ಸಾರ್ವಜನಿಕರಿಗೆ ಆನ್‍ಲೈನ್‍ನಲ್ಲಿ ವಂಚನೆ- ಸಿಸಿಬಿಯಿಂದ ಆರೋಪಿಗಳ ಬಂಧನ

Public TV
2 Min Read

– ವಂಚನೆ ಮಾಡುತ್ತಿದ್ದಿದ್ದು ಹೇಗೆ?

ಮಡಿಕೇರಿ: ಹಣ ದ್ವಿಗುಣ ಮಾಡಿಕೊಡುವುದಾಗಿ ನಂಬಿಸಿ ಸಾರ್ವಜನಿಕರನ್ನು ವಂಚಿಸಿರುವ ವ್ಯವಸ್ಥಿತ ಆನ್‍ಲೈನ್ ವಂಚಕರ ತಂಡವೊಂದನ್ನು ಬಂಧಿಸುವಲ್ಲಿ ಸಿಸಿಬಿ (ಅಪರಾಧ ಪತ್ತೆ ದಳ) ಪೊಲೀಸರು ಯಶಸ್ವಿಯಾಗಿದ್ದಾರೆ.

ಈ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ ಡಿ.ಪನ್ನೇಕರ್ ಮಾತನಾಡಿ, ಹಣ ದುಪ್ಪಟ್ಟು ಮಾಡಿಕೊಡುವುದಾಗಿ ಸಾರ್ವಜನಿಕರಿಗೆ ಆಮಿಷವೊಡ್ಡಿ ಅವರಿಂದ ಹಣ ಹೂಡಿಕೆ ಮಾಡಿಸಿದ್ದ ಬೆಂಗಳೂರಿನ ಅನಧಿಕೃತ Capitalraitiin.in ಎನ್ನುವ ವೆಬ್ ಸೈಟ್‍ನಲ್ಲಿ ಮೋಸ ಮಾಡಿದ್ದ ಕುಶಾಲನಗರದ ಮೂಲದ ಎ.ಜಾನ್ (45), ಶಶಿಕಾಂತ್ (37) ಹಾಗೂ (39) ಆಂಟೋನಿ ಎನ್ನುವ ಮೂವರನ್ನು ಬಂಧಿಸಲಾಗಿದೆ. ತಂಡದ 5 ಮಂದಿ ತಲೆ ಮರೆಸಿಕೊಂಡಿದ್ದಾರೆ ಎಂದು ತಿಳಿಸಿದರು.

ವಂಚಿಸಿದ್ದು ಹೇಗೆ?:
ಕೊಡಗು ಜಿಲ್ಲೆ ಸೇರಿದಂತೆ ರಾಜ್ಯಾದ್ಯಂತ ಸಾವಿರಾರು ಸಾರ್ವಜನಿಕರು ಈ ವಂಚಕರ ಆನ್‍ಲೈನ್ ಜಾಲಕ್ಕೆ ಮೋಸ ಹೋಗಿದ್ದಾರೆ. ಸಾಕಷ್ಟು ಜನರು ಕೋಟ್ಯಂತರ ಹಣವನ್ನು ಕಳೆದುಕೊಂಡಿದ್ದಾರೆ. ಆರೋಪಿ ಶಶಿಕಂತಾ ಅಡ್ಮಿನ್ ಮಾಡಿಕೊಳ್ಳುತ್ತಿದ್ದ. ಹಣ ತೊಡಗಿಸುವ ಮೊದಲು ಶಶಿಕಾಂತ್‍ನನ್ನು ಸಂಪರ್ಕಿಸಿ ಯೂಸರ್ ಐಡಿ ಹಾಗೂ ಪಾಸ್ ವರ್ಡ್ ನೊಂದಿಗೆ ಒಂದು ಇ-ಪಿನ್‍ಗೆ 1000 ರೂ. ಪಾವತಿಸಿ ಖರೀದಿಸಬೇಕು. ಸೈಟ್‍ಗೆ ಯೂಸರ್ ಐಡಿ ಮತ್ತು ಪಾಸ್ ವರ್ಡ್ ಬಳಸಿ ಲಾಗಿನ್ ಆಗಿ ಒಂದು ಯೂಸರ್ ಐಡಿ ಪಡೆಯಲು 3000 ರೂ. ಹಣ ತೊಡಗಿಸಬೇಕು.

ಪ್ರತಿನಿತ್ಯ ಒಂದು ಯೂಸರ್ ಐಡಿಯಿಂದ ಮೂರು ಇ-ಪಿನ್ ಮಾತ್ರ ಬಳಸಬಹುದು. ಹಣ ಹೂಡಿಕೆಗೆ ಲಾಗಿನ್ ಆದ ಕೂಡಲೇ ತಾವು ಹೂಡಿಕೆ ಮಾಡುತ್ತಿರುವ 3000 ರೂ. ಹಣ ಯಾರ ಖಾತೆಗೆ ವರ್ಗಾವಣೆ ಆಗಬೇಕೆಂದು ಮಾನೀಟರ್‍ನಲ್ಲಿ ತೋರಿಸಲಾಗುತ್ತಿತ್ತು. ಹಣವನ್ನು ಗೂಗಲ್ ಪೇ, ಪೋನ್ ಪೇ ಅಥವಾ ನೆಟ್ ಬ್ಯಾಂಕಿಂಗ್‍ನಲ್ಲಿ ಹಣ ಹಾಕುವುದಾಗಿ ತಿಳಿಸಿ, ಹಣ ಸಂದಾಯದ ರಶೀದಿಯನ್ನು ಅಪ್‍ಲೋಡ್ ಮಾಡಿದ ನಂತರ ಹಣ ಹೂಡಿಕೆ ಮಾಡಿದ ವ್ಯಕ್ತಿಯ ಹಿರಿತನ ಪ್ರಾರಂಭವಾಗುತ್ತದೆ. ಹೀಗೆ ಒಂದು ವ್ಯವಸ್ಥಿತವಾದ ಆನ್ ಲೈನ್ ಮೂಲಕ ವಂಚಿಸುತ್ತಿದ್ದರು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿವರಿಸಿದರು.

ಸಾಕಷ್ಟು ಆನ್‍ಲೈನ್ ವಂಚನೆ ಪ್ರಕರಣಗಳು ರಾಜ್ಯಾದ್ಯಂತ ಸಕ್ರಿಯವಾಗಿದ್ದು ಜಿಲ್ಲೆಯ ಜನತೆ ಎಚ್ವರಿಕೆಯಿಂದ ಇರಬೇಕು ಎಂದು ಕಿವಿ ಮಾತು ಹೇಳಿದರು.

Share This Article
Leave a Comment

Leave a Reply

Your email address will not be published. Required fields are marked *