ಬಾಲಿವುಡ್ ನಟಿ ಶೆಫಾಲಿ ಸಾವು – ಮುಂಬೈ ಪೊಲೀಸರು ಹೇಳಿದ್ದೇನು?

Public TV
1 Min Read

ಬಾಲಿವುಡ್ ನಟಿ, ಬಿಗ್ ಬಾಸ್ 13ರ ಸ್ಪರ್ಧಿ ಶೆಫಾಲಿ ಜರಿವಾಲಾ (Shefali Jariwala) ಅವರ ಸಾವಿಗೆ ಸ್ಪಷ್ಟ ಕಾರಣ ಇನ್ನೂ ತಿಳಿದು ಬಂದಿಲ್ಲ ಎಂದು ಮುಂಬೈ ಪೊಲೀಸರು (Mumbai Police) ತಿಳಿಸಿದ್ದಾರೆ.

ಶನಿವಾರ ಬೆಳಗಿನ ಜಾವ 1 ಗಂಟೆಗೆ ಮಾಹಿತಿ ಸಿಕ್ಕಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕೂಪರ್ ಆಸ್ಪತ್ರೆಗೆ ಕಳುಹಿಸಲಾಗಿದೆ. ಅವರ ಸಾವಿಗೆ ಕಾರಣ ಇನ್ನೂ ಸ್ಪಷ್ಟವಾಗಿಲ್ಲ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅಧಿಕಾರಿ, ಶುಕ್ರವಾರ ತಡರಾತ್ರಿ 11:15ರ ಸುಮಾರಿಗೆ ಶೆಫಾಲಿ ಅವರನ್ನು ಪತಿ ಪರಾಗ್ ತ್ಯಾಗಿ ಮುಂಬೈನ ಬೆಲ್ಲೆವ್ಯೂ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ಕರೆತಂದಿದ್ದಾರೆ. ಆದರೆ ಅಷ್ಟುಹೊತ್ತಿಗಾಗಲೇ ಶೆಫಾಲಿ ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ. ವಿಧಿ ವಿಜ್ಞಾನ ತಂಡ ಹಾಗೂ ಪೊಲೀಸರ ತಂಡವು ಗೋಲ್ಡನ್ ರೇಸ್-ವೈ ಕಟ್ಟಡದಲ್ಲಿರುವ ನಟಿಯ ಅಪಾರ್ಟ್ಮೆಂಟ್‌ಗೆ ತೆರಳಿದೆ ಎಂದು ಹೇಳಿದ್ದಾರೆ.

42 ವರ್ಷದ ಶೆಫಾಲಿ ‘ಕಾಂತಾ ಲಗಾ’ ಎಂಬ ಹಾಡಿನಿಂದ ಫೇಮಸ್ ಆಗಿದ್ದರು. ಜರಿವಾಲಾ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ವರದಿಗಳು ತಿಳಿಸಿವೆ. ಆದರೆ ಈ ಕುರಿತು ಕುಟುಂಬಸ್ಥರು ಯಾವುದೇ ಅಧಿಕೃತ ಘೋಷಣೆ ಮಾಡಿಲ್ಲ.

ಪುನೀತ್ ರಾಜ್‌ಕುಮಾರ್ ಜೊತೆ ಹುಡುಗರು ಚಿತ್ರದಲ್ಲಿ ‘ನಾ ಬೋರ್ಡು ಇರದ ಬಸ್ಸನು’ ಹಾಡಿಗೆ ಶೆಫಾಲಿ ಮಸ್ತ್ ಆಗಿ ಕುಣಿದಿದ್ದರು. 1982ರ ಡಿಸೆಂಬರ್ 15ರಂದು ಜನಿಸಿದ ಶೆಫಾಲಿ ಮುಂಬೈನಲ್ಲಿ ಬೆಳೆದರು. 2004ರಲ್ಲಿ ಹರ್ಮೀತ್ ಸಿಂಗ್ ಜೊತೆ ಶೆಫಾಲಿ ವಿವಾಹವಾದರು. ಆ ಬಳಿಕ 2009ರಲ್ಲಿ ಪತಿಯೊಂದಿಗೆ ವಿಚ್ಛೇದನ ಪಡೆದು 2014ರಲ್ಲಿ ಪರಾಗ್ ತ್ಯಾಗಿ ಅವರನ್ನು ಶೆಫಾಲಿ ಎರಡನೇ ಮದುವೆಯಾದರು.

Share This Article