ಕಾರು, KSRTC ಬಸ್ ನಡುವೆ ಅಪಘಾತ- ಕಾರಿನಲ್ಲಿದ್ದ ವಿದ್ಯಾರ್ಥಿ, ಶಿಕ್ಷಕರನ್ನು ರಕ್ಷಿಸಿ ಮಾನವೀಯತೆ ಮೆರೆದ ಗ್ರಾಮಸ್ಥರು

Public TV
1 Min Read

ಮಂಡ್ಯ: ಕಾರು ಹಾಗೂ ಕೆಎಸ್‍ಆರ್ ಟಿಸಿ ನಡುವೆ ಅಪಘಾತ ಸಂಭವಿಸಿದ್ದು, ಈ ವೇಳೆ ಕಾರಿನಲ್ಲಿ ಸಿಲುಕಿ ನರಳಾಡುತ್ತಿದ್ದ ಶಿಕ್ಷಕ ಹಾಗೂ ವಿದ್ಯಾರ್ಥಿಗಳನ್ನು ಸ್ಥಳೀಯ ಗ್ರಾಮಸ್ಥರು ರಕ್ಷಣೆ ಮಾಡಿದ್ದಾರೆ.

ಈ ಘಟನೆ ಜಿಲ್ಲೆಯ ಇಂಡವಾಳು ಗ್ರಾಮದ ಬಳಿ ನಡೆದಿದ್ದು, ಅಪಘಾತದಲ್ಲಿ ಗಾಯಗೊಂಡವರನ್ನು ದೊಡ್ಡಬಳ್ಳಾಪುರ ಮೂಲದ ಶಿಕ್ಷಕ ನಾರಣಪ್ಪ ಹಾಗೂ ವಿದ್ಯಾರ್ಥಿಗಳಾದ ಗಗನ್, ಅನ್ನಪೂರ್ಣ, ಅಂಜನಾಮೂರ್ತಿ, ಧನುಷ್, ಅರುಣ್, ಜ್ಯೋತಿ, ತನುಜಾ ಎಂದು ತಿಳಿದು ಬಂದಿದೆ. ಎಲ್ಲರೂ ಶಾಲೆಯ ಶಿಕ್ಷಕ ನಾರಣಪ್ಪ ಜೊತೆ ಸೇರಿ ಶ್ರೀರಂಗಪಟ್ಟಣದ ಬಲಮುರಿಗೆ ಪ್ರವಾಸಕ್ಕೆ ಬಂದಿದ್ದರು ಎಂದು ಹೇಳಲಾಗುತ್ತಿದೆ.

ಮಂಡ್ಯದ ರಾಷ್ಟ್ರೀಯ ಹೆದ್ದಾರಿ ಇಂಡವಾಳು ಗ್ರಾಮ ಬಳಿ ವೇಗವಾಗಿ ಬಂದ ಕಾರು ಪ್ರಯಾಣಿಕರನ್ನು ಹತ್ತಿಸಿಕೊಳ್ಳಲು ನಿಂತಿದ್ದ ಕೆಎಸ್‍ಆರ್ ಟಿಸಿ ಬಸ್‍ಗೆ ಡಿಕ್ಕಿ ಹೊಡೆದಿದೆ. ಈ ವೇಳೆ ಕಾರಿನಲ್ಲಿದ್ದ ವಿದ್ಯಾರ್ಥಿಗಳು ಗಾಯಗೊಂಡು ಕಿರುಚಿಕೊಂಡಿದ್ದಾರೆ. ಮಕ್ಕಳ ಚೀರಾಟ ಕೇಳಿ ತಕ್ಷಣ ಸ್ಥಳಕ್ಕೆ ಬಂದ ಗ್ರಾಮಸ್ಥರು ಮೊದಲು ಕಾರಿನೊಳಗೆ ಸಿಲುಕಿದ್ದವರನ್ನು ಹೊರ ತೆಗೆದಿದ್ದಾರೆ. ನಂತರ ಹೆದ್ದಾರಿಯಲ್ಲಿ ಬರುತ್ತಿದ್ದ ವಾಹನಗಳನ್ನು ತಡೆದು ಅದರಲ್ಲಿದ್ದ ಗಾಯಾಳುಗಳನ್ನು ಮಂಡ್ಯ ಮಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಗ್ರಾಮಸ್ಥರು ಮತ್ತು ಹೆದ್ದಾರಿಯಲ್ಲಿ ಬರುತ್ತಿದ್ದ ವಾಹನಗಳ ಮಾಲೀಕರ ಮಾನವೀಯತೆಯಿಂದ ಅಪಘಾತದಲ್ಲಿ ಗಾಯಗೊಂಡವರು ತಕ್ಷಣ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುವಂತಾಗಿದೆ.

ಅಪಘಾತದಲ್ಲಿ ಗಾಯಗೊಂಡಿರುವವರ ಪೈಕಿ ಶಿಕ್ಷಕ ನಾರಣಪ್ಪ ಹಾಗೂ ಇಬ್ಬರ ವಿದ್ಯಾರ್ಥಿಗಳ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ. ಕಾರನ್ನು ವೇಗವಾಗಿ ಚಾಲನೆ ಮಾಡಿರುವುದೇ ಅಪಘಾತಕ್ಕೆ ಕಾರಣ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಅಪಘಾತದಲ್ಲಿ ಗಾಯಗೊಂಡವರನ್ನು ನೋಡುತ್ತಾ ವಿಡಿಯೋ ಮಾಡುವ ಅಮಾನವೀಯ ಘಟನೆಗಳ ನಡುವೆ ಇಂಡವಾಳು ಗ್ರಾಮಸ್ಥರ ಮಾನವೀಯ ಕೆಲಸ ಎಲ್ಲರಿಗೂ ಮಾದರಿಯಾಗಿದೆ.

Share This Article
Leave a Comment

Leave a Reply

Your email address will not be published. Required fields are marked *