ಕೆಲಸ ಗಿಟ್ಟಿಸಿಕೊಳ್ಳಲು ಪಾಕ್‌ ರಾಷ್ಟ್ರೀಯತೆ ಮುಚ್ಚಿಟ್ಟಿದ್ದ ಶಿಕ್ಷಕಿ ವಿರುದ್ಧ FIR

1 Min Read

ಲಕ್ನೋ: ಶಿಕ್ಷಣ ಇಲಾಖೆಯಲ್ಲಿ (Education Department) ಕೆಲಸ ಗಿಟ್ಟಿಸಿಕೊಳ್ಳಲು ಪಾಕಿಸ್ತಾನಿ ರಾಷ್ಟ್ರೀಯತೆ ಮುಚ್ಚಿಟ್ಟಿದ್ದ ಉತ್ತರ ಪ್ರದೇಶದ ಮಹಿಳೆ (UP Woman) ವಿರುದ್ಧ ಎಫ್‌ಐಆರ್‌ ದಾಖಲಾಗಿದೆ.

ಪೊಲೀಸರು ಹೇಳುವಂತೆ, ಮಹಿರಾ ಅಖ್ತರ್ ಅಲಿಯಾಸ್ ಫರ್ಜಾನಾ ನಕಲಿ ದಾಖಲೆಗಳನ್ನ ಬಳಸಿ ಉದ್ಯೋಗ ಗಿಟ್ಟಿಸಿಕೊಂಡಿದ್ದಾರೆ ಅನ್ನೋದು ಶಿಕ್ಷಣ ಇಲಾಖೆಯ ಆಂತರಿಕ ತನಿಖೆಯಲ್ಲಿ ತಿಳಿದುಬಂದಿದೆ. ಬಳಿಕ ಇಲಾಖೆಯ ದೂರಿನ ಮೇರೆಗೆ ಅಜೀಮ್ ನಗರ ಪೊಲೀಸ್ ಠಾಣೆಯಲ್ಲಿ (Azim Nagar police station) ಪ್ರಕರಣ ದಾಖಲಿಸಲಾಗಿದೆ.

ಆರೋಪಿ ಮಹಿಳೆ ಕುಮ್ಹರಿಯಾ ಗ್ರಾಮದ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದರು. ಆಕೆ ಪಾಕಿಸ್ತಾನಿ (Pakistani) ಪ್ರಜೆಯಾಗಿದ್ದರೂ ನಕಲಿ ವಾಸಸ್ಥಳ ಪ್ರಮಾಣ ಪತ್ರ ಬಳಸಿಕೊಂಡು ಕೆಲಸ ಪಡೆದಿದ್ದಳು. ಇದೀಗ ವಂಚನೆ ಮತ್ತು ನಕಲಿ ದಾಖಲೆ ಸಲ್ಲಿಕೆ ಆರೋಪಗಳಿಗಾಗಿ ಬಿಎನ್‌ಎಸ್ ಸೆಕ್ಷನ್ 318(4), 336, 338 ಮತ್ತು 340 ರ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಅನುರಾಗ್ ಸಿಂಗ್ ಹೇಳಿದ್ದಾರೆ.

ಫರ್ಜಾನಾ 1979 ರಲ್ಲೇ ಪಾಕಿಸ್ತಾನಿ ಪ್ರಜೆಯನ್ನ ಮದುವೆಯಾಗಿ ಪಾಕಿಸ್ತಾನಿ ಪೌರತ್ವವನ್ನೂ ಪಡೆದಿದ್ದಾಳೆ. ವಿಚ್ಛೇದನದ ಬಳಿಕ ಪಾಕಿಸ್ತಾನಿ ಪಾಸ್‌ಪೋರ್ಟ್‌ನಲ್ಲೇ ಭಾರತಕ್ಕೆ ಮರಳಿದ್ದಳು. 1985ರ ಸುಮಾರಿಗೆ ಸ್ಥಳೀಯ ವ್ಯಕ್ತಿಯನ್ನ ಮದ್ವೆಯಾಗಿದ್ದಳು. ಅದೇ ಸಮಯದಲ್ಲಿ ತನ್ನನ್ನು ಭಾರತೀಯ ಪ್ರಜೆ ಅಂತ ಬಿಂಬಿಸಿಕೊಳ್ಳಲು ನಕಲಿ ದಾಖಲೆ ಕೊಟ್ಟು ಶಿಕ್ಷಣ ಇಲಾಖೆಯಲ್ಲಿ ಕೆಲಸ ಪಡೆದುಕೊಂಡಿದ್ದಳು ಅನ್ನೋದು ಶಿಕ್ಷಣ ಇಲಾಖೆಯ ಆಂತರಿಕೆ ತನಿಖೆಯಲ್ಲಿ ಗೊತ್ತಾಗಿದೆ.

ಆಕೆಯ ಪಾಕಿಸ್ತಾನಿ ರಾಷ್ಟ್ರೀಯತೆ (Pakistan Nationality) ಬಹಿರಂಗವಾದ ನಂತರ, ಇಲಾಖೆ ಆಕೆಯನ್ನ ಸೇವೆಯಿಂದ ವಜಾಗೊಳಿಸಿದೆ. ಜೊತೆಗೆ ಪೊಲೀಸರಿಗೂ ದೂರು ನೀಡಿದೆ. ಈ ಸಂಬಂಧ ಹೆಚ್ಚಿನ ತನಿಖೆ ನಡೆಯುತ್ತಿದೆ.

Share This Article