ಡಿವೈಡರ್‍ಗೆ ಡಿಕ್ಕಿಯಾಗಿ ಗಾಳಿಯಲ್ಲಿ ಹಾರಿ ಕಟ್ಟಡದ 2ನೇ ಮಹಡಿಯ ಗೋಡೆಯಲ್ಲಿ ಸಿಲುಕಿದ ಕಾರು!

Public TV
1 Min Read

ವಾಷಿಂಗ್ಟನ್: ಅಪಘಾತಗಳು ನಡೆದಾಗ ವಾಹನಗಳು ನಜ್ಜುಗುಜ್ಜಾಗಿರೋದನ್ನ, ತಲೆಕೆಳಗಾಗಿ ಬಿದ್ದಿರೋದನ್ನ ನೋಡಿರ್ತೀರ. ಆದ್ರೆ ಇಲ್ಲೊಂದು ಕಾರ್ ಅಪಘಾತಕ್ಕೀಡಾದ ನಂತರ ಗಾಳಿಯಲ್ಲಿ ಹಾರಿ ಕಟ್ಟಡದ 2ನೇ ಮಹಡಿಯ ಗೋಡೆಯಲ್ಲಿ ಸಿಲುಕಿದೆ.

ಭಾನುವಾರದಂದು ದಕ್ಷಿಣ ಕ್ಯಾಲಿಫೋರ್ನಿಯಾದಲ್ಲಿ ಈ ಘಟನೆ ನಡೆದಿದೆ. ಡಿವೈಡರ್‍ಗೆ ಡಿಕ್ಕಿ ಹೊಡೆದ ಕಾರು ಮೇಲೆ ಗಾಳಿಯಲ್ಲಿ ಹಾರಿ ಕಟ್ಟಡದ ಎರಡನೇ ಮಹಡಿಯಲ್ಲಿದ್ದ ಡೆಂಟಿಸ್ಟ್ ಕಚೇರಿಯ ಗೋಡೆಯಲ್ಲಿ ಸಿಲುಕಿದೆ. ಸ್ಥಳೀಯ ಅಗ್ನಿಶಾಮಕ ಸಿಬ್ಬಂದಿ ಇದರ ಫೋಟೋಗಳನ್ನ ಕ್ಲಿಕ್ಕಿಸಿದ್ದು, ಬಿಳಿ ಬಣ್ಣದ ಕಾರು ಗೋಡೆಯಲ್ಲಿ ಸಿಲುಕಿ, ಹಿಂದಿನ ಭಾಗ ಹೊರಚಾಚಿಕೊಂಡಿರೋದನ್ನ ಕಾಣಬಹುದು.

ಕ್ಯಾಲಿಫೋರ್ನಿಯಾದ ಸಾಂಟಾ ಅನಾದಲ್ಲಿ ಕಾರು ಅಪಘಾತಕ್ಕೀಡಾಗಿರುವ ಬಗ್ಗೆ ಬೆಳಗ್ಗೆ ಸುಮಾರು 5.30ರ ವೇಳೆಯಲ್ಲಿ ಕರೆ ಬಂತು. ಕಾರು ತುಂಬಾ ವೇಗವಾಗಿ ಚಲಿಸುತ್ತಿದ್ದು, ಡಿವೈಡರ್‍ಗೆ ಡಿಕ್ಕಿಯಾಗಿದೆ. ಕಾರ್ ಚಾಲಕ ಡಿವೈಡರ್ ಪಕ್ಕದ ರಸ್ತೆಯಲ್ಲಿ ಬರುತ್ತಿರಲಿಲ್ಲ. ಬದಲಿಗೆ ಮತ್ತೊಂದು ರಸ್ತೆಯಿಂದ ಬಂದು, ಟಿ- ಬೋನ್ ಕ್ರಾಶ್ ರೀತಿಯಲ್ಲಿ ಅಪಘಾತಕ್ಕೀಡಾಗಿದೆ ಎಂದು ಆರೇಂಜ್ ಕೌಂಟಿ ಫೈರ್ ಅಥಾರಿಟಿಯ ಅಧಿಕಾರಿ ಸ್ಟೀಫನ್ ಹಾರ್ನರ್ ಹೇಳಿದ್ದಾರೆ.

ಡಿವೈಡರ್‍ಗೆ ಡಿಕ್ಕಿಯಾದ ರಭಸಕ್ಕೆ ಕಾರ್ ಮೇಲೆ ಗಾಳಿಯಲ್ಲಿ ಹಾರಿದ್ದು, ಕಟ್ಟಡದ ಸಣ್ಣ ಕಚೇರಿಯ ಗೋಡೆಯಲ್ಲಿ ತೂರಿಕೊಂಡಿದೆ. ಘಟನೆಯಿಂದ ಸಣ್ಣ ಪ್ರಮಾಣದ ಬೆಂಕಿ ಹೊತ್ತಿಕೊಂಡಿತ್ತು. ಅದನ್ನ ಕೂಡಲೇ ಆರಿಸಲಾಯ್ತು ಎಂದು ಹಾರ್ನರ್ ತಿಳಿಸಿದ್ದಾರೆ.

 

ಕಾರಿನಲ್ಲಿ ಇಬ್ಬರು ವ್ಯಕ್ತಿಗಳಿದ್ದರು. ಒಬ್ಬರು ಹೊರಗೆ ಬರುವಲ್ಲಿ ಯಶಸ್ವಿಯಾಗಿದ್ದರು. ಮತ್ತೊಬ್ಬರು ಸುಮಾರು 1 ಗಂಟೆ ಕಾಲ ಕಾರಿನೊಳಗೆ ಸಿಲುಕಿದ್ದರು. ಭಾರೀ ಗಾತ್ರದ ಸಾಧನವನ್ನ ಬಳಸಿ ವಾಹನವನ್ನ ಸಮತೋಲನಕ್ಕೆ ತರಲಾಯಿತು. ಬಳಿಕ ಇಬ್ಬರನ್ನೂ ಆಸ್ಪತ್ರೆಗೆ ಕೊಂಡೊಯ್ಯಲಾಯ್ತು. ಅವರಿಗೆ ಸಣ್ಣ ಪುಟ್ಟ ಗಾಯಗಳಾಗಿತ್ತು ಎಂದು ಅವರು ಹೇಳಿದ್ದಾರೆ.

 

ನನಗೆ ಕಾರಿನಲ್ಲಿದ್ದವರ ಬಗ್ಗೆ ಹೆಚ್ಚಿನ ಮಾಹಿತಿಯಿಲ್ಲ ಎಂದು ಹಾರ್ನರ್ ಹೇಳಿದ್ದಾರೆ. ಆದ್ರೆ ಸಾಂಟಾ ಆನಾ ಪೊಲೀಸರು ಪ್ರತಿಕ್ರಿಯಿಸಿ, ಚಾಲಕ ಮಾದಕದ್ರವ್ಯ ಸೇವನೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆಂದು ತಿಳಿಸಿದ್ದಾರೆ.

ಅಗ್ನಿಶಾಮಕ ಸಿಬ್ಬಂದಿ ಕ್ರೇನ್ ಬಳಸಿ ಕಾರನ್ನ ಕಡ್ಡಡದಿಂದ ಎಳೆದು ಕೆಳಗೆ ತಂದಿದ್ದಾರೆ. ಫೈಲ್‍ಗಳನ್ನ ಇಡಲು ಬಳಸಾಗ್ತಿದ್ದ ಕಟ್ಟಡದ ಎರಡನೇ ಮಹಡಿಗೆ ಸಣ್ಣ ಪ್ರಮಾಣದ ಹಾನಿಯಾಗಿದೆ ಎಂದು ಹಾರ್ನರ್ ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *