ಕೇಂದ್ರ ಸಚಿವ ಸೋಮಣ್ಣ ಮನೆಯಲ್ಲಿ ಜಾತಿಗಣತಿಗೆ 9 ಸಿಬ್ಬಂದಿ – ಸರ್ವೇಗೆ ಇಷ್ಟು ಜನ ಯಾಕೆ ಬಂದ್ರಿ ಅಂತ ಕ್ಲಾಸ್

Public TV
2 Min Read

– ಸರ್ಕಾರಿ ನೌಕರರು ಸರ್ಕಾರದ ಏಜೆಂಟ್ ಆಗಿ ಕೆಲಸ ಮಾಡಬಾರದು ಅಂತ ಗರಂ

ಬೆಂಗಳೂರು: ಕೇಂದ್ರ ಸಚಿವ ವಿ.ಸೋಮಣ್ಣ (V.Somanna) ಮನೆಯಲ್ಲಿ ಜಾತಿಗಣತಿ ಸರ್ವೇ (Caste Census) ನಡೆಸಲಾಗಿದೆ. ವಿಜಯನಗರದಲ್ಲಿರುವ ಸೋಮಣ್ಣ ಅವರ ನಿವಾಸಕ್ಕೆ ಸಿಬ್ಬಂದಿ ಆಗಮಿಸಿ ಸರ್ವೇ ನಡೆಸಿದ್ದಾರೆ.

ಸರ್ವೇ ವೇಳೆ ಸಿಬ್ಬಂದಿಗೆ ಸೋಮಣ್ಣ ಕ್ಲಾಸ್ ತೆಗೆದುಕೊಂಡಿದ್ದಾರೆ. ಸಂಪೂರ್ಣವಾಗಿ ಅಲೈನ್‌ನಲ್ಲೇ ಸರ್ವೇ ಮಾಡೋದ ಎಂದು ಸೋಮಣ್ಣ ಕೇಳಿದ್ದಾರೆ. ಅದಕ್ಕೆ, ಹೌದು ಅಂತ ಸಿಬ್ಬಂದಿ ತಿಳಿಸಿದ್ದಾರೆ. ಈ ರಾಜ್ಯದಲ್ಲಿ ಎಷ್ಟು ಜನ ಎಬ್ಬೆಟ್ಟು ಇದ್ದಾರೆ. ಅವರೆಲ್ಲ ಹೇಗೆ ಅನ್ಲೈನ್‌ನಲ್ಲಿ ಮಾಡಿಸಿಕೊಳ್ಳುತ್ತಾರೆ? ನೀವು ಅಧಿಕಾರಿಗಳು ಸರ್ಕಾರಕ್ಕೆ ಹೇಳಬೇಕಲ್ವಾ ಎಂದು ಗರಂ ಆಗಿದ್ದಾರೆ.

ನಮ್ಮ ಕೇಂದ್ರ ಸರ್ಕಾರ ಮುಂದೆ ಗಣತಿ ಮಾಡಿಸುತ್ತೆ. ಹೇಗೆ ಮಾಡಿಸುತ್ತೆ ನೋಡಿ, ಅದನ್ನು ಸಹ ನೀವೇ ಮಾಡೋದು. ಅಷ್ಟು ಪ್ರಶ್ನೆಗಳು ಬೇಕಾ? ಇದೇಲ್ಲ ನೀವು ಸರ್ಕಾರಕ್ಕೆ ತಿಳಿಸೋದು ಬೇಡ್ವಾ? ಸರ್ಕಾರಿ ನೌಕರರು ಸರ್ಕಾರದ ಏಜೆಂಟ್ ಆಗಿ ಕೆಲಸ ಮಾಡಬಾರದು ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

ಈ ಸಿದ್ದರಾಮಯ್ಯ ಅವರಿಗೆ ಜಾತಿ ಲೆಕ್ಕ ಬೇಕು. ಅದಕ್ಕೆ ಇದನ್ನೆಲ್ಲ ಮಾಡ್ತಿದ್ದಾರೆ. ಸರ್ವೇ ಮಾಡೋಕೆ ನೀವು 9 ಜನ ಯಾಕೆ ಬಂದಿದ್ದೀರಿ ಎಂದು ಸೋಮಣ್ಣ ಪ್ರಶ್ನಿಸಿದ್ದಾರೆ. ಉಪಜಾತಿ ಯಾವುದು ಅಂತಾ ಕೇಳಿದಾಗ, ಅದೆಲ್ಲ ಯಾಕೆ ಬೇಕು? ಸಿದ್ದರಾಮಯ್ಯ ಜಾತಿ ಅಂತಾ ಬರೆದುಕೊಳ್ಳಿ ಎಂದು ಸೋಮಣ್ಣ ತಿಳಿಸಿದ್ದಾರೆ.

ಇಡೀ ದೇಶದಲ್ಲಿ ಸಿದ್ದರಾಮಯ್ಯ ಜಾತಿ ಅಂತಾ ಮಾಡಿಕೊಳ್ಳಿಬಿಡಿ. ಮದ್ವೆ ಆದಾಗ ಎಷ್ಟು ವರ್ಷ ಅನ್ನೋ ಪ್ರಶ್ನೆಗೆ, ಇವೆಲ್ಲ ಯಾಕೆ? ದುರಂತ. ನಮ್ಮ ಅಪ್ಪ-ಅಮ್ಮನ ಕೇಳ್ಬೇಕು. 26 ಅಂತ ಬರೆದುಕೊಳ್ಳಿ. ಇದು ಸಿದ್ದರಾಮಯ್ಯ ವೋಟಿಗಾಗಿ ಮಾಡ್ತಿರೋದು. ಯಾರೋ ಅವಿವೇಕಿಗಳು ಹೇಳಿ ಮಾಡಿಸ್ತಿರೋದು. ಅನೇಕ ಪ್ರಶ್ನೆಗಳಿಗೆ ಸಿದ್ದರಾಮಯ್ಯ, ಡಿಕೆಶಿ ಹೆಸರನ್ನೇ ಹಾಕೊಳ್ಳಿ ಎಂದು ಸೋಮಣ್ಣ ಉತ್ತರಿಸಿದ್ದಾರೆ.

ಉತ್ತರ ಕೊಡದಕ್ಕೆ ಆಗದೆ ಇರುವ ಪ್ರಶ್ನೆಗಳನ್ನೆಲ್ಲ ಹಾಕಿದ್ದೀರಾ. ಯಾವನೊ ತಲೆ ಕೆಟ್ಟಿರೋರು ಮಾಡಿದ್ದು, ಅವ್ನ ಕರೀರಿ. ವೃತ್ತಿ ವಿಚಾರವಾಗಿ ಎಲ್ಲಿ ಕೆಲಸ ಮಾಡೋದು ಎಂಬ ಪ್ರಶ್ನೆ, ಸಿದ್ದರಾಮಯ್ಯ, ಡಿಕೆಶಿಗೆ ಯಾವ ಗ್ರೂಪ್ ಅಂತಾ ಹಾಕ್ತೀರಿ ಎಂದು ಪ್ರತಿಯೊಂದಕ್ಕೂ ಸಿದ್ದರಾಮಯ್ಯ ಹೆಸರನ್ನು ಪ್ರಸ್ತಾಪಿಸಿದ್ದಾರೆ.

Share This Article