ದಲಿತರಿಗೆ ಅಂಗಡಿ ಪ್ರವೇಶ ನಿರ್ಬಂಧಿಸಿದ ಮುಸ್ಲಿಂ ಕ್ಷೌರಿಕರು

Public TV
2 Min Read

ಲಕ್ನೋ: ಉತ್ತರ ಪ್ರದೇಶದ ಒಂದು ಹಳ್ಳಿಯಲ್ಲಿ ದಲಿತರಿಗೆ ಪ್ರವೇಶ ನಿರಾಕಾರಿಸಿದ ಮುಸ್ಲಿಂ ಕ್ಷೌರಿಕರ ಮೇಲೆ ಗ್ರಾಮದ ದಲಿತ ಯುವಕರು ಪೊಲೀಸರಿಗೆ ದೂರು ನೀಡಿದ್ದಾರೆ.

ಈ ಘಟನೆ ನಡೆದಿರುವುದು ಉತ್ತರ ಪ್ರದೇಶದ ಮೊರಾದಾಬಾದ್ ಜಿಲ್ಲೆಯ ಭೋಜಪುರ ಪೊಲೀಸ್ ಠಾಣಾ ವ್ಯಾಪ್ತಿಗೆ ಬರುವ ಪೀಪಲ್ಸಾನ ಎಂಬ ಗ್ರಾಮದಲ್ಲಿ. ಮುಸ್ಲಿಂ ಸಮುದಾಯವೇ ಹೆಚ್ಚು ಇರುವ ಈ ಗ್ರಾಮದಲ್ಲಿ ದಲಿತರಿಗೆ ಕ್ಷೌರದ ಅಂಗಡಿಗೆ ಪ್ರವೇಶ ನೀಡುತ್ತಿಲ್ಲ ಮತ್ತು ನಮಗೆ ಹೇರ್ ಕಟ್ ಮಾಡುತ್ತಿಲ್ಲ ಎಂದು ದಲಿತರು ಪೊಲೀಸರಿಗೆ ದೂರು ನೀಡಿದ್ದಾರೆ.

ಪೀಪಲ್ಸಾನ ಗ್ರಾಮದ ದಲಿತರು ನಮ್ಮ ಗ್ರಾಮದಲ್ಲಿ ಮುಸ್ಲಿಂ ಕ್ಷೌರಿಕರು ಜಾತಿ ಆಧಾರಿತ ತಾರತಮ್ಯವನ್ನು ಮಾಡುತ್ತಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಈ ದೂರಿನ ವಿರುದ್ಧ ತಮ್ಮ ಕ್ಷೌರದ ಅಂಗಡಿಯನ್ನು ಮುಚ್ಚಿ ಪ್ರತಿಭಟನೆ ಮಾಡಿರುವ ಮುಸ್ಲಿಂರು ನಾವು ದಲಿತರಿಗೆ ನಮ್ಮ ಅಂಗಡಿಯಲ್ಲಿ ಹೇರ್ ಕಟ್ ಮಾಡಿದರೆ, ನಮ್ಮ ಸಮಾಜದವರು ಅಂಗಡಿಗೆ ಬರುವುದಿಲ್ಲ ಎಂದು ವಾದಿಸಿದ್ದಾರೆ.

ನಾವು ನಮ್ಮ ಜೀವನ ಪೂರ್ತಿ ಈ ಜಾತಿ ಆಧಾರಿತ ತಾರತಮ್ಯವನ್ನು ಅನುಭವಿಸಿದ್ದೇವೆ. ಆದರೆ ನಮ್ಮ ಸಮಾಜದ ಮುಂದಿನ ಪೀಳಿಗೆ ಈ ತಾರತಮ್ಯವನ್ನು ಅನುಭವಿಸಬಾರದು. ಈ ಜಾತಿ ಆಧಾರಿತ ತಾರತಮ್ಯ ನಮ್ಮ ಕಾಲಕ್ಕೆ ಕೊನೆಗೊಳ್ಳಬೇಕು. ಆದರೆ ಮುಸ್ಲಿಮರು ನಡೆಸುವ ಸಲೂನ್‍ಗಳಿಗೆ ನಮ್ಮ ಮಕ್ಕಳು ಭೇಟಿ ನೀಡಿದಾಗ ತಾರತಮ್ಯಕ್ಕೊಳಗಾಗುತ್ತಾರೆ ಎಂದು ಗ್ರಾಮದ ದಲಿತರು ಹೇಳಿದ್ದಾರೆ.

ತಮ್ಮ ಮಕ್ಕಳು ಶಿಕ್ಷಣ ಪಡೆಯುತ್ತಿದ್ದಾರೆ ಮತ್ತು ಬದಲಾಗುತ್ತಿರುವ ಈ ಜಗತ್ತಿನಲ್ಲಿ ಪ್ರತಿಯೊಬ್ಬರೂ ಘನತೆಯಿಂದ ಬದುಕಲು ಅವಕಾಶ ನೀಡಬೇಕು. ಈ ವಿಷಯವನ್ನು ಬಗೆಹರಿಸಲಾಗುವುದು ಎಂದು ಪೊಲೀಸರು ಮತ್ತು ಜಿಲ್ಲಾಡಳಿತ ಭರವಸೆ ನೀಡಿದೆ ಎಂದು ದಲಿತರು ತಿಳಿಸಿದ್ದಾರೆ.

ಈ ವಿಚಾರದ ಬಗ್ಗೆ ಮುಸ್ಲಿಂರನ್ನು ಕೇಳಿದರೆ ಅವರೇ ಬೇರೆ ರೀತಿ ಹೇಳುತ್ತಾರೆ. ದಲಿತರು ಎಂದಿಗೂ ನಮ್ಮ ಕ್ಷೌರಿಕರ ಅಂಗಡಿಗಳಿಗೆ ಹೇರ್ ಕಟ್ ಮಾಡಿಸಲು ಬರುತ್ತಿರಲಿಲ್ಲ. ಅವರು ಭೋಜ್‍ಪುರದಲ್ಲಿ ದಲಿತರು ನಡೆಸುವ ಕ್ಷೌರಿಕನ ಅಂಗಡಿಗೆ ಹೋಗುತ್ತಿದ್ದರು. ಆದರೆ ಈಗ ಅವರು ಇಲ್ಲಿ ಹೇರ್ ಕಟ್ ಮಾಡಿಸಲು ಬಯಸುತ್ತಾರೆ. ಇದರ ಜೊತೆಗೆ ಪೊಲೀಸರು ನಮ್ಮ ಕ್ಷೌರಿಕರನ್ನು ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ. ಈಗ ಕ್ಷೌರಿಕರ ಕುಟುಂಬದವರು ತುಂಬ ಆತಂಕಕ್ಕೊಳಗಾಗಿದ್ದಾರೆ. ಇದ್ದ ಒಂದು ಕ್ಷೌರದ ಅಂಗಡಿಯು ಮುಚ್ಚಿದೆ ಈಗ ಮನೆಗೆ ಆದಾಯದ ಮೂಲವೇ ಇಲ್ಲವಾಗಿದೆ ಎಂದು ಕ್ಷೌರಿಕ ಕುಟುಂಬಸ್ಥರು ಹೇಳುತ್ತಾರೆ.

ಈ ಗ್ರಾಮದಲ್ಲಿ ಶೇ.95 ರಷ್ಟು ಮುಸ್ಲಿಂ ಸಮುದಾಯದ ಜನಗಳಿದ್ದಾರೆ. ಇಂದು ದಲಿತರು ನಮ್ಮ ಅಂಗಡಿಗಳ ಪ್ರವೇಶಕ್ಕೆ ಒತ್ತಾಯಿಸುತ್ತಿದ್ದಾರೆ. ನಾಳೆ ಅವರು ಸಮುದಾಯದ ಮದುವೆಗೆ ನಮ್ಮ ಮಂಟಪಗಳನ್ನು ಬುಕ್ ಮಾಡಲು ಪ್ರಾರಂಭಿಸುತ್ತಾರೆ. ಈ ಗ್ರಾಮ ಹಲವಾರು ವರ್ಷಗಳಿಂದ ಶಾಂತಿಯಾಗಿದೆ. ಇಲ್ಲಿ ಕೆಲವರು ಅ ಶಾಂತಿಯನ್ನು ಹಾಳು ಮಾಡಿ ಅವ್ಯವಸ್ಥೆ ಸೃಷ್ಟಿಸಲು ಬಯಸುತ್ತಿದ್ದಾರೆ ಎಂದು ಮುಸ್ಲಿಂ ಮುಖಂಡರು ಆರೋಪಿಸಿದ್ದಾರೆ.

ದೂರನ್ನು ಪಡೆದಿರುವ ಪೊಲೀಸರು ತನಿಖೆ ಪ್ರಾರಂಭ ಮಾಡಿದ್ದು, ದಲಿತರು ಮಾಡಿರುವ ಆರೋಪ ನಿಜವೆಂದು ಕಂಡುಬಂದಲ್ಲಿ, ಸಂಬಂಧಪಟ್ಟ ವ್ಯಕ್ತಿಗಳ ಮೇಲೆ ಕಾನೂನುಗಳ ಅಡಿಯಲ್ಲಿ ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *