– ಭಯಭೀತರಾಗಿ ಓಡಿದ ಜನ, ಕಂಪನದ ಸಿಸಿಟಿವಿ ದೃಶ್ಯ ವೈರಲ್
– 113 ಗಂಟೆಗಳ ಬಳಿಕ ಸ್ಫೋಟ ನಡೆದಿದ್ದ ರಸ್ತೆ ಸಂಚಾರಕ್ಕೆ ಮುಕ್ತ
ನವದೆಹಲಿ: ದೆಹಲಿಯಲ್ಲಿ ಸಂಭವಿಸಿದ್ದ ಕಾರು ಸ್ಫೋಟದಿಂದ 40 ಅಡಿ ಕೆಳಗೆ ನೆಲಮಹಡಿಯಲ್ಲಿರುವ ಕೆಂಪು ಕೋಟೆ ಮೆಟ್ರೋ ನಿಲ್ದಾಣದಲ್ಲಿ (Red Fort Metro Station) ಭೂಮಿ ಕಂಪಿಸಿದೆ. ಈ ದೃಶ್ಯ ಅಲ್ಲಿಯೇ ಇದ್ದ ಸಿಸಿಟಿವಿ ದೃಶ್ಯದಲ್ಲಿ ಸೆರೆಯಾಗಿದ್ದು, ಸದ್ಯ ವೈರಲ್ ಆಗಿದೆ.
ನ.10ರಂದು ದೆಹಲಿಯ (Delhi) ಕೆಂಪುಕೋಟೆ ಬಳಿ ಸಂಭವಿಸಿದ್ದ ಕಾರು ಸ್ಫೋಟದಲ್ಲಿ 13 ಮಂದಿ ಸಾವನ್ನಪ್ಪಿದ್ದು, 20ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು. ಈ ಪ್ರಕರಣ ಸಂಬಂಧ ಸದ್ಯ ಎನ್‌ಐಎ ತನಿಖೆ ನಡೆಸುತ್ತಿದ್ದು, ಈಗಾಗಲೇ ಸ್ಫೋಟದ ರೂವಾರಿ ಉಗ್ರ ಉಮರ್ ಎಂಬುವುದು ತಿಳಿದುಬಂದಿದೆ. ಜೊತೆಗೆ ಒಂದೊಂದಾಗಿಯೇ ಹೊಸ ಮಾಹಿತಿಗಳು ಬಹಿರಂಗವಾಗಿದೆ.ಇದನ್ನೂ ಓದಿ: Delhi Explosion | ವಿದೇಶಕ್ಕೆ ಪರಾರಿಯಾಗಲು ಪಾಸ್‌ಪೋರ್ಟ್‌ಗೆ ಅರ್ಜಿ ಹಾಕಿದ್ದ ಶಾಹಿನ
ಕಾರು ಸ್ಫೋಟ ಸಂಭವಿಸುತ್ತಿದ್ದಂತೆ ಅತ್ತ 40 ಅಡಿ ನೆಲಮಹಡಿಯಲ್ಲಿರುವ ಕೆಂಪುಕೋಟೆ ಮೆಟ್ರೋ ನಿಲ್ದಾಣದಲ್ಲಿ ಭೂಮಿ ಕಂಪಿಸಿದೆ. ಇದರಿಂದ ಸ್ಥಳದಲ್ಲಿದ್ದ ಜನರು ಭಯಭೀತರಾಗಿದ್ದು, ಸಿಸಿಟಿವಿ ಕ್ಯಾಮೆರಾದಲ್ಲಿ ದೃಶ್ಯ ಸೆರೆಯಾಗಿದೆ. ಏಕಾಏಕಿ ಭೂಮಿ ಕಂಪಿಸಿದ್ದನ್ನು ಕಂಡ ಜನರು ಬೆಚ್ಚಿಬಿದ್ದಿದ್ದಾರೆ.
ಘಟನೆಯ ನಂತರ ಕೆಂಪು ಕೋಟೆ ಮೆಟ್ರೋ ನಿಲ್ದಾಣವನ್ನು ಬಂದ್ ಮಾಡಲಾಗಿದೆ. ಭದ್ರತಾ ದೃಷ್ಟಿಯಿಂದ ದೆಹಲಿ ಮೆಟ್ರೋ ರೈಲು ನಿಗಮ ಈ ನಿರ್ಧಾರವನ್ನು ಕೈಗೊಂಡಿದ್ದು, ಗೇಟ್.ನಂ 2 ಹಾಗೂ 3ರಲ್ಲಿ ಮಾತ್ರ ಪ್ರಯಾಣಿಕರ ಸಂಚಾರಕ್ಕೆ ಅವಕಾಶವಿರುತ್ತದೆ. ಉಳಿದಂತೆ ಬೇರೆ ಎಲ್ಲಾ ಮೆಟ್ರೋ ನಿಲ್ದಾಣಗಳು ಎಂದಿನಂತೆ ಕಾರ್ಯನಿರ್ವಹಿಸುತ್ತಿವೆ ಎಂದು ತಿಳಿಸಿದೆ. ಕೆಂಪು ಕೋಟೆಯ ಸುತ್ತಲೂ ಭದ್ರತೆಯನ್ನು ಹೆಚ್ಚಿಸಲಾಗಿದ್ದು, ಸುತ್ತಮುತ್ತಲಿನ ಸ್ಥಳಗಳಲ್ಲಿ ತಪಾಸಣೆಯನ್ನು ಜಾಸ್ತಿ ಮಾಡಲಾಗಿದೆ.
ದೆಹಲಿಯ ನೇತಾಜಿ ಸುಭಾಷ್ ಮಾರ್ಗದಲ್ಲಿರುವ ಟ್ರಾಫಿಕ್ ಸಿಗ್ನಲ್ ಬಳಿ ಕಾರು ಸ್ಫೋಟಗೊಂಡಿತ್ತು. ಅದಾದ ಬಳಿಕ ಆ ರಸ್ತೆಯಲ್ಲಿ ಸಂಚಾರವನ್ನು ಸಂಪೂರ್ಣವಾಗಿ ಬಂದ್ ಮಾಡಲಾಗಿತ್ತು. ಇದೀಗ ಘಟನೆ 113 ಗಂಟೆಗಳ ಬಳಿಕ ರಸ್ತೆಯಲ್ಲಿ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ.ಇದನ್ನೂ ಓದಿ: ಡಾ.ಉಮರ್ ಬಾಂಬ್ ಎಕ್ಸ್‌ಪರ್ಟ್ – 10 ನಿಮಿಷದಲ್ಲಿ ಬಾಂಬ್ ತಯಾರಿಸಿದ್ನಾ ಉಗ್ರ? ಕಾರಿನೊಳಗೆ ಹೇಗಿತ್ತು ಸೆಟಪ್?
