ರಮೇಶ್‌ ಜಾರಕಿಹೊಳಿ ಅತ್ಯಾಚಾರ ಮಾಡಿಲ್ಲ – ಬಿ ರಿಪೋರ್ಟ್‌ ಸಲ್ಲಿಸಿದ SIT

Public TV
3 Min Read

ಬೆಂಗಳೂರು: ಅತ್ಯಾಚಾರದ ಆರೋಪ ಹೊತ್ತಿದ್ದ ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ಅವರಿಗೆ ವಿಶೇಷ ತನಿಖಾ ತಂಡ (ಎಸ್‌ಐಟಿ) ಕ್ಲೀನ್‌ ಚಿಟ್‌ ಕೊಟ್ಟಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸೂಕ್ತ ಸಾಕ್ಷ್ಯಾಧಾರ ಕೊರತೆ ಹಿನ್ನೆಲೆಯಲ್ಲಿ 1ನೇ ಎಸಿಎಂಎಂ ಕೋರ್ಟ್‌ಗೆ ಬಿ ರಿಪೋರ್ಟ್‌ ಪ್ರತಿ ಸಲ್ಲಿಸಿದೆ.

150 ಪುಟಗಳ ಬಿ ರಿಪೋರ್ಟ್‌ ಅನ್ನು 1ನೇ ಎಸಿಎಂಎಂ ಕೋರ್ಟ್‌ಗೆ ಸಲ್ಲಿಕೆ ಮಾಡಲಾಗಿದೆ. ಇದರಿಂದ ರಮೇಶ್ ಜಾರಕಿಹೊಳಿಗೆ ಬಿಗ್ ರಿಲೀಫ್ ಸಿಕ್ಕಂತಾಗಿದೆ. ಅತ್ಯಾಚಾರ ಪ್ರಕರಣದಲ್ಲಿ ರಮೇಶ್‌ ಜಾರಕಿಹೊಳಿಗೆ ಎಸ್‌ಐಟಿ ಕ್ಲೀನ್ ಚಿಟ್ ಕೊಟ್ಟಿದೆ. ಯುವತಿ ಕೊಟ್ಟ ದೂರಿನಲ್ಲಿ ಯಾವುದೇ ಹುರುಳಿಲ್ಲ. ಆರೋಪಗಳಿಗೆ ಸೂಕ್ತ ಸಾಕ್ಷ್ಯಾಧಾರಗಳು ಇಲ್ಲ ಎಂದು ತಿಳಿಸಲಾಗಿದೆ. ಇದನ್ನೂ ಓದಿ: ಸಿಡಿ ಪ್ರಕರಣದಲ್ಲಿ ರಮೇಶ್ ಜಾರಕಿಹೊಳಿಗೆ ಬಿಗ್ ರಿಲೀಫ್

ರಮೇಶ್‌ ಜಾರಕಿಹೊಳಿಗೆ ಸಂಬಂಧಿಸಿದ್ದು ಎನ್ನಲಾಗಿದ್ದ ಸಿಡಿ ಪ್ರಕರಣದ ತನಿಖಾ ವರದಿ ಸಲ್ಲಿಸುವಂತೆ ಎಸ್‌ಐಟಿಗೆ ಹೈಕೋರ್ಟ್‌ ಸೂಚನೆ ನೀಡಿತ್ತು. ಮುಚ್ಚಿದ ಲಕೋಟೆಯಲ್ಲಿ ವರದಿ ಸಲ್ಲಿಸಿದೆ. ಬಿ ರಿಪೋರ್ಟ್‌ ಸಲ್ಲಿಕೆ ಹಿನ್ನೆಲೆಯಲ್ಲಿ ದೂರುದಾರ ಯುವತಿಗೆ ಪೊಲೀಸರು ನೋಟಿಸ್ ನೀಡಿದ್ದಾರೆ. ನಿಮ್ಮ ಪ್ರಕರಣ ಮುಕ್ತಾಯ ಆಗಿದೆ. ತನಿಖೆ ಮುಕ್ತಾಯಗೊಂಡಿದೆ. 1ನೇ ಎಸಿಎಂಎಂ ಕೋರ್ಟ್‌ಗೆ ಸಲ್ಲಿಕೆ ಮಾಡಲಾಗಿದೆ ಎಂದು ನೋಟಿಸ್ ನೀಡಿದೆ.

ಸಾಕ್ಷ್ಯಾಧಾರ ಕೊರತೆಯಿಂದ ಪ್ರಕರಣ ಮುಕ್ತಾಯ ಮಾಡಿದ್ದೇವೆ ಎಂಬುದಾಗಿ ಇಂದು ಬೆಳಗ್ಗೆ ನೋಟಿಸ್ ನೀಡಿ ಬಳಿಕ ಬಿ ರಿಪೋರ್ಟ್ ಸಲ್ಲಿಸಲಾಗಿದೆ. ಇದನ್ನೂ ಓದಿ: ದಲಿತ ಯುವತಿಯನ್ನ ಮದುವೆಯಾಗಿದ್ದಕ್ಕೆ ಸ್ವಜಾತಿಯವರಿಂದ ಬಹಿಷ್ಕಾರ

ಬಿ ರಿಪೋರ್ಟ್‌ನಲ್ಲೇನಿದೆ?
ಇಬ್ಬರು ಕೂಡ ಸಾಕಷ್ಟು ದಿನಗಳಿಂದ ಪರಿಚಯ ಇಟ್ಟುಕೊಂಡಿದ್ದವರು. ಇಬ್ಬರೂ ಸಮ್ಮತಿಯಿಂದ ಲೈಂಗಿಕ ಸಂಪರ್ಕ ಹೊಂದಿದ್ದಾರೆ.  ಯುವತಿ ಆರೋಪ ಮಾಡಿದಂತೆ ಇಲ್ಲಿ ಯಾವುದೇ ಬಲತ್ಕಾರವೂ ನಡೆದಿಲ್ಲ. ಮಾಜಿ ಸಚಿವರು ಯುವತಿಗೆ ಕೆಲಸ ಕೊಡಿಸುವುದಾಗಿ ನಂಬಿಸಿ ವಂಚನೆ ಮಾಡಿದ್ದಾರೆ ಎನ್ನುವುದು ಆಧಾರ ರಹಿತ. ಯುವತಿಗೆ ಕೆಲಸ ಕೊಡಿಸುವುದಾಗಿ ಲೈಂಗಿಕವಾಗಿ ಬಳಸಿಕೊಂಡಿದ್ದಾರೆ ಅನ್ನೋದಕ್ಕೆ ಯಾವುದೇ ಸಾಕ್ಷ್ಯ ಇಲ್ಲ. ಟೆಕ್ನಿಕಲ್ ಎವಿಡೆನ್ಸ್‌ಗಳು ಇಲ್ಲ.

ಇಬ್ಬರು ನಿರಂತರವಾಗಿ ದೂರವಾಣಿಯ ಮೂಲಕ ತುಂಬಾ ಸಲಿಗೆಯಿಂದಲೇ ಮಾತನಾಡಿದ್ದಾರೆ. ಮಾತನಾಡುವಾಗ ಇಬ್ಬರ ಸಂಭಾಷಣೆಯಲ್ಲಿ ಕೂಡ ಲೈಂಗಿಕ ಪ್ರಚೋದನೆಯ ಮಾತುಗಳು ಇದ್ದಾವೆ. ಒಬ್ಬರ ಮೇಲೆ ಒಬ್ಬರು ಒತ್ತಡ ಹೇರಿದ್ದಾರೆ ಅನ್ನೋದಕ್ಕೆ ಸಾಕ್ಷ್ಯ ಇಲ್ಲ. ನ್ಯಾಯಾಧೀಶರ ಮುಂದೆ ಹೇಳಿದ ಹೇಳಿಕೆಗೆ ಸಂಬಂಧಪಟ್ಟ ಪೂರಕ ಸಾಕ್ಷ್ಯಗಳು ಇಲ್ಲ.

ನ್ಯಾಯಾಧೀಶರ ಮುಂದೆ ಹೇಳಿದ ಹೇಳಿಕೆಗೂ ಪೊಲೀಸರ ಮುಂದೆ ಹೇಳಿದ ಹೇಳಿಕೆಗೂ ವ್ಯತ್ಯಾಸಗಳು ಇದ್ದಾವೆ. ಆರೋಪಿ ಮತ್ತು ಸಂತ್ರಸ್ತೆಯ ಮನೆಯನ್ನು ಮಹಜರು ಮಾಡಿದಾಗ ಪೂರಕ ಸಾಕ್ಷ್ಯಗಳು ಇಲ್ಲ. ಸಂತ್ರಸ್ತ ಯುವತಿ ಹೇಳಿದಂತೆ ಅಪಾರ್ಟ್ಮೆಂಟ್‌ನಲ್ಲಿ ಯಾವುದೇ ಕುರುಹುಗಳು ಪತ್ತೆ ಆಗಿಲ್ಲ. ವೈರಲ್ ಆಗಿರೋ ವಿಡಿಯೋ ಎಡಿಟೆಡ್ ವರ್ಸನ್ ವಿಡಿಯೋ ಆಗಿದೆ. ವಿಧಿವಿಜ್ಞಾನ ಪ್ರಯೋಗಾಲಯಕ್ಕೂ ವೀಡಿಯೋ ತುಣುಕುಗಳಿಗೆ ಸ್ಪಷ್ಟವಾದ ವರದಿಯನ್ನು ನೀಡಿಲ್ಲ.

ವೀಡಿಯೋ ತುಣುಕುಗಳನ್ನು ಯುವತಿ ಉದ್ದೇಶ ಪೂರ್ವಕವಾಗಿ ಮಾಡಿದ್ದಾಳೆ ಎಂಬ ಅನುಮಾನ ಇದೆ. ಯುವತಿಯು ಎರಡೂ ಬಾರಿ ವೀಡಿಯೋವನ್ನು ಮಾಡಿದ್ದಾಳೆ. ಒಮ್ಮೆ ಕಪ್ಪು ಬಣ್ಣದ ಟೀ ಶರ್ಟ್ ಅನ್ನು, ಮತ್ತೊಮ್ಮೆ ಕಾಫಿ ಕಲರ್ ಟೀ ಶರ್ಟ್ ಅನ್ನು ಹಾಕಿದ್ದಾಳೆ. ಆಕೆ ಎರಡು ಬಾರಿ ವೀಡಿಯೋ ರೆಕಾರ್ಡ್ ಮಾಡಿರೋದು ಬೇರೊಂದು ಉದ್ದೇಶ ಇರಬಹುದು ಎಂದು ಅನಿಸಿದೆ. ಎರಡು ಕ್ಯಾಮೆರಾಗಳನ್ನು ಯುವತಿ ಬಳಸಿದ್ದು ಒಂದು ವ್ಯಾನಿಟಿ ಬ್ಯಾಗ್‌ನಲ್ಲಿ ಇತ್ತು ಎಂಬುದು ಸ್ಪಷ್ಟವಾಗಿದೆ. ವ್ಯಾನಿಟಿ ಬ್ಯಾಗ್‌ನಲ್ಲಿ ಇದ್ದ ಕ್ಯಾಮೆರಾವನ್ನು ಬೇರೊಬ್ಬ ಯುವಕನ ಸಹಾಯದಿಂದ ಆಫ್ ಮಾಡಿದ್ದಾರೆ. ಕ್ಯಾಮರಾ ಆಫ್ ಮಾಡುವಾಗ ಯುವತಿ ಬೇರೊಂದು ಪ್ರಕರಣದ ಶಂಕಿತ ಆರೋಪಿಯ ಹೆಸರನ್ನು ಉಲ್ಲೇಖ ಮಾಡಿದ್ದಾಳೆ. ಆರೋಪಿಯೂ ಕೂಡ ತನ್ನನ್ನು ಹೆದರಿಸುತ್ತಾ ಇದ್ದರು. ತನ್ನ ಮೊಬೈಲ್‌ಗೆ ಎರಡು ಬಾರಿ ವೀಡಿಯೋ ಕಳುಹಿಸಿದ್ದರು, ಹಣಕ್ಕೆ ಬೇಡಿಕೆ ಇಟ್ಟಿದ್ದರು ಅಂತ ಹೇಳಿದ್ದಾರೆ.

ಆರೋಪಿ ಹೇಳಿಕೆಗೆ ಪೂರಕವಾದ ಕೆಲವೊಂದು ಸಾಕ್ಷ್ಯಗಳು ಸಿಕ್ಕಿವೆ. ಬೇರೊಂದು ಪ್ರಕರಣದ ಶಂಕಿತ ಆರೋಪಿಗಳು ಹಣವನ್ನು ಬ್ಲಾಕ್ ಅಂಡ್ ವೈಟ್ ಮಾಡಿರೋದು ಸಾಬೀತಾಗಿದೆ. ಆರೋಪಿ ರಮೇಶ್ ಜಾರಕಿಹೊಳಿ ಹಣ ನೀಡಿದ್ದಕ್ಕೂ ಈ ಯುವಕರು ಬ್ಲಾಕ್ ಅಂಡ್ ವೈಟ್ ಮಾಡಿದ್ದಕ್ಕೂ ತಾಳೆ ಆಗುತ್ತಾ ಇದೆ. ಅಲ್ಲದೇ ಯುವತಿಯ ಮೇಲೆ ಒಂದಷ್ಟು ಗಂಭೀರವಾದ ಆರೋಪಗಳು ಕೂಡ ಇದ್ದಾವೆ. ಆರೋಪಗಳಿಗೆ ಪ್ರಬಲ ಸಾಕ್ಷ್ಯ ಇಲ್ಲದೇ ಇದ್ದರೂ ಅನುಮಾನ ಹೆಚ್ಚಿದೆ. ಇಬ್ಬರೂ ಪ್ರಾಪ್ತರೂ ಆಗಿರುವುದರಿಂದ ಸಮ್ಮತಿಯ ಮೇಲೆ ಲೈಂಗಿಕ ಸಂಪರ್ಕವಾಗಿದೆ. ಇಲ್ಲಿ ಒತ್ತಾಯ ಪೂರ್ವಕವಾಗಿ ಯಾರ ಮೇಲೂ ಅತ್ಯಾಚಾರ ಆಗಿಲ್ಲ ಅನ್ನೋದು ಸ್ಪಷ್ಟವಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *