ಡಿವೈಎಸ್ಪಿ ಗಣಪತಿ ಕೇಸಲ್ಲಿ ಸಿಬಿಐ ಎಫ್.ಐ.ಆರ್ – ಮತ್ತೆ ಸಂಕಷ್ಟದಲ್ಲಿ ಜಾರ್ಜ್

Public TV
3 Min Read

ಬೆಂಗಳೂರು: ಡಿವೈಎಸ್ಪಿ ಗಣಪತಿ ನಿಗೂಢ ಆತ್ಮಹತ್ಯೆ ಪ್ರಕರಣದಲ್ಲಿ ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್‍ಗೆ ಮತ್ತೆ ಸಂಕಷ್ಟ ಎದುರಾಗಿದೆ. ಸುಪ್ರೀಂ ಕೋರ್ಟ್ ಸೂಚನೆ ಮೇರೆಗೆ ತನಿಖೆ ಆರಂಭಿಸಿರುವ ಸಿಬಿಐ ಇಂದು ಸಚಿವ ಜಾರ್ಜ್ ವಿರುದ್ಧ ಎಫ್.ಐ.ಆರ್ ದಾಖಲಿಸಿದೆ. ಆತ್ಮಹತ್ಯೆಗೂ ಮುನ್ನ ಡಿವೈಎಸ್ಪಿ ಗಣಪತಿ ನೀಡಿರುವ ಹೇಳಿಕೆಯನ್ನು ಆಧರಿಸಿ ಸಚಿವ ಕೆ.ಜೆ. ಜಾರ್ಜ್ ವಿರುದ್ಧ ಸೆಕ್ಷನ್ 306 ಅಡಿಯಲ್ಲಿ ಆತ್ಮಹತ್ಯೆಗೆ ಪ್ರಚೋದನೆ ಆರೋಪದಡಿ ಸಿಬಿಐ ಎಫ್.ಐ.ಆರ್ ದಾಖಲಿಸಿದೆ.

ಸಿಬಿಐ ದಾಖಲಿಸಿರೋ ಎಫ್.ಐ.ಆರ್ ನಲ್ಲೇನಿದೆ.?
ಕೆ.ಜೆ. ಜಾರ್ಜ್- ಎ1 ಆರೋಪಿ (ಬೆಂಗಳೂರು ನಗರಾಭಿವೃದ್ಧಿ ಸಚಿವ), ಪ್ರಣವ್ ಮೊಹಾಂತಿ- ಎ2 ಆರೋಪಿ (ಆಧಾರ್, ಉಪ ಮಹಾನಿರ್ದೇಶಕ, ಐಪಿಎಸ್ ಅಧಿಕಾರಿ), ಎ.ಎಂ. ಪ್ರಸಾದ್- ಎ-3 ಆರೋಪಿ (ಗುಪ್ತಚರ ಇಲಾಖೆ ಡಿಜಿ)

ಕೆ.ಜೆ. ಜಾರ್ಜ್ ವಿರುದ್ಧ ಎಫ್‍ಐಆರ್ ದಾಖಲಿಸುತ್ತಿದ್ದಂತೆ, ಮುಖ್ಯಮಂತ್ರಿ ಸಿದ್ದರಾಮಯ್ಯ ತುರ್ತು ಸಭೆ ನಡೆಸಿದ್ದರು. ಪೂರ್ವ ನಿಗದಿಯಾಗಿದ್ದ ರಾಜ್ಯ ಸಚಿವ ಸಂಪುಟ ಸಭೆ ಮುಗಿಯುತ್ತಿದ್ದಂತೆ, ಸಚಿವ ಜಾರ್ಜ್ ಸೇರಿದಂತೆ, ತಮ್ಮ ಆಪ್ತ ಸಚಿವರೊಂದಿಗೆ ಸಭೆ ನಡೆಸಿದ್ದಾರೆ. ಮುಂದೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚೆ ನಡೆಸಿದ್ದಾರೆ. ಮೂಲಗಳ ಪ್ರಕಾರ, ಸಚಿವ ಜಾರ್ಜ್ ರಾಜೀನಾಮೆ ನೀಡುವ ಸಾಧ್ಯತೆಗಳಿಲ್ಲ. ಮೂರು ತಿಂಗಳಲ್ಲಿ ತನಿಖಾ ವರದಿ ಸಲ್ಲಿಸಲು ಸುಪ್ರೀಂ ಕೋರ್ಟ್ ಸೂಚಿಸಿರುವುದರಿಂದ ಈ ವರದಿಯನ್ನು ಆಧರಿಸಿ ಜಾರ್ಜ್ ಮುಂದಿನ ಹೆಜ್ಜೆ ಇಡಲಿದ್ದಾರೆ ಎನ್ನಲಾಗಿದೆ. ಪ್ರಕರಣದ ಮುಂದಿನ ಹಂತದಲ್ಲಿ ಸಿಬಿಐನಿಂದ ವಿಚಾರಣೆಗಾಗಿ ಸಮನ್ಸ್ ಜಾರಿಯಾಗುವ ಸಾಧ್ಯತೆಯಿದೆ.

ನಾಳೆ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಕೆ: ಎಫ್.ಐ.ಆರ್ ದಾಖಲಾಗಿರುವ ಹಿನ್ನೆಲೆಯಲ್ಲಿ ನಾಳೆ ಸಿಬಿಐ ಕೋರ್ಟ್ ನಲ್ಲಿ ನಿರೀಕ್ಷಣಾ ಜಾಮೀನಿಗಾಗಿ ಅರ್ಜಿ ಸಲ್ಲಿಸಲಿದ್ದಾರೆ ಎನ್ನಲಾಗಿದೆ. ಕೆ.ಜೆ.ಜಾರ್ಜ್ ಪರ ವಕೀಲರು ಸಿಟಿ ಸಿವಿಲ್ ಕೋರ್ಟ್ ನಲ್ಲಿರೋ ಸಿಬಿಐ ವಿಶೇಷ ನ್ಯಾಯಾಲಯದಲ್ಲಿ ನಾಳೆ ಬೆಳಗ್ಗೆ 11 ಗಂಟೆಗೆ ನಿರೀಕ್ಷಣ ಜಾಮೀನಿಗಾಗಿ ಅರ್ಜಿ ಸಲ್ಲಿಸುವ ಸಾಧ್ಯತೆಯಿದೆ. ಶನಿವಾರ ಮತ್ತು ಭಾನುವಾರ ಕೋರ್ಟ್ ರಜೆ ಇರುವ ಕಾರಣ ಶುಕ್ರವಾರವೇ ವಿಚಾರಣೆಗೆ ಕೈಗೆತ್ತಿಕೊಳ್ಳುವಂತೆ ಮನವಿ ಮಾಡುವ ಸಾಧ್ಯತೆಯಿದೆ.

ಎಫ್.ಐ.ಆರ್ ಬೆನ್ನಲ್ಲೆ ತನಿಖೆ ಚುರುಕುಗೊಳಿಸಿದ ಸಿಬಿಐ ತಂಡ ಕರ್ನಾಟಕ ಸಿಐಡಿ ಅಧಿಕಾರಿಗಳಿಂದ ಇನ್ನೂ ಮಾಹಿತಿ ಪಡೆಯುತ್ತಿದ್ದಾರೆ. ಘಟನೆ ನಡೆದ ವಿವರ, ಎಫ್.ಎಸ್.ಎಲ್ ವರದಿ ಎಲ್ಲದರ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದಾರೆ. ನಾಳೆಯೇ ಬೆಂಗಳೂರಿಗೆ ಬರಲು ಸಿದ್ಧತೆ ನಡೆಸಿರೋ ಸಿಬಿಐ ತಂಡ ಮಧ್ಯಂತರ ನಿರೀಕ್ಷಣಾ ಜಾಮೀನು ನೀಡದಂತೆ ಆಕ್ಷೇಪಣೆ ಸಲ್ಲಿಸಲು ಅವಕಾಶ ಕೋರಲು ಸಿದ್ಧತೆ ನಡೆಸುತ್ತಿದೆ ಎಂಬ ಮಾಹಿತಿಯೂ ಇದೆ.

2016ರ ಜುಲೈ 7ರಂದು ಡಿವೈಎಸ್‍ಪಿ ಗಣಪತಿ ಮಡಿಕೇರಿಯ ಲಾಡ್ಜ್ ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ವೇಳೆ ಸಚಿವ ಕೆ.ಜೆ.ಜಾರ್ಜ್ ರಾಜೀನಾಮೆ ನೀಡಿದ್ದರು.

ಸಿಬಿಐ ಎಫ್.ಐ.ಆರ್ ದಾಖಲಾದ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಗಣಪತಿ ಸೋದರಿ ಸಬಿತಾ, ನನ್ನ ಸೋದರನ ಸಾವಿಗೆ ಕಾರಣ ಯಾರು ಎನ್ನುವುದು ಗೊತ್ತಾಗಬೇಕು. ಈ ತನಿಖೆಯಿಂದ ನ್ಯಾಯ ಸಿಗುವ ಭರವಸೆಯಿದೆ ಎಂದರು.

ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಭೆ ಬಳಿಕ ಮಾತನಾಡಿದ ಆರೋಗ್ಯ ಸಚಿವ ರಮೇಶ್ ಕುಮಾರ್, ಇದು ಕೇಂದ್ರ ಸರ್ಕಾರದ ರಾಜಕೀಯ ಪ್ರೇರಿತ ನಡೆ. ಸಿಬಿಐ ರಾಜಕೀಯ ಪ್ರೇರಿತವಾಗಿ ಕೆಲಸ ಮಾಡುತ್ತದೆ ಅನ್ನೋದು ಎಲ್ಲರಿಗೂ ಗೊತ್ತಿದೆ. ನಾವು ಯಾವುದೇ ಕಾರಣಕ್ಕೂ ಜಾರ್ಜ್ ರಾಜೀನಾಮೆ ಕೊಡಲು ಬಿಡುವುದಿಲ್ಲ. ನಾವು ರಾಜಕೀಯವಾಗೇ ಉತ್ತರ ನೀಡುತ್ತೇವೆ. ಕೇಂದ್ರದಲ್ಲಿ ಯಾರ ವಿರುದ್ಧವೆಲ್ಲಾ ಎಫ್.ಐ.ಆರ್ ದಾಖಲಾಗಿಲ್ಲ ಹೇಳಿ ಎಂದು ಮೋದಿ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿ ಹಿಟ್ಲರ್ ನ ತಮ್ಮನಂತೆ ವರ್ತಿಸುತ್ತಿದ್ದಾರೆ ಎಂದರು.

ಇದೇ ವೇಳೆ ಮಾತನಾಡಿದ ಸಿ.ಎಂ.ಇಬ್ರಾಹಿಂ, ಇದು ರಾಜಕೀಯ ಪ್ರೇರಿತ. ಸಿದ್ದರಾಮಯ್ಯರನ್ನು ದುರ್ಬಲಗೊಳಿಸಲು ಎಫ್.ಐ.ಆರ್ ಹಾಕುವ ಕ್ರಮಕೈಗೊಂಡಿದ್ದಾರೆ. ನಮ್ಮಲ್ಲಿ ಬೌಲರ್ ಗಳು, ಬ್ಯಾಟ್ಸ್ ಮನ್‍ಗಳು, ವಿಕೆಟ್ ಕೀಪರ್ ಗಳು ಇದ್ದಾರೆ ಎಂದರು.

Share This Article
Leave a Comment

Leave a Reply

Your email address will not be published. Required fields are marked *