ಸಿಬಿಐ ತನಿಖೆ ಬಗ್ಗೆ ಅನುಮಾನವಿದೆ – ಹೊರಟ್ಟಿ

Public TV
2 Min Read

ಹುಬ್ಬಳ್ಳಿ: ಫೋನ್ ಕದ್ದಾಲಿಕೆ ವಿಚಾರವನ್ನು ಸಿಬಿಐಗೆ ಒಪ್ಪಿಸಿದ್ದನ್ನು ಸ್ವಾಗತಿಸುತ್ತೇನೆ. ಆದರೆ, ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಪಕ್ಷದ ಅಧಿಕಾರವಿದೆ. ಈ ಹಿನ್ನೆಲೆಯಲ್ಲಿ ಸಿಬಿಐ ತನಿಖೆಯ ಬಗ್ಗೆ ಅನುಮಾನ ಮೂಡುತ್ತಿದೆ ಎಂದು ಜೆಡಿಎಸ್ ಮುಖಂಡ ಹಾಗೂ ಮಾಜಿ ಸಭಾಪತಿ ಬಸವರಾಜ್ ಹೊರಟ್ಟಿ ಕಳವಳ ವ್ಯಕ್ತಪಡಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿರುವುದರಿಂದ ಸಿಬಿಐ ಕೇಂದ್ರ ಸರ್ಕಾರದ ಮುಖ ನೋಡಿ ತನಿಖೆ ಮಾಡದೇ ಪ್ರಮಾಣಿಕವಾಗಿ ತನಖೆ ಮಾಡಬೇಕು. ಕೇಂದ್ರ ಮತ್ತು ರಾಜ್ಯದಲ್ಲಿ ಅವರದ್ದೇ ಅಧಿಕಾರವಿದೆ ಎಂಬ ಉದ್ದೇಶದಿಂದ ಫೋನ್ ಕದ್ದಾಲಿಕೆ ಪ್ರಕರಣವನ್ನು ರಾಜ್ಯ ಸರ್ಕಾರ ಸಿಬಿಐಗೆ ಒಪ್ಪಿಸಿದೆ ಎಂದು ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.

ಯಾವುದೇ ಸರ್ಕಾರ ಅಧಿಕಾರದಲ್ಲಿರಲಿ ಸಿಬಿಐ ಕೇಂದ್ರ ಸರ್ಕಾರದ ಮುಖ ನೋಡಿ ತನಿಖೆ ನಡೆಸಬಾರದು. ಒಂದು ವೇಳೆ ಏಕಪಕ್ಷೀಯ ತನಿಖೆ ನಡೆದಲ್ಲಿ ಸಿಬಿಐಗೆ ಕೊಡಬಾರದು. ರಾಜ್ಯದಲ್ಲಿ ಹಲವಾರು ತನಿಖಾ ತಂಡಗಳಿವೆ ಅವುಗಳಿಂದ ತನಿಖೆ ಮಾಡಿಸಬೇಕು. ಇದೀಗ ರಾಜ್ಯ ಸರ್ಕಾರ ಈ ಪ್ರಕರಣವನ್ನು ಸಿಬಿಐ ಒಪ್ಪಿಸಿದೆ ಅದು ತನಿಖೆ ಪೂರ್ಣಗೊಳಿಸಿ ಫಲಿತಾಂಶ ಹೇಳುವವರೆಗೂ ಕಾದು ನೋಡೋಣ ಎಂದರು.

ಬಿಜೆಪಿಯದ್ದು ನೀಡಲಿ
ಫೋನ್ ಕದ್ದಾಲಿಕೆ ಮಾಜಿ ಸಿಎಂ ಕುಮಾರಸ್ವಾಮಿ ಸರ್ಕಾರದಲ್ಲಿ ಅಷ್ಟೇ ಅಲ್ಲ ಕಳೆದ ಬಿಜೆಪಿ ಸರ್ಕಾರದಲ್ಲಿಯೂ ಅಗಿದೆ. ಅವುಗಳನ್ನು ಸಿಬಿಐಗೆ ಒಪ್ಪಿಸಬೇಕು. ಅಲ್ಲದೆ, ಈ ಪ್ರಕರಣಗಳಾದಾಗ ಮಾಜಿ ಸಿಎಂ ಜಗದೀಶ್ ಶೆಟ್ಟರ್, ಆರ್.ಅಶೋಕ್ ಸುಮ್ಮನೆ ಕುಳಿತಿದ್ದರು. ಬಿಜೆಪಿ ನಾಯಕರ ಫೋನ್ ಕದ್ದಾಲಿಕೆ ಮಾಡಿದರೆ ಆಪರೇಷನ್ ಕಮಲದ ವಿಷಯ ಹೊರಗೆ ಬರುತ್ತದೆ. ಇತ್ತಿಚೆಗೆ ರಾಜಕಾರಣ ಹೊಲಸಾಗಿದೆ. ಒಮ್ಮೆ ಯಾದರೂ ಸತ್ಯ ಹೊರಗೆ ಬರಬೇಕು ಎಂದರು.

ಸಿಎಂಗೆ ಅಧಿಕಾರವಿದೆ
ದೇಶಕ್ಕೆ ಮತ್ತು ರಾಜ್ಯಕ್ಕೆ ಗಂಡಾಂತರ ಎದುರಾದಾಗ ಫೋನ್ ಟ್ಯಾಪಿಂಗ್ ಮಾಡಲು ಸಿಎಂಗೆ ಅಧಿಕಾರವಿದೆ. ಈ ರೀತಿ ಮಾಡಿದ್ರೆ ಸಿಬಿಐ ಜೈಲಿಗೆ ಹಾಕುತ್ತಾ ಎಂದು ಪ್ರಶ್ನೆ ಮಾಡಿದರು. ರಾಜ್ಯದಲ್ಲಿ ಪ್ರತಿಧ್ವನಿಸುತ್ತಿರುವ ಫೋನ್ ಟ್ಯಾಪ್ ಪ್ರಕರಣದ ತನಿಖೆ ತೋಳ ಬಂತು ತೋಳ ಆಗಬಾರದು. ಅಲ್ಲದೇ ಪ್ರಧಾನಿ ನರೇಂದ್ರ ಮೋದಿ ದೇಶದ ಹಲವಾರು ವ್ಯವಸ್ಥೆ ಬಗ್ಗೆ ಮಾತನಾಡುತ್ತಾರೆ ಅವರು ಈ ಬಗ್ಗೆ ಗಮನಹರಿಸಿ ಇದನ್ನು ಸ್ವಚ್ಛ ಮಾಡಲಿ. ಅದನ್ನು ಬಿಟ್ಟು ಸುಖಾ ಸುಮ್ಮನೆ ಮಾಜಿ ಸಿಎಂ ಕುಮಾರಸ್ವಾಮಿ ಮೇಲೆ ಗೂಬೆ ಕುರಿಸುವುದು ಸರಿಯಲ್ಲ ಎಂದು ಟೀಕಿಸಿದರು.

Share This Article
Leave a Comment

Leave a Reply

Your email address will not be published. Required fields are marked *