ಪಾಕ್ ಪರ ಘೋಷಣೆ ಕೂಗಿದ ರಾಘವೇಂದ್ರ ಗಾಣಿಗ ಮೇಲೆ ದೇಶದ್ರೋಹದ ಕೇಸ್

Public TV
2 Min Read

ಉಡುಪಿ: ಜಿಲ್ಲೆಯ ಕುಂದಾಪುರದಲ್ಲಿ ಪಾಕ್ ಪರ ಘೋಷಣೆ ಕೂಗಿದ ರಾಘವೇಂದ್ರ ಗಾಣಿಗನ ಮೇಲೆ ಪೊಲೀಸರು ದೇಶದ್ರೋಹದ ಪ್ರಕರಣ ದಾಖಲಿಸಿದ್ದಾರೆ.

ಕುಂದಾಪುರ ಮಿನಿ ವಿಧಾನಸೌಧದೊಳಗೆ ಇಂದು ಬೆಳಗ್ಗೆ ರಾಘವೇಂದ್ರ ಪಾಕ್ ಪರ ಘೋಷಣೆ ಕೂಗಿದ್ದನು. ಈ ಸಂಬಂಧ ರಾಘವೇಂದ್ರನ ಮೇಲೆ ಕುಂದಾಪುರ ತಹಶಿಲ್ದಾರರು ಪೊಲೀಸರಿಗೆ ದೂರು ನೀಡಿದ್ದು, ಸ್ಥಳಕ್ಕೆ ಬಂದ ಪೊಲೀಸರು ರಾಘವೇಂದ್ರ ಗಾಣಿಗನನ್ನು ದಸ್ತಗಿರಿ ಮಾಡಿದ್ದರು.

ಈ ಕುರಿತು ಉಡುಪಿ ಪೊಲೀಸ್ ಉಪಾಧ್ಯಕ್ಷ ಕುಮಾರಚಂದ್ರ ಮಾತನಾಡಿ, ಆತ ಕುಂದಾಪುರದ ಕೋಡಿ ನಿವಾಸಿ. ಕುಂದಾಪುರ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ. ರಾಘವೇಂದ್ರ ಮೇಲೆ ದೇಶದ್ರೋಹದ ಪ್ರಕರಣ ಹಾಕಲಾಗಿದೆ. ಘಟನೆ ಬಗ್ಗೆ ಇನ್ನೂ ತನಿಖೆ ಮಾಡಬೇಕು. ರಾಘವೇಂದ್ರನ ಮಾತಿನಲ್ಲಿ ಸ್ಥಿರತೆ ಇಲ್ಲ. ಆತನ ಹಿನ್ನೆಲೆ ಬಗ್ಗೆ ಪರಾಮರ್ಶೆ ನಡೆಸುತ್ತೇವೆ. ಆತನ ಮಾನಸಿಕ ಸ್ಥಿತಿ ಬಗ್ಗೆ ನಾವೇನು ಹೇಳಲ್ಲ. ವೈದ್ಯಕೀಯ ವರದಿ ಬಂದ ಮೇಲೆ ಮಾಹಿತಿ ನೀಡುತ್ತೇವೆ ಎಂದರು.

ಇಂದು ರಾಘವೇಂದ್ರ ಪಾಕ್ ಪರ ಘೋಷಣೆ ಕೂಗಿದ ಕೂಡಲೇ ಪೊಲೀಸ್ ಠಾಣೆಗೆ ಸ್ಥಳೀಯರು ಫೋನ್ ಮಾಡಿದ್ದಾರೆ. ಸ್ಥಳಕ್ಕಾಗಮಿಸಿದ ಕುಂದಾಪುರ ಎಸ್‍ಐ ಹರೀಶ್ ವ್ಯಕ್ತಿಯನ್ನು ವಶಕ್ಕೆ ಪಡಕೊಂಡಿದ್ದಾರೆ. ಪೊಲೀಸರು ದಸ್ತಗಿರಿ ಮಾಡುವಾಗಲೂ ವ್ಯಕ್ತಿ ಪಾಕ್ ಪರ ಘೋಷಣೆಗಳನ್ನು ಕೂಗಿದ್ದಾನೆ. ರಾಘವೇಂದ್ರ ಗಾಣಿಗ ಕುಂದಾಪುರದ ಖಾಸಗಿ ಶ್ರೀಮಾತಾ ಆಸ್ಪತ್ರೆಗೆ ತನ್ನ ತಾಯಿಯ ಜೊತೆ ಬಂದಿದ್ದ.

ಕಳೆದ ಹತ್ತು ವರ್ಷದಿಂದ ಮಾನಸಿಕ ತೊಂದರೆಯಿಂದ ಬಳಲುತ್ತಿರುವ ರಾಘವೇಂದ್ರ ನಿರಂತರ ಚಿಕಿತ್ಸೆ ಪಡೆಯುತ್ತಿದ್ದಾನೆ. ಕುಂದಾಪುರದ ಖಾಸಗಿ ಸಂಸ್ಥೆಯಲ್ಲಿ ಶಿಕ್ಷಕನಾಗಿದ್ದ ರಾಘವೇಂದ್ರ ಎಂಟು ವರ್ಷಗಳ ಹಿಂದೆ ಮಾನಸಿಕ ಸಮಸ್ಯೆಯಿಂದ ಕೆಲಸದಿಂದ ವಜಾಗೊಂಡಿದ್ದ. ಪೊಲೀಸರು ರಾಘವೇಂದ್ರನನ್ನು ದಸ್ತಗಿರಿ ಮಾಡುತ್ತಿದ್ದಂತೆ ಆಸ್ಪತ್ರೆಯಿಂದ ತಾಯಿ ಪೊಲೀಸ್ ಠಾಣೆಗೆ ಬಂದಿದ್ದಾರೆ. ತಾನು ತನ್ನ ಮಗನನ್ನು ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದುಕೊಂಡು ಬಂದಿದ್ದೆ. ಆತನಿಗೆ ಮಾನಸಿಕ ಸಮಸ್ಯೆ ಇದೆ. ಸಾಲಿನಲ್ಲಿ ನಿಂತಿದ್ದಾಗ ತಪ್ಪಿಸಿಕೊಂಡು ಓಡಿದ್ದಾನೆ ಎಂದು ಪೊಲೀಸರಿಗೆ ಹೇಳಿದ್ದಾರೆ.

ರಾಘವೇಂದ್ರನನ್ನು ವಿಚಾರಣೆ ನಡೆಸುತ್ತಿರುವ ಪೊಲೀಸರು ಆತನ ಮಾನಸಿಕ ಸ್ಥಿತಿಯ ಬಗ್ಗೆ ಅವಲೋಕನ ಮಾಡುತ್ತಿದ್ದಾರೆ. ಮಾನಸಿಕ ತಜ್ಞರನ್ನು ಪೊಲೀಸರು ಸಂಪರ್ಕ ಮಾಡಿದ್ದು ರಾಘವೇಂದ್ರನನ್ನು ಚಿಕಿತ್ಸೆಗೆ ಒಳಪಡಿಸುವ ಸಾಧ್ಯತೆ ಇದೆ. ಪೊಲೀಸ್ ವಶದಲ್ಲಿರುವ ರಾಘವೇಂದ್ರ ನಿರಂತರವಾಗಿ ಮನೆಯಲ್ಲಿ ಸುದ್ದಿವಾಹಿನಿಗಳನ್ನು ನೋಡುತ್ತಿದ್ದ ಎಂದು ತಾಯಿ ಪೊಲೀಸರ ಬಳಿ ಹೇಳಿಕೊಂಡಿದ್ದಾರೆ. ಸುದ್ದಿ ವಾಹಿನಿಗಳಲ್ಲಿ ಸಿಎಎ ಹೋರಾಟ, ಅಮೂಲ್ಯಾ ರಂಪಾಟ, ಆರ್ದ್ರಾ ಚೀರಾಟವನ್ನು ಕಂಡ ರಾಘವೇಂದ್ರ ಅದೇ ಮನೋಸ್ಥಿತಿಗೆ ಹೊರಳಿದ್ದ ಎನ್ನಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *