ವೃದ್ಧೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಅಪಘಾತ – ಕಾರಿನಲ್ಲಿದ್ದ ಮೂವರು ಸಜೀವ ದಹನ

Public TV
1 Min Read

ತುಮಕೂರು: ಖಾಸಗಿ ಬಸ್ ಹಾಗು ಓಮ್ನಿ ಕಾರು ಮುಖಾಮುಖಿ ಡಿಕ್ಕಿಯಾದ ಪರಿಣಾಮ ಕಾರಿನಲ್ಲಿದ್ದ ಮೂವರು ಸಜೀವ ದಹನವಾಗಿರುವ ದುರ್ಘಟನೆ ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 206ರ ದೊಡ್ಡಗುಣಿ ಗ್ರಾಮದ ಬಳಿ ನಡೆದಿದೆ.

ಇಂದು ಮುಂಜಾನೆ ಈ ಅಪಘಾತ ಸಂಭವಿಸಿದ್ದು, ಕಾರಿನಲ್ಲಿದ್ದ ವಸಂತಕುಮಾರ್ (55), ರಾಮಯ್ಯ(55) ಹಾಗೂ ನರಸಮ್ಮ (65) ಎಂಬವರು ಸಜೀವ ದಹನವಾಗಿದ್ದಾರೆ. ಮೃತರು ಗುಬ್ಬಿ ತಾಲೂಕಿನ ಎನ್. ಹೊಸಳ್ಳಿ ಗ್ರಾಮದವರು.

ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಹೋಗುತ್ತಿದ್ದ ಶ್ರೀಶ ಟ್ರಾವೆಲ್ಸ್ ಗೆ ಸೇರಿದ ಬಸ್ ಹಾಗೂ ಎನ್ ಹೊಸಹಳ್ಳಿ ಗ್ರಾಮದಿಂದ ನಿಟ್ಟೂರಿಗೆ ಹೋಗುತ್ತಿದ್ದ ಕಾರಿನ ನಡುವೆ ಅಪಘಾತ ಸಂಭವಿಸಿದೆ. ಕಾರಿನಲ್ಲಿ ಒಟ್ಟು 6 ಮಂದಿ ಪ್ರಯಾಣಿಸುತ್ತಿದ್ದರು. ಡಿಕ್ಕಿ ರಭಸಕ್ಕೆ ಮೂವರು ಹೊರಗೆ ಬಿದ್ದರೆ, ಮತ್ತೆ ಮೂವರು ಸಜೀವ ದಹನವಾಗಿದ್ದಾರೆ.

ಅನಾರೋಗ್ಯದಿಂದ ಬಳಲುತ್ತಿದ್ದ ನರಸಮ್ಮ ಎಂಬವರನ್ನು ನಿಟ್ಟೂರು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗುತ್ತಿತ್ತು. ಅಪಘಾತದ ತೀವ್ರತೆಗೆ ಕಾರು ಹಾಗೂ ಖಾಸಗಿ ಬಸ್ ಸಂಪೂರ್ಣ ಸುಟ್ಟು ಭಸ್ಮವಾಗಿವೆ. ಕೆಳಕ್ಕೆ ಬಿದ್ದ ನರಸಿಂಹಮೂರ್ತಿ, ರಾಧಾಮಣಿ ಹಾಗೂ ರವಿ ಅವರನ್ನು ಹೈವೆ ಗಸ್ತು ವಾಹನದಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಅಪಘಾತ ಸಂಭವಿಸುತ್ತಿದ್ದಂತೆ ಬಸ್ ಪ್ರಯಾಣಿಕರು ಕೆಳಕ್ಕೆ ಇಳಿದಿದ್ದಾರೆ. ಆಗ ಕಾರಿಗೆ ಹೊತ್ತಿಕೊಂಡಿದ್ದ ಬೆಂಕಿ ಕೆನ್ನಾಲಿಗೆ ಬಸ್‍ಗೂ ಪಸರಿಸಿದೆ. ಪರಿಣಾಮ ಬಸ್ ಕೂಡ ಸುಟ್ಟು ಭಸ್ಮವಾಗಿದೆ. ಬಸ್ಸಿನಲ್ಲಿದ್ದ ನಾಲ್ವರಿಗೆ ಸಣ್ಣಪುಟ್ಟ ಗಾಯವಾಗಿದೆ. ಈ ಬಗ್ಗೆ ಗುಬ್ಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *