ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷ ಕಳೆದರೂ ಜಾತೀಯತೆ ನಿರ್ಮೂಲನೆಯಾಗಿಲ್ಲ: ಸುಪ್ರೀಂ ಬೇಸರ

Public TV
1 Min Read

ನವದೆಹಲಿ: ಜಾತಿ ಪ್ರೇರಿತ ಹಿಂಸಾಚಾರದ ಘಟನೆಗಳು ಭಾರತಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳಾದರೂ ಜಾತೀಯತೆ ನಿರ್ಮೂಲನೆಯಾಗಿಲ್ಲ ಎಂಬುದನ್ನು ತೋರಿಸುತ್ತಿವೆ. ನಾಗರಿಕ ಸಮಾಜವು, ಜಾತಿಯ ಹೆಸರಿನಲ್ಲಿ ನಡೆಯುವ ಘೋರ ಅಪರಾಧಗಳ ಬಗ್ಗೆ ಪ್ರತಿಕ್ರಿಯಿಸುವ ಹಾಗೂ ತೀವ್ರ ಖಂಡನೆ ವ್ಯಕ್ತಪಡಿಸುವ ಕಾಲ ಬಂದಿದೆ ಎಂದು ಸುಪ್ರೀಂ ಕೋರ್ಟ್‌ ಅಭಿಪ್ರಾಯಪಟ್ಟಿದೆ.

1991ರಲ್ಲಿ ಉತ್ತರ ಪ್ರದೇಶದಲ್ಲಿ ನಡೆದ ಮರ್ಯಾದೆಗೇಡು ಹತ್ಯೆ (ಮಹಿಳೆ ಸೇರಿದಂತೆ ಮೂವರ ಹತ್ಯೆ) ಪ್ರಕರಣದ ವಿಚಾರಣೆಯನ್ನು ಸುಪ್ರೀಂ ಕೋರ್ಟ್‌ ನಡೆಸಿತು. ಮಾರ್ಯಾದೆಗೇಡು ಹತ್ಯೆಗಳನ್ನು ತಡೆಯಲು ಕಠಿಣ ಕಾನೂನು ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸುಪ್ರೀಂ ಕೆಲವು ನಿರ್ದೇಶಗಳನ್ನು ನೀಡಿದೆ. ಈ ನಿರ್ದೇಶನಗಳನ್ನು ಯಾವುದೇ ವಿಳಂಬವಿಲ್ಲದೇ ಕೈಗೊಳ್ಳಬೇಕು ಎಂದು ಖಡಕ್‌ ಸೂಚನೆ ನೀಡಿದೆ. ಇದನ್ನೂ ಓದಿ: ತ್ರಿಪುರ ಸ್ಥಳೀಯ ಸಂಸ್ಥೆಗಳ ಚುನಾವಣೆ: 334ಕ್ಕೆ 329 ಸ್ಥಾನಗಳಲ್ಲಿ ಬಿಜೆಪಿ ಗೆಲುವು, ಎಎಂಸಿಯಲ್ಲಿ ʼಕಮಲʼ ಕ್ಲೀನ್‌ಸ್ವೀಪ್‌

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಲ್.ನಾಗೇಶ್ವರ ರಾವ್‌ ನೇತೃತ್ವದ ಪೀಠವು, ವಿಚಾರಣೆಗಳು ಕಳಂಕಿತವಾಗುವುದನ್ನು ತಪ್ಪಿಸಲು ಹಾಗೂ ಸತ್ಯವು ಬಲಿಪಶು ಆಗದಂತೆ ನೋಡಿಕೊಂಡು ಸಾಕ್ಷಿಗಳನ್ನು ರಕ್ಷಿಸುವಲ್ಲಿ ರಾಜ್ಯವು ನಿರ್ದಿಷ್ಟ ಪಾತ್ರವನ್ನು ವಹಿಸುತ್ತದೆ. ಕೆಲವು ಸೂಕ್ಷ್ಮ ಪ್ರಕರಣಗಳಲ್ಲಿ ರಾಜಕೀಯ ಹಸ್ತಕ್ಷೇಪ ಮತ್ತು ಹಣದ ಅಧಿಕಾರವು ನಡೆಯುವ ಸಂದರ್ಭಗಳಿರುತ್ತವೆ. ಅದಕ್ಕೆ ಅವಕಾಶ ನೀಡಬಾರದು ಎಂದು ಪ್ರತಿಪಾದಿಸಿದೆ.

ಇಂದಿಗೂ ಪ್ರಚಲಿತದಲ್ಲಿರುವ ಜಾತಿ ಆಧಾರಿತ ಆಚರಣೆಗಳಿಂದ ಮತಾಂಧತೆ ನಿರಂತರವಾಗಿದೆ. ಇಂತಹ ಪ್ರಕರಣಗಳು, ಎಲ್ಲಾ ನಾಗರಿಕರಿಗೂ ಸಮಾನತೆ ಕಲ್ಪಿಸುವ ಸಂವಿಧಾನದ ಉದ್ದೇಶಕ್ಕೆ ಅಡ್ಡಿಯಾಗುತ್ತವೆ ಎಂದು ಕೋರ್ಟ್‌ ಬೇಸರ ವ್ಯಕ್ತಪಡಿಸಿದೆ. ಇದನ್ನೂ ಓದಿ: ಹಣದಾಸೆಗೆ ಅಂಧ ಸ್ನೇಹಿತನನ್ನ ಕೊಂದ ವ್ಯಕ್ತಿಗೆ ಜೀವಾವಧಿ ಶಿಕ್ಷೆ!

ಇಬ್ಬರು ಯುವಕರು ಮತ್ತು ಮಹಿಳೆ ಮೇಲೆ ಸುಮಾರು 12 ಗಂಟೆಗಳ ಕಾಲ ದೈಹಿಕವಾಗಿ ಹಲ್ಲೆ ನಡೆಸಿ ಹತ್ಯೆ ಮಾಡಲಾಗಿದೆ. ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳಾದರೂ ಜಾತೀಯತೆ ನಿರ್ಮೂಲನೆಯಾಗಿಲ್ಲ ಎಂಬುದನ್ನು ಈ ದೇಶದಲ್ಲಿ ನಡೆಯುತ್ತಿರುವ ಜಾತಿ ಪ್ರೇರಿತ ಹಿಂಸಾಚಾರದಂತಹ ಪ್ರಸಂಗಗಳು ನಿರೂಪಿಸುತ್ತಿವೆ ಎಂದು ನ್ಯಾಯಾಲಯ ವಿಷಾದಿಸಿದೆ.

Share This Article
Leave a Comment

Leave a Reply

Your email address will not be published. Required fields are marked *