ಜಾತಿಗಣತಿ ಸರ್ವೇ ಅವಧಿ ವಿಸ್ತರಣೆ – ಶಿಕ್ಷಕರಿಗೆ ಮಧ್ಯಾಹ್ನದ ನಂತರ ಸಮೀಕ್ಷೆ ಮಾಡಲು ಸೂಚನೆ

Public TV
1 Min Read

– ಡಿಕೆಶಿ ಬಳಿಕ 60 ಪ್ರಶ್ನೆಗೆ ಸತೀಶ್‌ ಜಾರಕಿಹೊಳಿ ಆಕ್ಷೇಪ
– ಚಿನ್ನ ಎಷ್ಟಿದೆ ಅಂತ ಪ್ರಶ್ನೆ ಕೇಳಿಲ್ಲ, ಚಿನ್ನ ಇದೆಯೋ, ಇಲ್ವೋ ಅಂತಷ್ಟೇ ಕೇಳಿದ್ದೇವೆ

ಬೆಂಗಳೂರು: ರಾಜ್ಯದಲ್ಲಿ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸಮೀಕ್ಷೆಯ ಅವಧಿಯನ್ನು ವಿಸ್ತರಣೆ ಮಾಡಿ ಶಿಕ್ಷಣ ಇಲಾಖೆ (Education Department) ಆದೇಶಿಸಿದೆ.

ರಾಜ್ಯದಲ್ಲಿ ಮಂಗಳವಾರಕ್ಕೆ (ಅ.7) ಅಂತ್ಯವಾಗಬೇಕಿದ್ದ ಸರ್ವೇ ಕಾರ್ಯವನ್ನು ಅ.12ರವರೆಗೂ, ಬೆಂಗಳೂರಿನಲ್ಲಿ (Bengaluru) 1 ವಾರ ತಡವಾಗಿರೋ ಕಾರಣ ಅ.24ರವರೆಗೂ ವಿಸ್ತರಿಸಲಾಗಿದೆ. ಅಲ್ಲದೇ ಬೆಳಗ್ಗೆ 8ರಿಂದ ಮಧ್ಯಾಹ್ನ 1 ಗಂಟೆವರೆಗೆ ಶಾಲಾ ತರಗತಿ ಮುಗಿಸಿ, ಮಧ್ಯಾಹ್ನದ ನಂತರ ಸರ್ವೇ ನಡೆಸುವಂತೆ ಶಿಕ್ಷಣ ಇಲಾಖೆ ಸೂಚಿಸಿದೆ.

ರಾಜ್ಯದಲ್ಲಿ ಈವರೆಗೆ ಶೇ.80.39ರಷ್ಟು ಸಮೀಕ್ಷೆಯಾಗಿದ್ದು, 1.43 ಕೋಟಿ ಮನೆಗಳ ಪೈಕಿ 1.15 ಕೋಟಿ ಮನೆಗಳ ಸರ್ವೇ ಮುಗಿದೆ. ಈವರೆಗೆ 4.32 ಕೋಟಿ ಜನರು ಗಣತಿ ವ್ಯಾಪ್ತಿಗೆ ಬಂದಿದ್ದಾರೆ. ಇವತ್ತು 5 ಲಕ್ಷದ 52 ಸಾವಿರದ 345 ಮನೆಗಳ ಸಮೀಕ್ಷೆ ಆಗಿದೆ. ಬೆಂಗಳೂರಿನಲ್ಲಿ ಇಂದು 1.36 ಲಕ್ಷ ಮನೆಗಳ ಸಮೀಕ್ಷೆಯಾಗಿದ್ದು, ಒಟ್ಟು 2.60 ಲಕ್ಷ ಮನೆಗಳ ಸರ್ವೇ ಆಗಿದೆ.

ಬೆಂಗಳೂರಿನ ಅಪಾರ್ಟ್‌ಮೆಂಟ್‌ ನಿವಾಸಿಗಳು ಯಾವುದೇ ಮಾಹಿತಿ ನೀಡದೆ ಆಟ ಆಡಿಸುತ್ತಿರೋದು ತಲೆನೋವುಂಟು ಮಾಡಿದೆ. ಇನ್ನೂ ಗರ್ಭಿಣಿಯರು, ಬಾಣಂತಿಯರು, 1 ವರ್ಷಕ್ಕಿಂತ ಚಿಕ್ಕಮಕ್ಕಳನ್ನ ಹೊಂದಿರುವವರು, ಗಂಭೀರ ಆರೋಗ್ಯ ಸಮಸ್ಯೆ ಇರುವವರಿಗೆ ಸರ್ವೇಯಿಂದ ವಿನಾಯ್ತಿ ಕೊಡಲಾಗಿದೆ. ಕೆಲ ಗಣತಿದಾರರು ಇವತ್ತೂ ಕೂಡ ಅಳಲು ತೋಡಿಕೊಂಡಿದ್ದರು.

ಇನ್ನು, ಗಣತಿ ವೇಳೆ ಚಿನ್ನದ ಬಗ್ಗೆ ಪ್ರಶ್ನೆಗೆ ಡಿಸಿಎಂ ಡಿಕೆಶಿ ಆಕ್ಷೇಪ ಸಂಬಂಧ ಆಯೋಗದ ಅಧ್ಯಕ್ಷ ಮಧುಸೂದನ್ ನಾಯ್ಕ್ ಸ್ಪಷ್ಟನೆ ಕೊಟ್ಟಿದ್ದಾರೆ. ಇದರಲ್ಲಿ ತಪ್ಪೇನಿದೆ ಎಂದು ನನಗೆ ಅರ್ಥ ಆಗ್ತಿಲ್ಲ ಅಂದಿದ್ದಾರೆ. ಚಿನ್ನ ಎಷ್ಟಿದೆ ಅಂತ ಪ್ರಶ್ನೆ ಕೇಳಿಲ್ಲ. ಚಿನ್ನ ಇದೆಯೋ, ಇಲ್ವೋ ಅಂತಷ್ಟೇ ಕೇಳಿದ್ದೇವೆ. ಜೀವನಮಟ್ಟ ತಿಳಿದುಕೊಳ್ಳಲು ಇದು ಅಗತ್ಯ ಅಂದಿದ್ದಾರೆ. ಈ ಮಧ್ಯೆ, ಸಚಿವ ಸತೀಶ್ ಜಾರಕಿಹೊಳಿ ಕೂಡ 60 ಪ್ರಶ್ನೆಗಳು ಜಾಸ್ತಿ ಆಯ್ತು ಅಂತ ಆಕ್ಷೇಪಿಸಿದ್ದಾರೆ.

Share This Article