ಸಿಬಿಐ ನಾಗೇಶ್ವರ್ ರಾವ್‍ಗೆ 1 ಲಕ್ಷ ರೂ. ದಂಡ – ಕೋರ್ಟ್ ಮೂಲೆಯಲ್ಲಿ ಕೂರುವ ಶಿಕ್ಷೆ

Public TV
2 Min Read

ನವದೆಹಲಿ: ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಸಿಬಿಐ ಹಿರಿಯ ಅಧಿಕಾರಿಯಾಗಿರುವ ಎಂ ನಾಗೇಶ್ವರ್ ರಾವ್ ಅವರಿಗೆ ಸುಪ್ರೀಂ ಕೋರ್ಟ್ ಒಂದು ಲಕ್ಷ ರೂ. ದಂಡ ವಿಧಿಸಿ ಕೋರ್ಟ್ ಮೂಲೆಯಲ್ಲಿ ಕೂರುವ ಶಿಕ್ಷೆಯನ್ನು ನೀಡಿದೆ.

ಬಿಹಾರ ವಸತಿ ನಿಲಯದಲ್ಲಿ ನಡೆದ ಲೈಂಗಿಕ ದೌರ್ಜನ್ಯ ಪ್ರಕರಣದ ವಿಚಾರಣೆ ನಡೆಸುತ್ತಿದ್ದ ಅಧಿಕಾರಿಯನ್ನು ವರ್ಗಾವಣೆ ಮಾಡಿದ್ದ ಎಂ ನಾಗೇಶ್ವರ್ ಅವರ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಾಗಿತ್ತು. ಇದರ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್ ನೇತೃತ್ವದ ಪೀಠ ಪ್ರಕರಣದಲ್ಲಿ ನಾಗೇಶ್ವರ್ ರಾವ್ ಮತ್ತು ಹೆಚ್ಚುವರಿ ಕಾನೂನು ಸಲಹೆಗಾರ ಭಾಸುರಾಮ್ ತಪ್ಪಿಸ್ಥರು ಎಂದು ತೀರ್ಪು ನೀಡಿದೆ.

ವಿಚಾರಣೆಯ ವೇಳೆ ಎಂ ನಾಗೇಶ್ವರ್ ರಾವ್ ಅವರ ಕ್ಷಮೆಯನ್ನು ತಿರಸ್ಕರಿಸಿದ ನ್ಯಾಯಮೂರ್ತಿಗಳು, 30 ದಿನಗಳ ಕಾಲ ಜೈಲು ಶಿಕ್ಷೆ ನೀಡುವ ಬಗ್ಗೆ ಎಚ್ಚರಿಕೆ ನೀಡಿದ್ದರು. ಆದರೆ ನಾಗೇಶ್ವರ್ ರಾವ್ ಸೋಮವಾರವೇ ಬೇಷರತ್ ಕ್ಷಮೆ ಕೇಳಿದ ಪರಿಣಾಮ ಕೋರ್ಟ್ ಹಾಲಿನಲ್ಲಿ ಕುಳಿತುಕೊಳ್ಳುವ ಶಿಕ್ಷೆ ವಿಧಿಸಿದ್ದಾರೆ.

ಸಿಬಿಐ ಹಂಗಾಮಿ ನಿರ್ದೇಶಕರಾಗಿದ್ದ ವೇಳೆ ನಾಗೇಶ್ವರ್ ರಾವ್ ಅವರು, ಸುಪ್ರೀಂ ಆದೇಶವಿದ್ದರೂ ಕೂಡ ಬಿಹಾರದ ವಸತಿ ನಿಲಯದಲ್ಲಿ ನಡೆದ ಲೈಂಗಿಕ ದೌರ್ಜನ್ಯ ಪ್ರಕರಣದ ವಿಚಾರಣೆ ನಡೆಸುತ್ತಿದ್ದ ಸಿಬಿಐ ಮಾಜಿ ಜಂಟಿ ನಿರ್ದೇಶಕ ಎಕೆ ಶರ್ಮಾರನ್ನು ಜನವರಿ 18 ರಂದು ವರ್ಗಾವಣೆ ಮಾಡಿದ್ದರು. ಇದು ನ್ಯಾಯಾಂಗ ನಿಂದನೆ ಎಂದು ಸುಪ್ರೀಂ ಪರಿಗಣಿಸಿತ್ತು. ವಿಚಾರಣೆಯ ವೇಳೆ ಕೋರ್ಟ್ ಬಿಹಾರ ವಸತಿ ನಿಲಯದಲ್ಲಿ ನಡೆದ ಲೈಂಗಿಕ ದೌರ್ಜನ್ಯ ಪ್ರಕರಣವನ್ನು ತನಿಖೆ ನಡೆಸುತ್ತಿರುವ ಯಾವೊಬ್ಬ ಅಧಿಕಾರಿಯನ್ನು ತನ್ನ ಗಮನಕ್ಕೆ ಬಾರದೇ ವರ್ಗಾವಣೆ ಮಾಡುವಂತಿಲ್ಲ ಎಂದು ಕೋರ್ಟ್ ಸಿಬಿಐಗೆ ಸೂಚಿಸಿದೆ.

ಈ ಪ್ರಕರಣದಲ್ಲಿ ಉದ್ದೇಶ ಪೂರ್ವಕವಾಗಿ ತಪ್ಪು ಮಾಡಿಲ್ಲ. ಕೆಲಸ ಒತ್ತಡದಿಂದ ಹಾಗು ನಿರ್ಧಾರದ ಪ್ರಕ್ರಿಯೆಯಲ್ಲಿನ ಲೋಪದಿಂದ ಘಟನೆ ನಡೆದಿದೆ ಎಂದು ಸ್ಪಷ್ಟನೆ ನೀಡಿದ್ದರು. ಅಲ್ಲದೇ ತಮ್ಮ ಆದೇಶದಲ್ಲಿ ಸುಪ್ರೀಂ ಕೋರ್ಟ್ ನಿರ್ದೇಶನ ಉಲ್ಲಂಘಿಸುವ ಉದ್ದೇಶ ಇರಲಿಲ್ಲ ಸಿಬಿಐ ಪರವಾಗಿ ಅಟಾರ್ನಿ ಜನರಲ್ ಕೆಕೆ ವೇಣುಗೋಪಾಲ್ ವಾದಿಸಿದ್ದರು.

ಸಿಬಿಐ ನಿರ್ದೇಶಕರಾಗಿದ್ದ ಅಲೋಕ್ ವರ್ಮಾ ಮತ್ತು ವಿಶೇಷ ನಿರ್ದೇಶಕರಾಗಿದ್ದ ರಾಕೇಶ್ ಅಸ್ಥಾನಾ ಅವರ ನಡುವಿನ ಕಿತ್ತಾಟದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಇಬ್ಬರನ್ನು ಸೆವೆಯಿಂದ ಮುಕ್ತಿಗೊಳಿಸಿ ಎಂ ನಾಗೇಶ್ವರ್ ಅವರನ್ನು ಹಂಗಾಮಿ ನಿರ್ದೇಶಕರನ್ನಾಗಿ ನೇಮಿಸಿತ್ತು. ಈ ಸಂದರ್ಭದಲ್ಲಿ ಹಲವು ಅಧಿಕಾರಿಗಳನ್ನು ನಾಗೇಶ್ವರ್ ರಾವ್ ಹಲವು ಅಧಿಕಾರಿಗಳನ್ನು ವರ್ಗಾವಣೆ ಮಾಡಿದ್ದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *