ರಾವತ್ ಇದ್ದ ಹೆಲಿಕಾಪ್ಟರ್ ಪತನದ ತನಿಖಾ ವರದಿ ಮುಂದಿನ ವಾರ ಸಲ್ಲಿಕೆ?

Public TV
1 Min Read

ನವದೆಹಲಿ: ಇತ್ತೀಚೆಗಷ್ಟೇ ಹುತಾತ್ಮರಾದ ಸೇನಾ ಪಡೆಗಳ ಮುಖ್ಯಸ್ಥ (ಸಿಡಿಎಸ್) ಬಿಪಿನ್ ರಾವತ್ ಅವರಿದ್ದ ಹೆಲಿಕಾಪ್ಟರ್ ಪತನದ ತನಿಖಾ ವರದಿಯನ್ನು ಮುಂದಿನ ವಾರ ಸರ್ಕಾರಕ್ಕೆ ಸಲ್ಲಿಸುವ ಸಾಧ್ಯತೆಯಿದೆ.

ಡಿ.8ರಂದು ತಮಿಳುನಾಡಿನ ಕುನೂರಿನಲ್ಲಿ ಸಂಭವಿಸಿದ ಹೆಲಿಕಾಪ್ಟರ್ ದುರ್ಘಟನೆಯಲ್ಲಿ ಸೇನಾ ಪಡೆಗಳ ಮುಖ್ಯಸ್ಥ ಬಿಪಿನ್ ರಾವತ್ ಸೇರಿ 13 ಮಂದಿ ಹುತಾತ್ಮರಾಗಿದ್ದರು. ರಾವತ್ ಅವರು ಕೊಯಮತ್ತೂರು ಬಳಿಯ ಸೂಲೂರಿನಿಂದ ವೆಲ್ಲಿಂಗ್ಟನ್‌ನಲ್ಲಿರುವ ಡಿಫೆನ್ಸ್ ಸ್ಟಾಫ್ ಕಾಲೇಜಿಗೆ ತೆರಳುತ್ತಿದ್ದಾಗ ಈ ದುರ್ಘಟನೆ ಸಂಭವಿಸಿತ್ತು.

ಈ ದುರಂತಕ್ಕೆ ಕಾರಣವೇನು ಎಂಬ ಪ್ರಶ್ನೆ ಹಲವರಲ್ಲಿ ಕಾಡಿತ್ತು. ಈ ಹಿನ್ನೆಲೆಯಲ್ಲಿ ಹೆಲಿಕಾಪ್ಟರ್ ಪತನಕ್ಕೆ ಕಾರಣ ತಿಳಿಯಲು ರಕ್ಷಣಾ ಸಚಿವಾಲಯ ತ್ರಿಸೇವಾ ತನಿಖೆಗೆ ಆದೇಶಿಸಿತ್ತು. ಕೂನೂರಿನಲ್ಲಿ ಸಂಭವಿಸಿದ್ದ ಸೇನಾ ಹೆಲಿಕಾಪ್ಟರ್ ದುರಂತದ ಬಗ್ಗೆ ಸೇನಾ ಪಡೆಗಳ 3 ವಿಭಾಗಗಳ ತಜ್ಞರನ್ನು ಒಳಗೊಂಡ ಸಮಿತಿ ತನಿಖೆ ನಡೆಸಿತ್ತು.

ಏರ್ ಮಾರ್ಷಲ್ ಮಾನವೇಂದ್ರ ಸಿಂಗ್ ಈ ತಂಡದ ನೇತೃತ್ವ ವಹಿಸಿದ್ದರು. ಅವರು ಐಎಎಫ್‌ನ ತರಬೇತಿ ಕಮಾಂಡರ್‌ನ ಕಮಾಂಡರ್ ಮತ್ತು ಸ್ವತಃ ಚಾಪರ್ ಪೈಲಟ್ ಆಗಿದ್ದಾರೆ. ಅವರ ಜೊತೆ ಭಾರತೀಯ ಸೇನೆ ಮತ್ತು ನೌಕಾಪಡೆಯ ಇಬ್ಬರು ಬ್ರಿಗೇಡಿಯರ್ ಶ್ರೇಣಿಯ ಅಧಿಕಾರಿಗಳು ತನಿಖೆಯಲ್ಲಿ ಸಹಾಯಕರಾಗಿದ್ದಾರೆ. ಇದನ್ನೂ ಓದಿ:  ಬಿಹಾರ್‌ ಸಿಎಂ ಪುತ್ರ ತನ್ನ ತಂದೆಗಿಂತಲೂ 5 ಪಟ್ಟು ಹೆಚ್ಚು ಶ್ರೀಮಂತ

ಹೆಲಿಕಾಪ್ಟರ್ ಪತನಕ್ಕೆ ಲ್ಯಾಂಡಿಂಗ್ ಆಗುವ ವೇಳೆ ಸಿಬ್ಬಂದಿ ದಿಗ್ಭ್ರಮೆಗೆ ಸಿಲುಕಿದ್ದು ಸೇರಿದಂತೆ ಎಲ್ಲಾ ಆಯಾಮಗಳಲ್ಲೂ ತನಿಖೆ ಕೈಗೊಳ್ಳಲಾಗಿದೆ. ಹೆಲಿಕಾಪ್ಟರ್‌ನ ಬ್ಲ್ಯಾಕ್ ಬಾಕ್ಸ್ ನಲ್ಲಿ ಕಾಕ್‌ಪಿಟ್ ಧ್ವನಿ ರೆಕಾರ್ಡ್ ಮತ್ತು ಫ್ಲೈಟ್ ಡಾಟಾ ರೆಕಾರ್ಡ್ ಗಳನ್ನೆಲ್ಲಾ ಪರಿಶೀಲಿಸಲಾಗಿದೆ. ಇದನ್ನೂ ಓದಿ: New Year – ಪಾಕಿಸ್ತಾನ, ಚೀನಾ ಸೈನಿಕರಿಗೆ ಸಿಹಿ ಹಂಚಿ ವಿಶ್‌ ಮಾಡಿದ ಭಾರತೀಯ ಯೋಧರು

ತನಿಖೆಯ ಎಲ್ಲಾ ವರದಿ ಅಂತಿಮ ಘಟ್ಟದಲ್ಲಿದೆ. ಹೀಗಾಗಿ ಮುಂದಿನ ವಾರ ಎಲ್ಲಾ ಅಂಶಗಳನ್ನು ಒಳಗೊಂಡ ಬೃಹತ್ ಗಾತ್ರದ ತನಿಖಾ ವರದಿ ವಾಯುಪಡೆ ಮುಖ್ಯ ಕಚೇರಿಗೆ ಸಲ್ಲಿಕೆ ಆಗುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

Share This Article
Leave a Comment

Leave a Reply

Your email address will not be published. Required fields are marked *