CBSE 12ನೇ ತರಗತಿ ಪರೀಕ್ಷೆಗೆ ತಡೆ ಕೋರಿ ಸುಪ್ರೀಂಗೆ ಅರ್ಜಿ

Public TV
1 Min Read

ನವದೆಹಲಿ: ಜುಲೈನಲ್ಲಿ 12ನೇ ತರಗತಿ ಪರೀಕ್ಷೆಗಳು ನಡೆಸಲು CBSE ಬೋರ್ಡ್ ಅಧಿಸೂಚನೆ ಹೊರಡಿಸಿದ್ದು ಪರೀಕ್ಷೆಗೆ ತಡೆ ಕೋರಿ ಪೋಷಕರ ಒಕ್ಕೂಟ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಾರೆ. ರಾಜ್ಯದಲ್ಲೂ SSLC ಪರೀಕ್ಷೆಗಳು ಬೇಕು ಬೇಡ ಎನ್ನುವ ಚರ್ಚೆ ನಡೆದಿದ್ದು ಈ ಅರ್ಜಿ ವಿಚಾರಣೆ ಮಹತ್ವ ಪಡೆದುಕೊಂಡಿದೆ.

ಕೊರೊನಾ ಹಿನ್ನೆಲೆ ಮುಂದೂಡಿಕೆಯಾಗಿದ್ದ 12ನೇ ತರಗತಿ ಪರೀಕ್ಷೆಗಳನ್ನು ಜುಲೈ 1 ರಿಂದ 15 ರೊಳಗೆ ನಡೆಸಲು ಸಿಬಿಎಸ್‍ ಇ ಬೋರ್ಡ್ ದಿನಾಂಕ ಪ್ರಕಟಿಸಿತ್ತು. ಕೊರೊನಾ ಸಂಕಷ್ಟ ಸಂಧರ್ಭದಲ್ಲಿ ಪರೀಕ್ಷೆ ನಡೆಸಲು ನಿರ್ಧರಿಸಿರುವ ಬೋರ್ಡ್ ವಿರುದ್ಧ ದೆಹಲಿಯ ಪೋಷಕರ ಒಕ್ಕೂಟ ಆಕ್ರೋಶ ವ್ಯಕ್ತಪಡಿಸಿ ಅರ್ಜಿ ಸಲ್ಲಿಸಿದೆ.

ಕೊರೊನಾ ಸೋಂಕು ಜುಲೈನಲ್ಲಿ ಹೆಚ್ಚಳವಾಗಲಿದ್ದು, ಮೂರು ಲಕ್ಷದ ಗಡಿ ದಾಟಲಿದೆ ಎಂದು ದೆಹಲಿ ಏಮ್ಸ್ ಆಸ್ಪತ್ರೆ ತಜ್ಞರು ಹೇಳಿದ್ದಾರೆ. ಈ ನಡುವೆ ದೆಹಲಿಯಲ್ಲಿ ಜುಲೈ ವೇಳೆಗೆ ತಾಪಮಾನ 45 ಡಿಗ್ರಿ ಸೆಲ್ಸಿಯಸ್ ಗೆ ಏರಿಕೆಯಾಗಲಿದ್ದು ಗ್ಲೌಸ್, ಮಾಸ್ಕ್ ಧರಿಸಿ ಮಕ್ಕಳು ಪರೀಕ್ಷೆ ಬರೆಯುವುದು ಅಸಾಧ್ಯ ಎಂದು ಪೋಷಕರು ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.

ವಿದೇಶಗಳಲ್ಲೂ ಶಾಲೆಗಳನ್ನು ಹೊಂದಿರುವ ಸಿಬಿಎಸ್‍ ಇ ಬೋರ್ಡ್ ಕೊರೊನಾ ಹಿನ್ನೆಲೆ ಪರೀಕ್ಷೆಗಳನ್ನು ರದ್ದು ಮಾಡಿದೆ. ಸುಮಾರು 250 ವಿದೇಶಿ ಶಾಲೆಗಳಲ್ಲಿ ಆಂತರಿಕ ಅಂಕಗಳು ಆಧರಿಸಿ ಉತ್ತೀರ್ಣ ಮಾಡಲಾಗಿದೆ. ಕೊರೊನಾ ತೀವ್ರತೆ ಅರಿತು ಭಾರತದಲ್ಲೂ ಅದೇ ಮಾದರಿ ಜಾರಿ ತರಬಹುದು ಎಂದು ಅರ್ಜಿಯಲ್ಲಿ ಮನವಿ ಮಾಡಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *