ಸೌಜನ್ಯ ರೇಪ್ & ಮರ್ಡರ್ ಕೇಸ್- ಸಂತೋಷ್ ರಾವ್‍ನೇ ಆರೋಪಿ ಅಂತಾ ಮೇಲ್ಮನವಿ ಸಲ್ಲಿಸಿದ ಸಿಬಿಐ

Public TV
2 Min Read

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಸಮೀಪದ ಪಾಂಗಳ ನಿವಾಸಿ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಕೇಂದ್ರೀಯ ತನಿಖಾ ದಳ (CBI)ವು ಹೈಕೋರ್ಟ್ ಮೆಟ್ಟಿಲೇರಿದೆ.

ನಾಲ್ಕು ತಿಂಗಳ ಬಳಿಕ ವಿಶೇಷ ನ್ಯಾಯಾಲಯದ ತೀರ್ಪು ಪ್ರಶ್ನಿಸಿ ಸಿಬಿಐ, ಹೈಕೋರ್ಟ್ (Highcourt) ಮೆಟ್ಟಿಲೇರಿದೆ. ಕರ್ನಾಟಕ ಹೈಕೋರ್ಟಿನಲ್ಲಿ ತೀರ್ಪು ಮರು ಪರಿಶೀಲನೆ ಮಾಡುವಂತೆ ಸಿಬಿಐ ಮೇಲ್ಮನವಿ ಸಲ್ಲಿಸಿದೆ.

karnataka highcourt

ಕಾಲೇಜು ವಿದ್ಯಾರ್ಥಿನಿ ಸೌಜನ್ಯಳನ್ನು (Soujanya) ಅಪಹರಿಸಿ, ಅತ್ಯಾಚಾರ ಎಸಗಿ ಕೊಲೆ ಮಾಡಲಾಗಿತ್ತು. ಬಳಿಕ 2012ರ ಅಕ್ಟೋಬರ್ 10 ರಂದು ಧರ್ಮಸ್ಥಳ ಬಳಿಯ ಪಾಂಗಳ ಬಳಿ ಸೌಜನ್ಯ ಮೃತದೇಹ ಪತ್ತೆಯಾಗಿತ್ತು. ಪ್ರಕರಣ ಸಂಬಂಧ ಆರೋಪಿ ಸಂತೋಷ್ ರಾವ್ ಎಂಬಾತನನ್ನು ಬೆಳ್ತಂಗಡಿ ಪೊಲೀಸರು ಬಂಧಿಸಿದ್ದರು. ಬಳಿಕ ಪೊಲೀಸರು ಸರಿಯಾಗಿ ತನಿಖೆ ನಡೆಸಿಲ್ಲ ಎಂಬ ಆರೋಪ ವ್ಯಕ್ತವಾಗಿತ್ತು. ಹೀಗಾಗಿ ಹಲವು ಹೋರಾಟಗಳ ಬಳಿಕ ಪ್ರಕರಣವನ್ನು ಸಿಬಿಐಗೆ ಒಪ್ಪಿಸಲಾಗಿತ್ತು. ಇದನ್ನೂ ಓದಿ: 7 ಷರತ್ತು ವಿಧಿಸಿ ಜಾಮೀನು ಸಿಕ್ಕಿದ್ರೂ ಮುರುಘಾ ಶ್ರೀಗಳಿಗೆ ಬಿಡುಗಡೆ ಭಾಗ್ಯವಿಲ್ಲ

11 ವರ್ಷಗಳ ಸುದೀರ್ಘ ವಿಚಾರಣೆ ಬಳಿಕ ಸಿಬಿಐ ವಿಶೇಷ ಕೋರ್ಟ್ 2023ರ ಜೂನ್ 16ರಂದು ತೀರ್ಪು ನೀಡಿತ್ತು. ಆರೋಪಿ ಸಂತೋಷ್ ರಾವ್ ನಿರ್ದೋಷಿ ಎಂದು ಬೆಂಗಳೂರು ಸಿಬಿಐ ವಿಶೇಷ ಕೋರ್ಟ್ ತೀರ್ಪು ನೀಡಿತ್ತು. ಸಿಬಿಐ ಅಧಿಕಾರಿಗಳು ಸಂತೋಷ್ ರಾವ್ (Santhosh Rao) ವಿರುದ್ಧದ ಆರೋಪ ಸಾಬೀತು ಪಡಿಸಲು ವಿಫಲ ಎಂದು ಕೋರ್ಟ್ ಹೇಳಿತ್ತು. ಹೀಗಾಗಿ ಸಂತೋಷ್ ರಾವ್ ನಿರಾಪರಾಧಿ ಎಂದು ಬಿಡುಗಡೆ ಮಾಡಿತ್ತು. ಆ ಬಳಿಕ ಮೇಲ್ಮನವಿ ಸಲ್ಲಿಸಲು ಸಿಬಿಐಗೆ 60 ದಿನಗಳ ಕಾಲಾವಕಾಶ ಇತ್ತು. ಆದರೆ ಇದೀಗ ಅವಧಿ ಮುಗಿದ ಮೇಲೆ ನಾಲ್ಕು ತಿಂಗಳ ಬಳಿಕ ಹೈಕೋರ್ಟ್ ಗೆ ಮೇಲ್ಮನವಿ ಸಲ್ಲಿಸಲಾಗಿದೆ.

ವಿಶೇಷ ಕೋರ್ಟ್ ತೀರ್ಪು ಪ್ರಶ್ನಿಸಿ ಮರುಪರಿಶೀಲನೆಗೆ ಹಾಗೂ ಸಂತೋಷ್ ರಾವ್ ನೇ ಆರೋಪಿ ಅಂತ ಸಿಬಿಐ ಮೇಲ್ಮನವಿ ಸಲ್ಲಿಸಿದೆ. ಒಂದೆಡೆ ಸೌಜನ್ಯ ಪ್ರಕರಣ ಮರು ತನಿಖೆಗೆ ಆಗ್ರಹಿಸಿ ಪ್ರತಿಭಟನೆ ನಡೆಯುತ್ತಿದೆ. ಆದರೆ ಸಿಬಿಐ ಕಾರಣಕ್ಕೆ ಮರು ತನಿಖೆ ಸಾಧ್ಯವಿಲ್ಲ ಎಂದು ರಾಜ್ಯ ಸರ್ಕಾರ ಹೇಳಿದೆ. ಇನ್ನೊಂದೆಡೆ ಸೌಜನ್ಯ ಮನೆಯವರೂ ಕೋರ್ಟಿಗೆ ಮೇಲ್ಮನವಿ ಸಲ್ಲಿಸಿಲ್ಲ. ಈ ಬೆಳವಣಿಗೆಗಳ ಬೆನ್ನಲ್ಲೇ ಸಿಬಿಐ ಹೈಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ್ದು, ಸಿಬಿಐ ಸಲ್ಲಿಸಿರುವ ಮೇಲ್ಮನವಿಯನ್ನು ಹೈಕೋರ್ಟ್ ಅಂಗೀಕರಿಸುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.

Share This Article