9ನೇ ತರಗತಿ ವಿದ್ಯಾರ್ಥಿಗಳಿಗೆ ಪುಸ್ತಕ ನೋಡಿ ಪರೀಕ್ಷೆ ಬರೆಯಲು ಅವಕಾಶ – ಹೇಗಿರಲಿದೆ ಎಕ್ಸಾಂ?

Public TV
3 Min Read

ಷ್ಟು ದಿನ ಮನೆಯಲ್ಲಿ ಕಂಠಪಾಠ ಮಾಡಿಕೊಂಡು ಹೋಗಿ ಶಾಲೆಯಲ್ಲಿ ಪರೀಕ್ಷೆ ಬರೆಯುತ್ತಿದ್ದ ಮಕ್ಕಳಿಗೆ ಸಿಬಿಎಸ್‌ಇ ಗುಡ್‌ನ್ಯೂಸ್‌ ಕೊಟ್ಟಿದೆ. ಇನ್ಮುಂದೆ ಓದಿಕೊಂಡು ಹೋಗಿ ಪರೀಕ್ಷೆ ಬರೆಯುವ ಅಗತ್ಯವಿಲ್ಲ. ಮಕ್ಕಳ ಟೆನ್ಷನ್‌ ಪರಿಹರಿಸುವ ಸಲುವಾಗಿ 2026-27ನೇ ಶೈಕ್ಷಣಿಕ ವರ್ಷದಿಂದ ಜಾರಿಗೆ ಬರುವಂತೆ 9ನೇ ತರಗತಿ ವಿದ್ಯಾರ್ಥಿಗಳಿಗೆ ತೆರೆದ ಪುಸ್ತಕ (ಓಪನ್ ಬುಕ್) ಪರೀಕ್ಷೆ ಜಾರಿಗೊಳಿಸಲು ಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿ ಸಿಬಿಎಸ್ಇ ನಿರ್ಧಾರ ಕೈಗೊಂಡಿದೆ.

ಈ ಹೊಸ ನೀತಿ ಜಾರಿಯಾದಲ್ಲಿ ವಿದ್ಯಾರ್ಥಿಗಳು ಪಠ್ಯಪುಸ್ತಕ ನೋಡಿಕೊಂಡು ಪರೀಕ್ಷೆ ಬರೆಯಲು ಅವಕಾಶ ಸಿಗಲಿದೆ. ಹಾಗಿದ್ರೆ ಏನಿದು ತೆರೆದ ಪುಸ್ತಕ ಪರೀಕ್ಷಾ ಪದ್ಧತಿ? ಪರೀಕ್ಷೆಗಳು ಹೇಗೆ ನಡೆಯಲಿದೆ? ಪ್ರಯೋಜನಗಳೇನು ಎಂಬ ಕುರಿತು ಇಲ್ಲಿ ವಿವರಿಸಲಾಗಿದೆ.

ತೆರೆದ ಪುಸ್ತಕ ಪರೀಕ್ಷೆ:
ಕೇಂದ್ರೀಯ ಮಾಧ್ಯಮ ಶಿಕ್ಷಣ ಮಂಡಳಿ ಪರೀಕ್ಷಾ ಪದ್ಧತಿಯಲ್ಲಿ ಬದಲಾವಣೆ ಮಾಡಲಾಗಿದೆ. ಮುಂದಿನ ಶೈಕ್ಷಣಿಕ ವರ್ಷದಿಂದ ತೆರೆದ ಪುಸ್ತಕ ಪರೀಕ್ಷಾ ಪದ್ಧತಿ ಜಾರಿ ಮಾಡಲಾಗುತ್ತಿದೆ. ಹೀಗಾಗಿ ಇನ್ಮುಂದೆ ವಿದ್ಯಾರ್ಥಿಗಳು ಪಠ್ಯ ಪುಸ್ತಕ ನೋಡಿ ಪರೀಕ್ಷೆ ಬರೆಯಲು ಅವಕಾಶ ಇರುತ್ತದೆ. ಹಳೆಯ ಪರೀಕ್ಷಾ ಪದ್ಧತಿ ಕಂಠ ಪಾಠಕ್ಕೆ ಸಮಯ ಕೊಡುತ್ತೆ ಅನ್ನೋ ವಾದ ಇತ್ತು. ಈಗಿನ ಹೊಸ ಪರೀಕ್ಷಾ ಪದ್ಧತಿ ವಿದ್ಯಾರ್ಥಿ ಸಾಮರ್ಥ್ಯವನ್ನ ಗಣನೆಗೆ ತೆಗೆದುಕೊಳ್ಳುತ್ತದೆ. ಇಂತಹ ಕ್ರಮ ಆಯ್ಕೆ ಮಾಡುವ ಅನುಸರಿಸುವ ಹಕ್ಕು ಆಯಾ ಶಾಲೆಗಳಿಗೆ ಬಿಟ್ಟಿರುತ್ತದೆ. ರಾಷ್ಟ್ರೀಯ ಪಠ್ಯಕ್ರಮದ ಚೌಕಟ್ಟು -2023 ರಾಷ್ಟ್ರೀಯ ಶಿಕ್ಷಣ ನೀತಿ 2020ರ ಸಮನ್ವಯದೊಂದಿಗೆ ಹೊಸ ಪಠ್ಯಕ್ರಮವನ್ನು ಜಾರಿಗೊಳಿಸಲಾಗುತ್ತಿದೆ.

ಹಳೆಯ ಪರೀಕ್ಷಾ ಪದ್ಧತಿ ಕಂಠಪಾಠಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡಿದರೆ ಹೊಸ ನೀತಿಯು ಸಾಮರ್ಥ್ಯ ಆಧಾರಿತ ಕಲಿಕೆಗೆ ಮಹತ್ವ ಕೊಡುತ್ತದೆ. ಮುಖ್ಯ ಕಲಿಕಾ ವಿಷಯಗಳಾದ ಭಾಷೆ, ಗಣಿತ, ವಿಜ್ಞಾನ ಸಮಾಜ ವಿಜ್ಞಾನವನ್ನು ಇದು ಒಳಗೊಳ್ಳಲಿದೆ. ಈ ಕ್ರಮವನ್ನು ಆಯ್ಕೆ ಮಾಡಿಕೊಳ್ಳುವ ಅಥವಾ ಬಿಡುವ ಸ್ವಾತಂತ್ರ್ಯವನ್ನು ಶಾಲೆಗಳಿಗೆ ನೀಡಲಾಗಿದೆ.

ತೆರೆದ ಪುಸ್ತಕ ಪರೀಕ್ಷೆ ಎಂದರೇನು?
ತೆರೆದ ಪುಸ್ತಕ ಪರೀಕ್ಷೆಗಳನ್ನು ಜಾರಿಗೆ ತಂದ ನಂತರ 9ನೇ ತರಗತಿಯ ವಿದ್ಯಾರ್ಥಿಗಳು ಪರೀಕ್ಷೆಯ ಸಮಯದಲ್ಲಿ ಪ್ರಶ್ನೆಗಳಿಗೆ ಉತ್ತರಿಸುವಾಗ ಪಠ್ಯಪುಸ್ತಕಗಳು, ತರಗತಿ ಟಿಪ್ಪಣಿಗಳು, ಗ್ರಂಥಾಲಯ ಪುಸ್ತಕಗಳನ್ನು ಬಳಸುವ ಅವಕಾಶವಿರುತ್ತದೆ. 9ನೇ ತರಗತಿಯಲ್ಲಿ ತೆರೆದ ಪುಸ್ತಕ ಪುಸ್ತಕ ಪರೀಕ್ಷೆಗಳನ್ನು ಪ್ರತಿ ಅವಧಿಗೆ 3 ಪೆನ್ನು-ಪೇಪರ್ ಮೌಲ್ಯಮಾಪನಗಳ ಭಾಗವಾಗಿ ಸಂಯೋಜಿಸಲಾಗುತ್ತದೆ. ಇದು ಭಾಷೆ, ಗಣಿತ, ವಿಜ್ಞಾನ ಹಾಗೂ ಸಮಾಜ ವಿಜ್ಞಾನಗಳಂತಹ ಪ್ರಮುಖ ವಿಷಯಗಳನ್ನು ಒಳಗೊಂಡಿದೆ. ಶಾಲೆಗಳು ಇದನ್ನು ಶಿಫಾರಸು ಮಾಡುತ್ತವೆ. ಆದರೆ ಅದರ ಅನುಷ್ಠಾನವು ಕಡ್ಡಾಯವಾಗಿರುವುದಿಲ್ಲ.

ಹೇಗಿರಲಿದೆ ತೆರೆದ ಪುಸ್ತಕ ಪರೀಕ್ಷೆ?
-ಅಧ್ಯಯನವು ಪೂರ್ಣಗೊಳಿಸಲು ತೆಗೆದುಕೊಂಡ ಸಮಯ ಹಾಗೂ ಪಾಲುದಾರರಿಂದ ಪ್ರತಿಕ್ರಿಯೆಯಂತಹ ಅಂಶಗಳನ್ನು ಮೌಲ್ಯಮಾಪನ ಮಾಡಿದೆ.
-ಸಿಬಿಎಸ್‌ಇ ( CBSE) ತೆರೆದ ಪುಸ್ತಕ ಮೌಲ್ಯಮಾಪನ ಸ್ವರೂಪವು ಭಾಷೆಗಳು, ಗಣಿತ, ವಿಜ್ಞಾನ ಮತ್ತು ಸಮಾಜ ವಿಜ್ಞಾನದಂತಹ ಪ್ರಮುಖ ಮುಖ ವಿಷಯಗಳನ್ನು ಒಳಗೊಂಡಿರುತ್ತದೆ.
-ಪರೀಕ್ಷೆಯ ಸಮಯದಲ್ಲಿ ವಿದ್ಯಾರ್ಥಿಗಳು ಪಠ್ಯ ಪುಸ್ತಕಗಳು, ತರಗತಿ ಟಿಪ್ಪಣಿಗಳು ಮತ್ತು ಇತರ ಅನುಮೋದಿತ ಸಂಪನ್ಮೂಲಗಳನ್ನು ಉಲ್ಲೇಖಿಸಬಹುದು.
-ಈ ಸ್ವರೂಪವನ್ನು ಅಳವಡಿಸಿಕೊಳ್ಳಬೇಕೋ ಅಥವಾ ಬೇಡವೋ ಎಂಬುದು ಶಾಲೆಗಳಿಗೆ ಬಿಟ್ಟದ್ದು, ಅದು ಒಂದು ಆಯ್ಕೆಯಾಗಿರುತ್ತದೆ ಎಂದು CBSE ಹೇಳಿದೆ. ಪ್ರತಿ ಶೈಕ್ಷಣಿಕ ಅವಧಿಯಲ್ಲಿ ನಡೆಸುವ ಮೂರು ಪೆನ್ನು-ಪೇಪರ್ ಪರೀಕ್ಷೆಗಳ ಭಾಗವಾಗಿ ಮೌಲ್ಯಮಾಪನ ಇರುತ್ತದೆ.
-CBSE ಪರೀಕ್ಷೆಗಳು ವರ್ಷಕ್ಕೆ 2 ಬಾರಿ ನಡೆಯಲಿವೆ ಎಂದು ಕೆಲವು ತಿಂಗಳ ಹಿಂದೆಯೇ ಘೋಷಿಸಲಾಗಿತ್ತು.
-ಈ ಎರಡನೇ ಹಂತದ ಪರೀಕ್ಷೆಯು ವಿದ್ಯಾರ್ಥಿಗಳಿಗೆ ಐಚ್ಛಿಕವಾಗಿರುತ್ತದೆ ಎಂದು ಸಿಬಿಎಸ್‌ಇ ತಿಳಿಸಿದೆ. ಎರಡನೇ ಹಂತದ ಪರೀಕ್ಷೆ ವಿಶೇಷವಾಗಿ ಸುಧಾರಣೆಗಾಗಿ ಇರುತ್ತದೆ.

ತೆರೆದ ಪುಸ್ತಕ ಪರೀಕ್ಷೆ ಪ್ರಯೋಜನವೇನು?
ಈ ಉಪಕ್ರಮವು ಮಕ್ಕಳು ಪರೀಕ್ಷೆಯ ಸಮಯದಲ್ಲಿ ನೀಡಲಾದ ಪುಸ್ತಕಗಳು ಹಾಗೂ ಟಿಪ್ಪಣಿಗಳನ್ನು ಹೇಗೆ ಬಳಸುತ್ತಿದ್ದಾರೆ ಎಂಬುದನ್ನು ತೋರಿಸುತ್ತದೆ. ಇದು ಅವರ ಸಾಮರ್ಥ್ಯವನ್ನು ನಿರ್ಣಯಿಸುತ್ತದೆ.

ಈ ಪರೀಕ್ಷೆಯೂ ವಿದ್ಯಾರ್ಥಿಗಳಲ್ಲಿ ಕಂಠಪಾಠ ಮಾಡುವ ಅಭ್ಯಾಸವನ್ನು ತೆಗೆದುಹಾಕುವ ಪ್ರಯತ್ನವಾಗಿದೆ. ಬದಲಾಗಿ, ಅನ್ವಯಿಸುವ ಹಾಗೂ ವಿಶ್ಲೇಷಿಸುವ ಸಾಮರ್ಥ್ಯವನ್ನು ಪರೀಕ್ಷಿಸಲಾಗುತ್ತದೆ.

2014ರಲ್ಲೂ ಸಹ ನಡೆದಿತ್ತು ಪರೀಕ್ಷೆ:
CBSE ಓಪನ್-ಬುಕ್ ಪರೀಕ್ಷೆಯನ್ನು ಬಳಸುತ್ತಿರುವುದು ಇದೇ ಮೊದಲಲ್ಲ. ಇದಕ್ಕೂ ಮೊದಲು, ಮಂಡಳಿಯೂ 2014ರಲ್ಲಿ ಓಪನ್-ಬುಕ್ ಪರೀಕ್ಷೆಯನ್ನು ಸಹ ನಡೆಸಿತ್ತು. ನಂತರ ಅದನ್ನು ಓಪನ್ ಟೆಕ್ಸ್ ಬೇಸ್ಟ್ ಅಸೆಸ್ಟೆಂಟ್ (OTBA) ಎಂದು ಹೆಸರಿಸಲಾಯಿತು. ಈ ಅವಧಿಯಲ್ಲಿ, 9ನೇ ತರಗತಿಯಲ್ಲಿ ಹಿಂದಿ, ಇಂಗ್ಲಿಷ್, ಗಣಿತ ಮತ್ತು ಸಮಾಜ ವಿಜ್ಞಾನದ ಅಂತಿಮ ಪರೀಕ್ಷೆಗಳಲ್ಲಿ ಮತ್ತು 11ನೇ ತರಗತಿಯಲ್ಲಿ ಅರ್ಥಶಾಸ್ತ್ರ, ಜೀವಶಾಸ್ತ್ರ ಮತ್ತು ಭೂಗೋಳಶಾಸ್ತ್ರದಲ್ಲಿ OTBA ಅನ್ನು ಪ್ರಯತ್ನಿಸಲಾಯಿತು. ಆದಾಗ್ಯೂ, ವಿದ್ಯಾರ್ಥಿಗಳಲ್ಲಿ ವಿಮರ್ಶಾತ್ಮಕ ಚಿಂತನಾ ಕೌಶಲ್ಯಗಳನ್ನು ಅಭಿವೃದ್ಧಿಪಡಿಸುವಲ್ಲಿ OTRAಯಶಸ್ವಿಯಾಗಿಲ್ಲ ಎಂದು ಕಾರಣ ನೀಡಿ 2017-18ರಲ್ಲಿ ಅದನ್ನು ನಿಲ್ಲಿಸಲಾಯಿತು.

Share This Article