ಟ್ರೆಕ್ಕಿಂಗ್ ಹೋಗಿ ಅಪಾಯಕ್ಕೆ ಸಿಲುಕಿದ್ದ ಯುವಕನ ವಿರುದ್ಧ ಕೇಸ್ ದಾಖಲು!

Public TV
1 Min Read

ಚಿಕ್ಕಬಳ್ಳಾಪುರ: ನಂದಿಬೆಟ್ಟಕ್ಕೆ ಬಂದು ಪಕ್ಕದ ಬ್ರಹ್ಮಗಿರಿ ಬೆಟ್ಟಕ್ಕೆ ಟ್ರೆಕ್ಕಿಂಗ್ ಹೋಗಿ ಅಪಾಯ ತಂದುಕೊಂಡಿದ್ದ ಪ್ರವಾಸಿಗ ನಿಶಾಂಶ್ ಗುಲ್ ವಿರುದ್ಧ ಕರ್ನಾಟಕ ಅರಣ್ಯ ಇಲಾಖೆ ಕಾಯ್ದೆಯಡಿ ಅತಿಕ್ರಮ ಪ್ರವೇಶದಡಿ ಪ್ರಕರಣ ದಾಖಲಿಸಲಾಗಿದೆ ಎಂದು ಚಿಕ್ಕಬಳ್ಳಾಪುರ ಜಿಲ್ಲಾ ಅರಣ್ಯಾಧಿಕಾರಿ(ಡಿಎಫ್‍ಒ) ಅರಸಲನ್ ತಿಳಿಸಿದ್ದಾರೆ.

ಕರ್ನಾಟಕ ಅರಣ್ಯ ಕಾಯ್ದೆ ವಿಧಿ 24ರ ಅಡಿ ಪ್ರಕರಣ ದಾಖಲಿಸಲಾಗಿದ್ದು, ನಿಶಾಂತ್ ಆಸ್ಪತ್ರೆಯಿಂದ ಬಿಡುಗಡೆ ಆದ ಮೇಲೆ ವಿಚಾರಣೆಗೆ ಗುರಿಪಡಿಸಲಾಗುವುದು ಎಂದು ತಿಳಿಸಿದ್ದಾರೆ. ನಂದಿಬೆಟ್ಟದ ಬಹುತೇಕ ಕಡೆ ಟ್ರೆಕ್ಕಿಂಗ್ ಗೆ ಅನುಮತಿ ಇಲ್ಲ. ನಂದಿಬೆಟ್ಟದ ಹಲವು ಕಡೆ ಮೊಬೈಲ್ ಸಿಗ್ನಲ್ ಸಹ ದೊರೆಯುವುದಿಲ್ಲ. ಇದ್ರಿಂದ ಅಪಾಯಕ್ಕೆ ಸಿಕ್ಕಿಕೊಂಡರೆ ಸಹಾಯಕ್ಕೆ ಬರಲು ಸಹ ಆಗುವುದಿಲ್ಲ. ಈತ ಅದೃಷ್ಟ ಎಂಬಂತೆ ಉಳಿದಿದ್ದಾನೆ. ಇಲ್ಲಿ ಕಾಡುಪ್ರಾಣಿಗಳು ಕೂಡ ಸಂಚರಿಸುತ್ತಿವೆ. ಮೇಲಾಗಿ ಕಡಿದಾದ ಪ್ರದೇಶದಲ್ಲಿ ಸಿಕ್ಕಿಹಾಕಿಕೊಂಡು ಜೀವಂತ ನಿಶಾಂತ್ ಬಂದಿರುವುದೇ ಪವಾಡ ಎಂದು ಹಲವರು ಆಶ್ಚರ್ಯ ವ್ಯಕ್ತಪಡಿಸಿದರು. ಇದನ್ನೂ ಓದಿ: ನಂದಿಬೆಟ್ಟದಲ್ಲಿ ಸಿಲುಕಿದ ಯುವಕ – ಹೆಲಿಕಾಪ್ಟರ್ ಮೂಲಕ ರಕ್ಷಣೆ!

ಟ್ರೆಕ್ಕಿಂಗ್‍ಗೆ ಅನುಮತಿ ಕಡ್ಡಾಯ!
ಟ್ರೆಕ್ಕಿಂಗ್ ಗೆ ಜಿಲ್ಲಾಡಳಿತ ಗುರುತಿಸಿರುವ ಕೆಲವು ಆಯ್ದೆ ಚಾರಣದ ಸ್ಥಳಗಳಿಗೆ ಅರಣ್ಯ ಇಲಾಖೆಯ ಅನುಮತಿ ಪತ್ರ ಪಡೆಯಬೇಕು. ಅಲ್ಲದೆ ಸೂಕ್ತ ಮಾರ್ಗದರ್ಶಕರ ನೆರವಿನಿಂದ ಹೋಗಿಬರುವುದು ಸುರಕ್ಷತೆಯ ದೃಷ್ಟಿಯಿಂದ ಒಳ್ಳೆಯದು. ಅದನ್ನು ಬಿಟ್ಟು ಅನುಮತಿ ಪಡೆಯದೆ ಅತಿಕ್ರಮವಾಗಿ ಪ್ರವೇಶಿಸಿದರೆ ಕರ್ನಾಟಕ ಅರಣ್ಯ ಇಲಾಖೆ ಕಾಯ್ದೆ 24ರ ಅಡಿ ಪ್ರಕರಣ ದಾಖಲಿಸಲಾಗುವುದು.

ಅನಂತರ ನಡೆಯುವ ಕಾನೂನು ಹೋರಾಟಕ್ಕೆ ಸಿಕ್ಕಿ ಒದ್ದಾಡುವ ಅಪಾಯವಿರುತ್ತದೆ ಎಂಬುದನ್ನು ಚಾರಣಿಗರು ಅರಿಯುವುದು ಸೂಕ್ತ ಎಂಬುದನ್ನು ಡಿಎಫ್‍ಒ ತಿಳಿಸಿದ್ದಾರೆ. ಜಿಲ್ಲೆಯಲ್ಲಿ ಚಾರಣಕ್ಕೆ ಅರಣ್ಯ ಇಲಾಖೆ ಅನುಮತಿಸುವ ಸ್ಥಳಗಳಾದ ನಂದಿಬೆಟ್ಟವನ್ನು ಕಾಲುದಾರಿಯ ಮೂಲಕ ಪ್ರವೇಶಿಸಬಹುದು. ಸ್ಕಂದಗಿರಿ, ಕೈವಾರಬೆಟ್ಟ, ಬೆಂಗಳೂರು ಗ್ರಾಮಾಂತರದ ಮಾಕಳಿ ಬೆಟ್ಟ, ಸಾವನದುರ್ಗ ಇಂತಹ ಕಡೆ ಮಾತ್ರ ಟ್ರೆಕ್ಕಿಂಗ್ ಮಾಡಬಹುದು ಎಂದು ತಿಳಿಸಿದರು. ಇದನ್ನೂ ಓದಿ: ಹುಬ್ಬಳ್ಳಿಯಲ್ಲಿ ಹೆಡ್ ಕಾನ್‌ಸ್ಟೇಬಲ್ ಮೇಲೆ ಮಾರಣಾಂತಿಕ ಹಲ್ಲೆ

Share This Article
Leave a Comment

Leave a Reply

Your email address will not be published. Required fields are marked *