100 ಚದರ ಅಡಿಯ ನಿವೇಶನ, 3.5 ಲಕ್ಷ ವೆಚ್ಚದ 2 ರೂಮ್‌ಗಳಿರುವ ಮನೆ, 500 ರೂ.ಗೆ ಎಲ್‌ಪಿಜಿ ಸಿಲಿಂಡರ್: ಹರಿಯಾಣಕ್ಕೆ ಸಪ್ತ ಗ್ಯಾರಂಟಿ ಘೋಷಣೆ

Public TV
4 Min Read

– 300 ಯೂನಿಟ್‌ ವಿದ್ಯುತ್‌ ಉಚಿತ, 25 ಲಕ್ಷ ರೂ.ವರೆಗೆ ಉಚಿತ ವೈದ್ಯಕೀಯ ಚಿಕಿತ್ಸೆ

ಚಂಡೀಗಢ: ಮುಂದಿನ ಅಕ್ಟೋಬರ್‌ 5ರಂದು ನಡೆಯಲಿರುವ ಹರಿಯಾಣ ವಿಧಾನಸಭಾ ಚುನಾವಣೆಗೆ (Haryana Poll) ಸಂಬಂಧಿಸಿದಂತೆ ಪ್ರಚಾರ ಕಾರ್ಯ ಆರಂಭಿಸಿರುವ ಕಾಂಗ್ರೆಸ್‌ ಪಕ್ಷವು (Congress Party) ರಾಜ್ಯಕ್ಕೆ ಸಪ್ತ ಗ್ಯಾರಂಟಿಗಳನ್ನು ಘೋಷಣೆ ಮಾಡಿದೆ.

ಬುಧವಾರ ದೆಹಲಿಯ ಕಾಂಗ್ರೆಸ್‌ ಪಕ್ಷದ ಕಚೇರಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ನೇತೃತ್ವದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ 7 ಗ್ಯಾರಂಟಿಗಳನ್ನೊಳಗೊಂಡ ಪ್ರಣಾಳಿಕೆ ಪತ್ರವನ್ನು ಬಿಡುಗಡೆಗೊಳಿಸಲಾಯಿತು. ಈ ವೇಳೆ ಹರಿಯಾಣದಲ್ಲಿ ಕಾಂಗ್ರೆಸ್‌ ಸರ್ಕಾರ ರಚನೆಯಾದರೆ, ಪ್ರತೀ ಮನೆಗೆ 300 ಯೂನಿಟ್‌ ವಿದ್ಯುತ್‌ ಉಚಿತವಾಗಿ ನೀಡಲಾಗುವುದು. 500 ರೂ. ಬೆಲೆಗೆ ಉಚಿತ ಎಲ್‌ಪಿಜಿ ಸಿಲಿಂಡರ್‌ ನೀಡುತ್ತೇವೆ. ಬಡವರಿಗೆ 100 ಚದರ ಅಡಿ ನಿವೇಶನ ಮತ್ತು ಮನೆಗೆ ಕಟ್ಟಲು 3.5 ಲಕ್ಷ ರೂ. ಹಣ ನೀಡಲಾಗುತ್ತದೆ ಎಂಬಿತ್ಯಾದಿ ಗ್ಯಾರಂಟಿಗಳನ್ನು ಪ್ರಕಟಿಸಿದರು. ಇದನ್ನೂ ಓದಿ: ನವೀಕರಿಸಬಹುದಾದ ಇಂಧನ ವಲಯದಲ್ಲಿ ಆಸಕ್ತಿ ಒಂದು ಆಯ್ಕೆಯಲ್ಲ, ಅನಿವಾರ್ಯ – ಜಗದೀಪ್ ಧನಕರ್

ಹರಿಯಾಣಕ್ಕೆ ಕಾಂಗ್ರೆಸ್‌ ಸಪ್ತ ಗ್ಯಾರಂಟಿ!
1. 300 ಯೂನಿಟ್ ವರೆಗೆ ಉಚಿತ ವಿದ್ಯುತ್ ಮತ್ತು 25 ಲಕ್ಷ ರೂ.ವರೆಗೆ ಉಚಿತ ವೈದ್ಯಕೀಯ ಚಿಕಿತ್ಸೆ ನೀಡಲಾಗುವುದು.
2. 18 ರಿಂದ 60 ವರ್ಷದೊಳಗಿನ ಮಹಿಳೆಯರಿಗೆ ಪ್ರತಿ ತಿಂಗಳು 2,000 ರೂ. ನೀಡುವ ಜೊತೆಗೆ 500 ರೂ.ಗೆ ಎಲ್‌ಪಿಜಿ ಸಿಲಿಂಡರ್ ನೀಡಲಾಗುವುದು.
3. 2 ಲಕ್ಷ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲಾಗುವುದು. ಡ್ರಗ್ ಮುಕ್ತ ಹರಿಯಾಣ ಮಾಡುವ ನಿಟ್ಟಿನಲ್ಲಿ ಕ್ರಮ ವಹಿಸಲಾಗುವುದು
4. ವೃದ್ಧಾಪ್ಯ, ಅಂಗವಿಕಲ ಮತ್ತು ವಿಧವಾ ಪಿಂಚಣಿ 6,000 ರೂ. ಹಾಗೂ ಹಳೆಯ ಪಿಂಚಣಿ ಯೋಜನೆ (OPS) ಮರುಸ್ಥಾಪಿಸಲಾಗುವುದು.
5. ಜಾತಿ ಗಣತಿ ನಡೆಸಲಾಗುವುದು, ಕೆನೆ ಪದರದ ಮಿತಿಯನ್ನು 10 ಲಕ್ಷ ರೂ.ಗೆ ಹೆಚ್ಚಿಸಲಾಗುವುದು.
6. ಕನಿಷ್ಠ ಬೆಂಬಲ ಬೆಲೆ (MSP) ಕಾನೂನುಬದ್ಧವಾಗಿ ಖಾತರಿಪಡಿಸುತ್ತದೆ. ಬೆಳೆ ಪರಿಹಾರ ತಕ್ಷಣ ದೊರೆಯಲಿದೆ.
7. ಬಡ ಕುಟುಂಬಗಳಿಗೆ 100 ಚದರ ಅಡಿಯ ನಿವೇಶನ, 3.5 ಲಕ್ಷ ವೆಚ್ಚದ 2 ಕೋಣೆಗಳ ಮನೆ

ಬಿಜೆಪಿ ವಿರುದ್ಧ ಕೆಂಡಾಮಂಡಲ:
ಇದಕ್ಕೂ ಮುನ್ನ ಹರಿಯಾಣ ಕಾಂಗ್ರೆಸ್‌ ಮುಖ್ಯಸ್ಥ ಉದಯ್‌ ಭಾನ್‌ ಮಾತನಾಡಿ, ಬಿಜೆಪಿ ವಿಡುದ್ಧ ವಾಗ್ದಾಳಿ ನಡೆಸಿದ್ದಾರೆ. ಬಿಜೆಪಿ ಆಡಳಿತದಲ್ಲಿ ಹರಿಯಾಣದಲ್ಲಿ ಅಪರಾಧಗಳು ಹೆಚ್ಚಾಗಿವೆ. ಆದ್ರೆ ನಾವು ಮಹಿಳೆಯರ ಸಬಲೀಕರಣಕ್ಕಾಗಿ 18 ರಿಂದ 60 ವರ್ಷದೊಳಗಿನ ಮಹಿಳೆಯರಿಗೆ ತಿಂಗಳಿಗೆ 2,000 ರೂ. ನೀಡಲಿದ್ದೇವೆ. ಜೊತೆಗೆ ಜನರ ಮೇಲಿನ ಆರ್ಥಿಕ ಹೊರೆ ತಗ್ಗಿಸಲು ಎಲ್‌ಪಿಜಿ ಸಿಲಿಂಡರ್‌ ಅನ್ನು 500 ರೂ.ಗೆ ನೀಡಲಿದ್ದೇವೆ ಎಂದು ಘೋಷಿಸಿದರು. ಇದನ್ನೂ ಓದಿ: ಸಿಖ್ಖರ ಅವಹೇಳನ ಆರೋಪ – ಚಂಡೀಗಢ ಕೋರ್ಟ್‌ನಿಂದ ಕಂಗನಾಗೆ ʻಎಮರ್ಜೆನ್ಸಿʼ ನೋಟಿಸ್‌!

ಅಷ್ಟೇ ಅಲ್ಲ ಯುವಕರಿಗೆ ಉತ್ತಮ ಭವಿಷ್ಯ ಕಟ್ಟಿಕೊಡಲಾಗುವುದು ಅದಕ್ಕಾಗಿ ಖಾಲಿಯಿರುವ 2 ಲಕ್ಷ ಹುದ್ದೆಗಳನ್ನು ಭರ್ತಿ ಮಾಡಲಾಗುವುದು. ಜೊತೆಗೆ ಹರಿಯಾಣವನ್ನು ಮಾದಕ ವಸ್ತು (ಡಗ್ಸ್‌) ಮುಕ್ತ ರಾಜ್ಯವನ್ನಾಗಿ ಮಾಡಲಾಗುವುದು. ʻಚಿರಂಜೀವಿʼ ಯೋಜನೆ ಅಡಿಯಲ್ಲಿ 25 ಲಕ್ಷ ರೂ. ವರೆಗೆ ಉಚಿತ ವೈದ್ಯಕೀಯ ಚಿಕಿತ್ಸೆ ನೀಡಲಾಗುವುದು ಎಂದು ಉದಯ ಭಾನ್ ಹೇಳಿದರು.

90 ಸದಸ್ಯ ಬಲದ ಹರಿಯಾಣ ವಿಧಾನಸಭೆಗೆ ಮುಂದಿನ ಅಕ್ಟೋಬರ್ 5 ರಂದು ಮತದಾನ ನಡೆಯಲಿದ್ದು, ಅಕ್ಟೋಬರ್ 8 ರಂದು ಫಲಿತಾಂಶ ಹೊರಬೀಳಲಿದೆ. ಇದನ್ನೂ ಓದಿ: ಉದಯನಿಧಿ ಸ್ಟಾಲಿನ್‌ಗೆ ಡಿಸಿಎಂ ಪಟ್ಟ – ಶೀಘ್ರವೇ ಘೋಷಣೆ ಸಾಧ್ಯತೆ

Share This Article