ಬೆಂಗಳೂರು: ಸಿಲಿಕಾನ್ ಸಿಟಿ ಯುವತಿಯರೇ ಎಚ್ಚರ ಎಚ್ಚರ..! ನಗರದಲ್ಲಿ ನಿಮ್ಮ ಬಳಿ ಅಸಭ್ಯವಾಗಿ ವರ್ತಿಸುವ ತಂಡ ಹುಟ್ಟಿಕೊಂಡಿದೆ. ಬಸ್ ಸ್ಟಾಪ್ ನಲ್ಲಿ ನಿಂತಿದ್ದ ಯುವತಿಯನ್ನ ನೋಡಿ ಅಸಭ್ಯವಾಗಿ ವರ್ತಿಸಿದ ವ್ಯಕ್ತಿಯ ವಿರುದ್ಧ ಎಫ್‍ಐಆರ್ ದಾಖಲಾಗಿದೆ.
ವಸಂತನಗರದ ಮೌಂಟ್ ಕಾರ್ಮೆಲ್ ಕಾಲೇಜು ಬಸ್ ಸ್ಟಾಪ್ ಬಳಿ ಶನಿವಾರ ಈ ಘಟನೆ ನಡೆದಿದ್ದು, ಕೆಎ-53ಸಿ1877 ನಂಬರಿನ ಕಾರಿನ ಚಾಲಕನಿಂದ ಈ ಕೃತ್ಯ ನಡೆದಿದೆ. ಈ ಬಗ್ಗೆ ಹೈ ಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಯುವತಿ ದೂರು ನೀಡಿದ್ದಾರೆ.
ಏನಿದು ಘಟನೆ?: ಶನಿವಾರ ಯುವತಿಯೊಬ್ಬರು ವಸಂತನಗರದ ಮೌಂಟ್ ಕಾರ್ಮೆಲ್ ಕಾಲೇಜಿನ ಬಸ್ ಸ್ಟಾಪ್ ಬಳಿ ನಿಂತಿದ್ದರು. ಆಗ ಕೆಎ-53 ಸಿ 1877 ನಂಬರಿನ ಕಾರಿನಲ್ಲಿ ಚಾಲಕನೊಬ್ಬ ಕುಳಿತಿದ್ದ. ಈ ವೇಳೆ ಕಾರಿನ ಚಾಲಕ ಯುವತಿಯನ್ನ ನೋಡಿಕೊಂಡು ಪ್ಯಾಂಟ್ ಬಿಚ್ಚಿ ಹಸ್ತ ಮೈಥುನ ಮಾಡಿಕೊಂಡಿದ್ದಾನೆ. ಇದರಿಂದ ಭಯಗೊಂಡು ಯುವತಿ ಬೇರೆ ಸ್ಥಳಕ್ಕೆ ಹೋಗಿದ್ದಾರೆ. ಆದರೆ ಆರೋಪಿ ಮಾತ್ರ ಅಲ್ಲಿಗೂ ಹೋಗಿ ಮತ್ತೆ ಹಸ್ತ ಮೈಥುನ ಮಾಡಿಕೊಂಡು ಮಾನಸಿಕ ಹಿಂಸೆ ನೀಡಿದ್ದಾನೆ. ಬಳಿಕ ಯುವತಿ ಈ ಬಗ್ಗೆ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದ್ದಾರೆ.
ಹೈ ಗ್ರೌಂಡ್ಸ್ ಪೊಲೀಸರು ಆರೋಪಿ ವಿರುದ್ಧ ಐಪಿಸಿ ಸೆಕ್ಷನ್ 294 ಮತ್ತು 509 ರಡಿ ಎಫ್‍ಐಆರ್ ದಾಖಲಿಸಿಕೊಂಡಿದ್ದಾರೆ. ಸಾರ್ವಜನಿಕ ಸ್ಥಳದಲ್ಲಿ ಅಸಹ್ಯವಾಗಿ ವರ್ತಿಸಿದ ಕಾರಿನ ಚಾಲಕನಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.