ಒಂದು ವಾರ ಸಿಗದೆ ಕಾಡಿದ ರೆಡ್ಡಿಗೆ ಇಡೀ ರಾತ್ರಿ ಕಾಡಿದ ಸಿಸಿಬಿ – ತಡರಾತ್ರಿ 2 ಗಂಟೆವರೆಗೂ ವಿಚಾರಣೆ

Public TV
2 Min Read

ಬೆಂಗಳೂರು: ಒಂದು ವಾರ ಸಿಗದೆ ಕಾಡಿದ ಮಾಜಿ ಸಚಿವ ಗಣಿದಣಿ ಜನಾರ್ದನ ರೆಡ್ಡಿಗೆ ಸಿಸಿಬಿ ತಡರಾತ್ರಿವರೆಗೂ ಪ್ರಶ್ನೆಗಳ ಸುರಿಮಳೆ ಸುರಿಸಿದೆ. ತಡರಾತ್ರಿ 2 ವರೆಗೂ ರೆಡ್ಡಿಗೆ ಸಿಸಿಬಿ ಅಧಿಕಾರಿಗಳಿಂದ ತೀವ್ರ ವಿಚಾರಣೆ ನಡೆದಿದೆ.

ಪ್ರಕರಣದ ಕುರಿತಂತೆ ಸಿಸಿಬಿಗೆ ಸೂಕ್ತ ಸಾಕ್ಷ್ಯಾಧಾರಗಳ ಕೊರತೆ ಹಿನ್ನೆಲೆಯಲ್ಲಿ ರೆಡ್ಡಿ ಬಂಧನಕ್ಕೆ ಬೇಕಾಗಿರುವ ಸಾಕ್ಷ್ಯಾಧಾರಗಳನ್ನು ಅಧಿಕಾರಿಗಳು ಕಲೆ ಹಾಕುತ್ತಿದ್ದಾರೆ. ಶನಿವಾರ ಸಂಜೆ 4 ಗಂಟೆಯಿಂದ ತಡರಾತ್ರಿ 2 ಗಂಟೆವರೆಗೂ ಸಿಸಿಬಿ ರೆಡ್ಡಿ ಹೇಳಿಕೆಯನ್ನು ಪಡೆದಿದೆ. ಸತತ 10 ಗಂಟೆಗಳ ಕಾಲ ರೆಡ್ಡಿಯನ್ನ ವಿಚಾರಣೆಗೆ ಒಳಪಡಿಸಲಾಗಿತ್ತು. ರೆಡ್ಡಿ, ಅಲಿಖಾನ್, ಫರೀದ್ ಹೇಳಿಕೆಯಲ್ಲಿ ವ್ಯತ್ಯಾಸ ಬರುತ್ತಿರುವ ಹಿನ್ನೆಲೆಯಲ್ಲಿ ಸಿಸಿಬಿ ಅಧಿಕಾರಿಗಳು ವಿಚಾರಣೆಗೆ ಮತ್ತೊರ್ವ ವ್ಯಕ್ತಿಯನ್ನು ಕರೆ ತಂದಿದ್ದು, ಸಿಸಿಬಿ ಎಸಿಪಿ ಸುಬ್ರಹ್ಮಣ್ಯ ನೇತೃತ್ವದ ತಂಡದಿಂದ ಮತ್ತೊಬ್ಬ ವ್ಯಕ್ತಿ ವಶಕ್ಕೆ ಪಡೆದು ವಿಚಾರಣೆ ನಡೆಸಿದೆ.

ಅಂಬಿಡೆಂಟ್ ಕಂಪೆನಿ ಜೊತೆ 20 ಕೋಟಿ ಡೀಲ್ ಪ್ರಕರಣಕ್ಕೆ ಹೊರಬೀಳುತ್ತಿದ್ದಂತೆಯೇ ಜನಾರ್ದನ ರೆಡ್ಡಿ ತಲೆಮರೆಸಿಕೊಂಡಿದ್ದರು ಎಂದು ಹೇಳಲಾಗಿದ್ದು, ಶನಿವಾರ ಮಧ್ಯಾಹ್ನ ತಮ್ಮ ವಕೀಲ ಚಂದ್ರಶೇಖರ್ ಜೊತೆ ಸಿಸಿಬಿಗೆ ಹಾಜರಾಗಿದ್ದರು. ಇದಕ್ಕೂ ಮೊದಲು ವಿಡಿಯೋ ಮಾಡಿ ಮಾಧ್ಯಮಕ್ಕೆ ಬಿಡುಗಡೆಗೊಳಿಸಿದ್ದರು. ವಿಡಿಯೋದಲ್ಲಿ ಕಳೆದ ನಾಲ್ಕು ದಿನಗಳಿಂದ ನನ್ನ ಬಗ್ಗೆ ಊಹಾಪೋಹ ಸುದ್ದಿಗಳು ಹರಿದಾಡುತ್ತಿದ್ದವು. ಈ ಸಂಬಂಧ ಮಾಧ್ಯಮಗಳಿಗೆ ಸ್ಪಷ್ಟನೆ ನೀಡುವ ಮೂಲಕ ಎಲ್ಲ ಗೊಂದಲಗಳಿಗೆ ತೆರೆ ಎಳೆಯಬೇಕೆಂದು ವಕೀಲರ ಸಲಹೆಯ ಮೇರೆಗೆ ಈ ವಿಡಿಯೋವನ್ನು ಮಾಡಿದ್ದೇನೆ. ಪೊಲೀಸರು ಕೆಟ್ಟ ಉದ್ದೇಶದಿಂದ ನನ್ನನ್ನು ಪ್ರಕರಣದಲ್ಲಿ ಸಿಲುಕಿಸುವ ಪ್ರಯತ್ನ ಮಾಡಲಾಗುತ್ತಿದೆ. ಮಾಧ್ಯಮಗಳಲ್ಲಿ ನನ್ನ ಬಗ್ಗೆ ಸುದ್ದಿ ಬಿತ್ತರವಾಗುತ್ತಿದ್ದಂತೆಯೇ ಸಿಸಿಬಿ ಕಚೇರಿಗೆ ಹೋಗಿ ಸ್ಪಷ್ಟನೆ ನೀಡಲು ತೀರ್ಮಾನಿಸಿದಾಗ, ವಕೀಲರು ನಮಗೆ ಯಾವುದೇ ನೋಟಿಸ್ ನೀಡಿಲ್ಲ ಮತ್ತು ಎಫ್‍ಐಆರ್ ನಲ್ಲಿ ನಿಮ್ಮ ಹೆಸರಿಲ್ಲ. ಯಾವ ಕಾರಣಕ್ಕಾಗಿ ಸಿಸಿಬಿಗೆ ಹೋಗಬೇಕೆಂದು ತಿಳಿಸಿದ್ದರು ಅಂತ ಹೇಳಿದ್ದರು.

ಈ ಮೊದಲು ವಕೀಲ ಚಂದ್ರಶೇಖರ್ ಮಾತನಾಡಿ, ಅಂಬಿಡೆಂಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಆಯುಕ್ತರು ಜನಾರ್ದನ ರೆಡ್ಡಿಯವರ ಹೆಸರನ್ನು ಪ್ರಸ್ತಾಪಿಸಿದ್ದರು. ಅಲ್ಲದೇ ಅದೇ ಪೊಲೀಸ್ ಪ್ರಕರಟಣೆಯಲ್ಲಿ ರೆಡ್ಡಿ ವಿರುದ್ಧ ಕೆಲವೊಂದು ಆರೋಪಗಳನ್ನು ಕೂಡ ಮಾಡಿದ್ದರು. ಆದ್ರೆ ಅವೆಲ್ಲವೂ ಸತ್ಯಕ್ಕೆ ದೂರವಾದದ್ದಾಗಿದೆ. ವಿನಾಕಾರಣ ಸಿಸಿಬಿಯವರು ಜನಾರ್ದನ ರೆಡ್ಡಿ ಮೇಲೆ ಆರೋಪ ಮಾಡಿದ್ದಾರೆ. ಆದ್ರೆ ಸಿಸಿಬಿ ನೋಟಿಸ್ ಜಾರಿ ಮಾಡಲಿಲ್ಲ. ಹೀಗಾಗಿ ನೀವು ನೋಟಿಸ್ ಜಾರಿ ಮಾಡಿ ಅಂತ ಕೇಳಿಕೊಂಡಿದ್ದೆವು. ನೋಟಿಸ್ ಜಾರಿ ಮಾಡದೇ ನಾವು ವಿಚಾರಣೆಗೆ ಹಾಜರಾಗುವುದ ಹೇಗೆ ಅಂತ ಪ್ರಶ್ನಿಸಿದ್ದೆವು. ಹೀಗಾಗಿ ಇದೀಗ ಸಿಸಿಬಿ ಅವರು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದಾರೆ. ಸದ್ಯ ನಾವು ಸಿಸಿಬಿಗೆ ಹಾಜರಾಗುತ್ತೇವೆ. ಈ ಕೇಸ್ ನಲ್ಲಿ ಪ್ರತಿ ಹಂತದಲ್ಲಿಯೂ ವಿಚಾರಣೆಗೆ ಸಂಪೂರ್ಣವಾಗಿ ಸಿದ್ಧರಿದ್ದೇವೆ. ಒಟ್ಟಿನಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗೆ ಸಂಪೂರ್ಣ ಸಹಕಾರ ನೀಡುತ್ತೇವೆ ಅಂತ ಹೇಳಿದ್ದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

Share This Article
Leave a Comment

Leave a Reply

Your email address will not be published. Required fields are marked *