ಸರ್ಕಾರಿ ಇಲಾಖೆಗಳ ನೌಕರರು, ಗುತ್ತಿಗೆ, ಹೊರಗುತ್ತಿಗೆ ನೌಕರರಿಗೆ 5 ಲಕ್ಷ ವರೆಗೆ ನಗದು ರಹಿತ ಚಿಕಿತ್ಸಾ ಸೌಲಭ್ಯ

By
2 Min Read

– ದೇಶದ ಇತಿಹಾಸದಲ್ಲೇ ಮೊದಲು, ಮಾದರಿ ಯೋಜನೆಗೆ ಕ್ಯಾಬಿನೆಟ್‌ ಒಪ್ಪಿಗೆ: ದಿನೇಶ್‌ ಗುಂಡೂರಾವ್‌

ಬೆಂಗಳೂರು: ರಾಜ್ಯದ ಎಲ್ಲಾ ಸರ್ಕಾರಿ ಇಲಾಖೆಗಳ ನೌಕರರು, ಗುತ್ತಿಗೆ, ಹೊರಗುತ್ತಿಗೆ ನೌಕರರಿಗೆ ಆರೋಗ್ಯ ಭದ್ರತೆ, 5 ಲಕ್ಷ ರೂ.ವರೆಗೆ ನಗದು ರಹಿತ ಚಿಕಿತ್ಸಾ ಸೌಲಭ್ಯ ಕಲ್ಪಿಸುವ ಐತಿಹಾಸಿಕ ನಿರ್ಣಯಕ್ಕೆ ಕ್ಯಾಬಿನೆಟ್‌ ಒಪ್ಪಿಗೆ ಸೂಚಿಸಿದೆ ಎಂದು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ (Dinesh Gundu Rao) ತಿಳಿಸಿದ್ದಾರೆ.

ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಮೂಲಕ ರಾಜ್ಯದ ಯಾವುದೇ ಸರ್ಕಾರಿ ಇಲಾಖೆಗಳಲ್ಲಿ ಗುತ್ತಿಗೆ, ಹೊರಗುತ್ತಿಗೆ ಮತ್ತು ಗೌರವಧನದ ಆಧಾರದ ಮೇಲೆ ಕೆಲಸ ಮಾಡುವ 3 ಲಕ್ಷಕ್ಕೂ ಹೆಚ್ಚು ಸಿಬ್ಬಂದಿ ಮತ್ತು ಅವರ ಅವಲಂಬಿತರಿಗೆ 5 ಲಕ್ಷ ರೂ. ವರೆಗೆ ನಗದು ರಹಿತ ಚಿಕಿತ್ಸೆಯನ್ನು ಒದಗಿಸುವ ಸಲುವಾಗಿ ‘ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ- ಖಾಯಂ ಅಲ್ಲದ ಸಿಬ್ಬಂದಿಗೆ (KASS-NPE)’ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಆನ್‌ಲೈನ್‌ನಲ್ಲಿ ಬುಕ್‌ ಮಾಡಿ – ಪಾರ್ಸೆಲ್ ಪಡೆಯಲು ಮನೆಗೆ ಬರ್ತಾರೆ ಪೋಸ್ಟ್‌ಮ್ಯಾನ್‌!

ಈ ಯೋಜನೆಯು ESIC, ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ (AB-ArK), ಯಶಸ್ವಿನಿ ಮುಂತಾದ ಯಾವುದೇ ಸರ್ಕಾರಿ ಪ್ರಾಯೋಜಿತ ಆರೋಗ್ಯ ವಿಮಾ ಯೋಜನೆಗಳಲ್ಲಿ ಒಳಗೊಳ್ಳದ ಸಿಬ್ಬಂದಿ ಹಾಗೂ ಅವರ ಅವಲಂಬಿತರನ್ನು ಒಳಗೊಳ್ಳಲಿದೆ. ಈ ಯೋಜನೆಗಾಗಿ ಪ್ರತಿ ತಿಂಗಳು ಸಿಬ್ಬಂದಿ 100 ರೂಪಾಯಿ ಭರಿಸಿದರೆ, ರಾಜ್ಯ ಸರ್ಕಾರವೂ ಸಹ 100 ರೂಪಾಯಿ ಭರಿಸಲಿದೆ. ರಾಜ್ಯ ಸರ್ಕಾರವು ಈ ಯೋಜನೆಗಾಗಿ 36 ಕೋಟಿ ವೆಚ್ಚ ಮಾಡಲಿದೆ ಎಂದು ಮಾಹಿತಿ ನೀಡಿದ್ದಾರೆ.

ಯಾವುದೇ ಆರೋಗ್ಯ ಯೋಜನೆಗಳ ಲಾಭ ದೊರಕದ ಕೆಳ ಮಧ್ಯಮ ವರ್ಗಕ್ಕೆ ಆರೋಗ್ಯದ ಭದ್ರತೆ ನೀಡುವ ದೃಷ್ಟಿಯಿಂದ ಕಳೆದ ಬಜೆಟ್‌ನಲ್ಲಿ ಘೋಷಿಸಿದಂತೆ ರಾಜ್ಯ ಸರ್ಕಾರವು ಈ ಯೋಜನೆಯನ್ನು ಜಾರಿಗೊಳಿಸುತ್ತಿದ್ದು, ದೇಶದಲ್ಲೇ ಇದೊಂದು ಮಾದರಿ ಯೋಜನೆಯಾಗಲಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಬಮೂಲ್ ಅಧ್ಯಕ್ಷರಾಗಿ ಮಾಜಿ ಸಂಸದ ಡಿ.ಕೆ.ಸುರೇಶ್ ಅವಿರೋಧ ಆಯ್ಕೆ

Share This Article