ಜಾತಿ ಗಣತಿ ವರದಿಯನ್ನ ಬಿಜೆಪಿ ಒಪ್ಪಿಕೊಳ್ಳಲು ತಯಾರಿಲ್ಲ: ಸಿದ್ದರಾಮಯ್ಯ

Public TV
2 Min Read

– ವರದಿ ಬಿಜೆಪಿಯ ರಾಜ್ಯ ಕಚೇರಿಯಲ್ಲಿದೆಯೇ?
– ಬಿಜೆಪಿ ತಪ್ಪನ್ನು ಒಪ್ಪಿ ಸರಿಪಡಿಸಿಕೊಂಡಿದೆ ಅಷ್ಟೆ

ಬೆಂಗಳೂರು: ಜಾತಿ ಗಣತಿ ವರದಿಯನ್ನು ಒಪ್ಪಿಕೊಳ್ಳುವುದಕ್ಕೆ ತಯಾರಿಲ್ಲದ ಬಿಜೆಪಿ ನಾಯಕರು, ಅದು ಸೋರಿಕೆಯಾಗಿದೆ, ವೈಜ್ಞಾನಿಕವಾಗಿಲ್ಲ ಎಂಬ ಕುಂಟು ನೆಪಗಳನ್ನು ಹೇಳುತ್ತಿದ್ದಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಟ್ವೀಟ್ ಮೂಲಕ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ವರದಿ ಬಿಜೆಪಿಯ ರಾಜ್ಯ ಕಚೇರಿಯಲ್ಲಿದೆಯೇ?:
ಸೋರಿಕೆ ಬಗ್ಗೆ ಖಚಿತ ಮಾಹಿತಿ ಮುಖ್ಯಮಂತ್ರಿಗಳ ಬಳಿ ಇದ್ದರೆ ಅದರ ಬಗ್ಗೆ ತನಿಖೆ ನಡೆಸಲಿ. ಸೋರಿಕೆ ಆಗಿದೆಯೆನ್ನಲಾದ ಜಾತಿಗಣತಿ ವರದಿಯ ಅಂಶಗಳೇ ಮೂಲ ವರದಿಯಲ್ಲಿ ಇವೆ ಎನ್ನುವುನ್ನು ಬಿಜೆಪಿ ಅಷ್ಟೊಂದು ವಿಶ್ವಾಸದಿಂದ ಹೇಗೆ ಹೇಳಲು ಸಾಧ್ಯ? ಸರ್ಕಾರದ ಬಳಿ ಇರಬೇಕಾದ ಮೂಲ ವರದಿ ಬಿಜೆಪಿಯ ರಾಜ್ಯ ಕಚೇರಿಯಲ್ಲಿದೆಯೇ? ಸಿಎಂ ಕಚೇರಿಯಿಂದ ಅದು ಸೋರಿಕೆಯಾಗಿದೆಯೇ? ಜಾತಿಗಣತಿ ವರದಿಯನ್ನು ನಮ್ಮ ಸರ್ಕಾರದ ಅವಧಿಯಲ್ಲಿಯೇ ಪೂರ್ಣಗೊಳಿಸಿ ಸ್ವೀಕರಿಸಬೇಕೆಂಬುದು ನನ್ನ ಉದ್ದೇಶವಾಗಿತ್ತು. ಅಂಕಿಅಂಶಗಳ ಮಾಹಿತಿ ಸಂಗ್ರಹವಾಗಿದ್ದರೂ ವಿಶ್ಲೇಷಣೆಯ ಕೆಲಸ ಪೂರ್ಣಗೊಂಡಿರದ ಕಾರಣ ಸಾಧ್ಯವಾಗಿರಲಿಲ್ಲ.

ಸಮೀಕ್ಷೆಯ ವಿಶ್ವಾಸಾರ್ಹತೆ ಬಗ್ಗೆ ಚರ್ಚೆ ನಡೆಯಲಿ:
ಜಾತಿ ಗಣತಿ ವರದಿಯನ್ನು ನಮ್ಮ ಪಕ್ಷದ ನಾಯಕರು ವಿರೋಧಿಸಿದ್ದರು ಎನ್ನುವುದು ಕಪೋಲ ಕಲ್ಪಿತ ಆರೋಪ. ಯಾರು? ಯಾವಾಗ? ವಿರೋಧಿಸಿದ್ದರು ಎನ್ನುವುದನ್ನು ಬಿಜೆಪಿ ನಾಯಕರು ಬಹಿರಂಗ ಪಡಿಸಬೇಕು. ಜಾತಿ ಗಣತಿ ವರದಿ ಸೋರಿಕೆಯಾಗಿದ್ದರೂ, ಅದರ ಪಾವಿತ್ರ್ಯವೇನು ಕಳೆದುಹೋಗುವುದಿಲ್ಲ. ಸೋರಿಕೆಯಿಂದಾಗಿ ಅಪರಾಧಿಗಳು ಓಡಿಹೋಗಲು ಅದೇನು ಅಪರಾಧದ ತನಿಖಾ ವರದಿಯೇ? ಅದೊಂದು ಸಮೀಕ್ಷಾ ವರದಿ. ಪರಿಶೀಲನೆ ನಡೆಯಬೇಕಾಗಿರುವುದು ಸಮೀಕ್ಷೆಯ ವಿಶ್ವಾಸಾರ್ಹತೆ ಬಗ್ಗೆ. ಅದರ ಬಗ್ಗೆ ಚರ್ಚೆ ನಡೆಯಲಿ. ಇದನ್ನೂ ಓದಿ: ಮಮತಾ ಬ್ಯಾನರ್ಜಿ ಸೋದರಳಿಯನಿಗೆ ಇಡಿ ನೋಟಿಸ್

ತಪ್ಪನ್ನು ಒಪ್ಪಿ ಸರಿಪಡಿಸಿಕೊಂಡಿದೆ ಅಷ್ಟೆ:
ಹಿಂದುಳಿದ ಜಾತಿಗಳನ್ನು ಗುರುತಿಸುವ ಅಧಿಕಾರವನ್ನು ಮರಳಿ ರಾಜ್ಯ ಸರ್ಕಾರಕ್ಕೆ ನೀಡುವ ಸಂವಿಧಾನದ 127ನೇ ತಿದ್ದುಪಡಿ ಮಸೂದೆಯನ್ನು ಸಂಸತ್ ನಲ್ಲಿ ನಮ್ಮ ಪಕ್ಷದ ಸದಸ್ಯರು ಬೆಂಬಲಿಸಿರುವುದು ನಿಜ. ಆ ತಿದ್ದುಪಡಿ ಕಾಂಗ್ರೆಸ್ ಪಕ್ಷದ ಬೇಡಿಕೆಯ ಒತ್ತಡದಿಂದಾಗಿಯೇ ಮಂಡಿಸಲಾಗಿತ್ತು. ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗಕ್ಕೆ ಸಾಂವಿಧಾನಿಕ ಸ್ಥಾನಮಾನ ನೀಡುವ ನೆಪದಲ್ಲಿ ಸಂವಿಧಾನಕ್ಕೆ 123ನೇ ತಿದ್ದುಪಡಿ ಮಾಡಿ ಹಿಂದುಳಿದ ಜಾತಿಗಳನ್ನು ಗುರುತಿಸುವ ರಾಜ್ಯದ ಅಧಿಕಾರವನ್ನು ಕಿತ್ತುಕೊಳ್ಳುವ ಬಿಜೆಪಿ ಸರ್ಕಾರದ ಹುನ್ನಾರವನ್ನು 2017ರಲ್ಲಿಯೇ ನಮ್ಮ ಪಕ್ಷ ವಿರೋಧಿಸಿತ್ತು. ಇದನ್ನೂ ಓದಿ: ಆಸ್ತಿ ತೆರಿಗೆ, ಅಡುಗೆ ಅನಿಲ ಹೆಚ್ಚಳ ವಿರೋಧಿಸಿ ಕಾಂಗ್ರೆಸ್‍ನಿಂದ ಬಿಬಿಎಂಪಿಗೆ ಮುತ್ತಿಗೆ

ಸಂವಿಧಾನದ 123ನೇ ತಿದ್ದುಪಡಿ ಮೂಲಕ ಹಿಂದುಳಿದ ಜಾತಿಗಳನ್ನು ಗುರುತಿಸುವ ಅಧಿಕಾರವನ್ನು ರಾಜ್ಯಗಳಿಂದ ಕಿತ್ತುಕೊಂಡದ್ದನ್ನು ಬಿಜೆಪಿ ಸರ್ಕಾರ 127ನೇ ತಿದ್ದುಪಡಿ ಮೂಲಕ ಮರಳಿ ನೀಡಿದೆ. ಇದೇನು ಹಿಂದುಳಿದ ಜಾತಿಗಳಿಗೆ ಮಾಡಿರುವ ಉಪಕಾರ ಅಲ್ಲ. ಮಾಡಿರುವ ತಪ್ಪನ್ನು ಒಪ್ಪಿ ಸರಿಪಡಿಸಿದೆಯಷ್ಟೆ.

Share This Article
Leave a Comment

Leave a Reply

Your email address will not be published. Required fields are marked *