ಮಿಸ್ಬಾ ಉಲ್ ಹಕ್ ದಾಖಲೆ ಮುರಿದ ಕೊಹ್ಲಿ

Public TV
1 Min Read

ಹೈದರಾಬಾದ್: ಇಲ್ಲಿನ ರಾಜೀವ್ ಗಾಂಧಿ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ವೆಸ್ಟ್ ಇಂಡೀಸ್ ವಿರುದ್ಧ ಪಂದ್ಯದಲ್ಲಿ ಕೊಹ್ಲಿ ಹೊಸ ದಾಖಲೆ ನಿರ್ಮಾಣ ಮಾಡಿದ್ದು, ಟೆಸ್ಟ್ ಕ್ರಿಕೆಟ್‍ನಲ್ಲಿ ಅತೀ ಹೆಚ್ಚು ರನ್ ಸಿಡಿಸಿದ ಏಷ್ಯಾ ಆಟಗಾರ ಎಂಬ ಹೆಗ್ಗಳಿಕೆ ಪಡೆದಿದ್ದಾರೆ.

ಪಾಕಿಸ್ತಾನದ ಮಾಜಿ ನಾಯಕ ಮಿಸ್ಬಾ ಉಲ್ ಹಕ್ 56 ಪಂದ್ಯ 99 ಇನ್ನಿಂಗ್ಸ್ ಗಳಲ್ಲಿ 4,214 ರನ್ ಗಳಿಸಿದ್ದರು. ಸದ್ಯ ಕೊಹ್ಲಿ ಕೇವಲ 42 ಪಂದ್ಯ 69 ಇನ್ನಿಂಗ್ಸ್ ಗಳಲ್ಲಿ 4,233 ರನ್ ಸಿಡಿಸಿದ್ದಾರೆ. ಈ ಪಂದ್ಯದಲ್ಲಿ 26 ರನ್ ಗಳಿಸಿದ್ದ ವೇಳೆ ಕೊಹ್ಲಿ ಈ ಸಾಧನೆ ಮಾಡಿದ್ದಾರೆ. ಈ ಪಟ್ಟಿಯಲ್ಲಿ ಶ್ರೀಲಂಕಾ ಆಟಗಾರ ಜಯವರ್ಧನೆ 3,665 ರನ್ ಗಳಿಸಿ 3ನೇ ಸ್ಥಾನದಲ್ಲಿದ್ದು, ನಂತರದಲ್ಲಿ ಧೋನಿ 3,454 ರನ್, ಗವಾಸ್ಕರ್ 3,449 ರನ್ ಗಳಿಸಿ 4 ಮತ್ತು 5ನೇ ಸ್ಥಾನದಲ್ಲಿದ್ದಾರೆ.

ದಕ್ಷಿಣ ಆಫ್ರಿಕಾ ಆಟಗಾರ ಗ್ರೇಮ್ ಸ್ಮಿತ್ ಟೆಸ್ಟ್ ಕ್ರಿಕೆಟ್ ತಂಡ ನಾಯಕನಾಗಿ ಅತೀ ಹೆಚ್ಚು ರನ್ ಗಳಿಸಿದ ಆಟಗಾರ ಎಂಬ ದಾಖಲೆ ಹೊಂದಿದ್ದು, 109 ಪಂದ್ಯಗಳಲ್ಲಿ 8,659 ರನ್ ಸಿಡಿಸಿದ್ದಾರೆ. ಇದರಲ್ಲಿ 25 ಶತಕಗಳು ಸೇರಿದೆ. ವಿರಾಟ್ ಕೊಹ್ಲಿ ತಂಡದ ನಾಯಕನಾಗಿ ಈಗಾಗಲೇ 24 ಶತಕಗಳನ್ನು ಪೂರೈಸಿದ್ದು, 25 ಶತಕ ಪೂರೈಸಿದರೆ ವೇಗವಾಗಿ ಈ ಸಾಧನೆ ಮಾಡಿದ ವಿಶ್ವದ ಮೊದಲ ಆಟಗಾರ ಎಂಬ ದಾಖಲೆಗೆ ನಿರ್ಮಿಸಲಿದ್ದಾರೆ. ಸದ್ಯ ಬ್ರಾಡ್ ಮನ್ 68 ಇನ್ನಿಂಗ್ಸ್ ಗಳಲ್ಲಿ 25 ಶತಕಗಳನ್ನು ಪೂರೈಸಿದ ಆಟಗಾರ ಎಂಬ ಹೆಗ್ಗಳಿಕೆ ಪಡೆದಿದ್ದಾರೆ.

ವಿಂಡೀಸ್ ವಿರುದ್ಧ 2ನೇ ಟೆಸ್ಟ್ ನಲ್ಲಿ ಅರ್ಧಶತಕದ ಅಂಚಿನಲ್ಲಿ ಎಡವಿದ ಕೊಹ್ಲಿ 78 ಎಸೆತಗಳಲ್ಲಿ 5 ಬೌಂಡರಿಗಳ ನೆರವಿನಿಂದ 45 ರನ್ ಗಳಿಸಿ ಹೊಲ್ಡರ್ ಬೌಲಿಂಗ್ ನಲ್ಲಿ ಎಲ್‍ಬಿ ಬಲೆಗೆ ಬಿದ್ದು ಪೆವಿಲಿಯನ್ ಸೇರಿದರು. ಇದಕ್ಕೂ ಮುನ್ನ ಆರಂಭಿಕರಾಗಿ ಕಣಕ್ಕೆ ಇಳಿದ ಪೃಥ್ವಿ ಶಾ ಅರ್ಧಶತಕ ಸಿಡಿಸಿ ಮಿಂಚಿದರೆ, ಕೆಎಲ್ ರಾಹುಲ್ ಮತ್ತೊಮ್ಮೆ ನಿರಾಸೆ ಮೂಡಿಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *