ್ವೀಕರಿಸಲಿಲ್ಲ. 2008ರಲ್ಲಿ, ಕಾಂಬೋಡಿಯಾ ಈ ದೇವಾಲಯವನ್ನು ಯುನೆಸ್ಕೋ ವಿಶ್ವ ಪರಂಪರೆಯ ತಾಣವನ್ನಾಗಿ ಮಾಡಿದಾಗ, ಥೈಲ್ಯಾಂಡ್ ಅದನ್ನು ವಿರೋಧಿಸಿದ್ದರಿಂದ ವಿವಾದ ಮತ್ತಷ್ಟು ಹೆಚ್ಚಾಯಿತು. ಇದರ ನಂತರ, 2008-2011ರವರೆಗೆ, ಎರಡೂ ದೇಶಗಳ ಸೈನ್ಯಗಳ ನಡುವೆ ಅನೇಕ ಘರ್ಷಣೆಗಳು ನಡೆದವು, ಇದರಲ್ಲಿ ಅನೇಕ ಜನರು ಸಾವನ್ನಪ್ಪಿದ್ದರು.

ಪ್ರವಾಸೋದ್ಯಮ ಮತ್ತು ಸಾಂಸ್ಕೃತಿಕ ಗುರುತು ಇಂದು ಈ ದೇವಾಲಯವನ್ನು ಕಾಂಬೋಡಿಯಾದ ಖಮೇರ್ ಸಾಂಸ್ಕೃತಿಕ ಪರಂಪರೆಯ ಸಂಕೇತವೆಂದು ಪರಿಗಣಿಸಲಾಗಿದೆ. ಕಾಂಬೋಡಿಯನ್ ಸರ್ಕಾರ ಇದನ್ನು ಪ್ರವಾಸೋದ್ಯಮಕ್ಕಾಗಿ ಪ್ರಚಾರ ಮಾಡುತ್ತದೆ ಮತ್ತು ಅದನ್ನು ತನ್ನ ಸಂಸ್ಕೃತಿಯ ಸಂಕೇತವಾಗಿ ಪ್ರಸ್ತುತಪಡಿಸುತ್ತದೆ.

ದೇವಾಲಯದ ಇತಿಹಾಸವೇನು?
ಪ್ರಸಾದ್ ತಾ ಮುಯೆನ್ ಥಾಮ್ ದೇವಾಲಯವನ್ನು 12ನೇ ಶತಮಾನದಲ್ಲಿ ನಿರ್ಮಿಸಲಾಯಿತು. ಈ ದೇವಾಲಯವು ಖಮೇರ್ ಸಾಮ್ರಾಜ್ಯದ ವಾಸ್ತುಶಿಲ್ಪಕ್ಕೆ ಒಂದು ಉತ್ತಮ ಉದಾಹರಣೆಯಾಗಿದ್ದು, ಶಿವನಿಗೆ ಅರ್ಪಿತವಾಗಿದೆ. ಪ್ರಾಚೀನ ಕಾಲದಲ್ಲಿ ಈ ದೇವಾಲಯದಲ್ಲಿ ಧಾರ್ಮಿಕ ಆಚರಣೆಗಳು, ತೀರ್ಥಯಾತ್ರೆಗಳು ಮತ್ತು ಪ್ರಾರ್ಥನೆಗಳು ನಡೆಯುತ್ತಿದ್ದವು, ಇದು ಆಧ್ಯಾತ್ಮಿಕವಾಗಿ ಅತ್ಯಂತ ಮಹತ್ವದ್ದಾಗಿತ್ತು.

ಭೌಗೋಳಿಕ ಮಹತ್ವವೇನು? ‌
ದೇವಾಲಯವನ್ನು ಡಾಂಗ್ರೆಕ್ ಪರ್ವತಗಳಲ್ಲಿರುವ ಒಂದು ಕಣಿವೆಯಲ್ಲಿ ನಿರ್ಮಿಸಲಾಗಿದೆ, ಇದು ಥೈಲ್ಯಾಂಡ್‌ನ ಖೋರಾಟ್ ಪ್ರಸ್ಥಭೂಮಿ ಮತ್ತು ಕಾಂಬೋಡಿಯಾದ ಬಯಲು ಪ್ರದೇಶಗಳನ್ನು ಸಂಪರ್ಕಿಸುತ್ತದೆ. ಈ ಸ್ಥಳವು ಸಾಂಸ್ಕೃತಿಕವಾಗಿ ಮಾತ್ರವಲ್ಲದೆ ಕಾರ್ಯತಂತ್ರದ ದೃಷ್ಟಿಕೋನದಿಂದಲೂ ಮುಖ್ಯವಾಗಿದೆ. ಈ ಸ್ಥಳದಿಂದ ಗಡಿಯಾಚೆಗಿನ ಚಟುವಟಿಕೆಗಳನ್ನು ಮೇಲ್ವಿಚಾರಣೆ ಮಾಡಲು ಸಾಧ್ಯವಿದೆ. ಆದ್ದರಿಂದ, ಈ ಪ್ರದೇಶವು ಎರಡೂ ದೇಶಗಳಿಗೆ ಭದ್ರತಾ ದೃಷ್ಟಿಕೋನದಿಂದ ಸೂಕ್ಷ್ಮವಾಗಿದೆ. ಇದಕ್ಕಾಗಿಯೇ ಎರಡೂ ದೇಶಗಳು ಈ ದೇವಾಲಯ ಪ್ರದೇಶದ ಮೇಲೆ ನಿಯಂತ್ರಣವನ್ನು ಕಾಯ್ದುಕೊಳ್ಳಲು ಬಯಸುತ್ತವೆ.

ಟ್ರಂಪ್‌ ಮಧ್ಯಸ್ಥಿಕೆಯಲ್ಲಿ ಕದನ ವಿರಾಮಕ್ಕೆ ಸಹಿ:
ಜುಲೈನಲ್ಲಿ ನಡೆದ ಸಂಘರ್ಷದಲ್ಲಿ 48 ಜನರು ಸಾವನ್ನಪ್ಪಿದ್ದರು ಮತ್ತು ತಾತ್ಕಾಲಿಕವಾಗಿ ಸುಮಾರು 3 ಲಕ್ಷ ಜನರನ್ನು ಸ್ಥಳಾಂತರಿಸಲಾಗಿತ್ತು. ಆ ಸಮಯದಲ್ಲಿ ಎರಡೂ ದೇಶಗಳು ಭಾರೀ ಫಿರಂಗಿ ಮತ್ತು ರಾಕೆಟ್ ಗುಂಡಿನ ದಾಳಿ, ಪ್ರತಿದಾಳಿ ನಡೆಸಿತ್ತು. ಟ್ರಂಪ್ ಎರಡೂ ದೇಶಗಳ ಆಗಿನ ನಾಯಕರೊಂದಿಗೆ ಫೋನ್ ಮೂಲಕ ಮಾತನಾಡಿ, ಸಂಘರ್ಷವನ್ನು ಕೊನೆಗೊಳಿಸುವಂತೆ ಒತ್ತಾಯಿಸಿದರು. ಹೋರಾಟ ನಿಲ್ಲದಿದ್ದರೆ, ಅಮೆರಿಕ ಜೊತೆಗಿನ ವ್ಯಾಪಾರ ಮಾತುಕತೆಗಳನ್ನು ನಿಲ್ಲಿಸುವುದಾಗಿ ಬೆದರಿಕೆ ಹಾಕಿದರು. ಈ ಹಿನ್ನೆಲೆ ಅಕ್ಟೋಬರ್‌ ತಿಂಗಳಲ್ಲಿ ಕೌಲಾಲಂಪುರದಲ್ಲಿ ಟ್ರಂಪ್‌ ಮಧ್ಯಸ್ಥಿಕೆಯಲ್ಲಿ ಎರಡೂ ದೇಶಗಳು ವಿಸ್ತೃತ ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದವು. ಆದರೆ ಇದಾದ ಕೆಲವೇ ತಿಂಗಳಿನಲ್ಲಿ ಮತ್ತೆ ಕದನ ವಿರಾಮ ಉಲ್ಲಂಘನೆಯಾಗಿ ಉದ್ವಿಗ್ನತೆ ಭುಗಿಲೆದ್ದಿದೆ. ಕಳೆದ ವಾರ ನಡೆದ ಘರ್ಷಣೆಯಲ್ಲಿ ಎರಡೂ ಕಡೆಯ ಎರಡು ಡಜನ್‌ಗೂ ಹೆಚ್ಚು ಮಂದಿ ಗಾಯಗೊಂಡಿದ್ದು, ಸುಮಾರು 5 ಲಕ್ಷಕ್ಕೂ ಹೆಚ್ಚು ಮಂದಿ ಸ್ಥಳಾಂತರಗೊಂಡಿದ್ದಾರೆ ಎಂದು ವರದಿಗಳು ತಿಳಿಸಿವೆ.

ಹಿಂದೂ ದೇವಾಲಯಕ್ಕೆ ಹಾನಿ – ಭಾರತ ಕಳವಳ:
ಥೈಲ್ಯಾಂಡ್ ಮತ್ತು ಕಾಂಬೋಡಿಯಾ ನಡುವೆ ಗಡಿ ಘರ್ಷಣೆಗಳು ಮತ್ತೆ ಆರಂಭವಾಗಿರುವುದರಿಂದ ಭಾರತವು ಥೈಲ್ಯಾಂಡ್ ಮತ್ತು ಕಾಂಬೋಡಿಯಾಗಳಿಗೆ ಶಾಂತಿಯಿಂದ ವರ್ತಿಸುವಂತೆ ಮತ್ತು ಯುದ್ಧದ ಉಲ್ಬಣವನ್ನು ತಡೆಯುವಂತೆ ಮನವಿ ಮಾಡಿದೆ. ಪ್ರಿಯಾ ವಿಹಾರ್ ದೇವಾಲಯದ ಯುನೆಸ್ಕೋ ವಿಶ್ವ ಪರಂಪರೆಯ ತಾಣವು ಮಾನವೀಯತೆಯ ಹಂಚಿಕೆಯ ಸಾಂಸ್ಕೃತಿಕ ಪರಂಪರೆಯಾಗಿದೆ. ಭಾರತವು ಅದರ ಸಂರಕ್ಷಣೆಯಲ್ಲಿ ನಿಕಟವಾಗಿ ತೊಡಗಿಸಿಕೊಂಡಿದೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ತನ್ನ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Share This Article