ಕೀರ್ತಿ ಚಕ್ರ; ಪತಿಯ ಮರಣೋತ್ತರ ಪ್ರಶಸ್ತಿ ಸ್ವೀಕರಿಸುವಾಗ ಕ್ಯಾ.ಅನ್ಶುಮನ್‌ ಸಿಂಗ್‌ ಪತ್ನಿ ಭಾವುಕ

Public TV
2 Min Read

– ಪತಿಯ ಬಗ್ಗೆ ಹೇಳಿ ಸ್ಮೃತಿ ಭಾವುಕ

ನವದೆಹಲಿ: ರಾಷ್ಟ್ರಪತಿ ದ್ರೌಪದಿ ಮುರ್ಮು ಶುಕ್ರವಾರ 7 ಮಂದಿ ಸೈನಿಕರಿಗೆ ಮರಣೋತ್ತರ ಪ್ರಶಸ್ತಿ ನೀಡಿ ಗೌರವಿಸಿದರು. ಈ ಸಂದರ್ಭದಲ್ಲಿ ಕ್ಯಾ.ಅನ್ಶುಮನ್‌ ಸಿಂಗ್‌  (Captain Angshuman Singh) ಅವರಿಗೆ ಮರಣೋತ್ತರವಾಗಿ ಕೀರ್ತಿ ಚಕ್ರವನ್ನು ನೀಡಲಾಯಿತು . ಈ ಗೌರವವನ್ನು ಸ್ವೀಕರಿಸಲು ಕ್ಯಾ.ಅನ್ಶುಮನ್‌ ಸಿಂಗ್‌ ಅವರ ಪತ್ನಿ ಸ್ಮೃತಿಯವರು ಸ್ಮರಣಾರ್ಥ ಸಮಾರಂಭದಲ್ಲಿ ಉಪಸ್ಥಿತರಿದ್ದರು.

ಸನ್ಮಾನ ಸಮಾರಂಭದಲ್ಲಿ ಭಾಗಿಯಾಗಿದ್ದ ಸ್ಮೃತಿ ತುಂಬಾ ಭಾವುಕರಾಗಿದ್ದರು. ಪತಿಯನ್ನು ಕಳೆದುಕೊಂಡ ದುಃಖವನ್ನು ಕಣ್ಣೀರಿನಲ್ಲಿಯೇ ಮುಚ್ಚಿಟ್ಟು ರಾಷ್ಟ್ರಪತಿಯವರಿಂದ ʼಕೀರ್ತಿ ಚಕ್ರʼ (Kirti Chakra) ಪಡೆದರು. ಇದರ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಸನ್ಮಾನ ಸಮಾರಂಭದ ನಂತರ ಸ್ಮೃತಿ (Smriti Singh) ತಮ್ಮ ಪತಿಯೊಂದಿಗೆ ಕಳೆದ ಕ್ಷಣಗಳನ್ನು ಹಂಚಿಕೊಂಡರು. ನಾವಿಬ್ಬರೂ ಕಾಲೇಜಿನ ಮೊದಲ ವರ್ಷದಲ್ಲಿ ಓದುತ್ತಿದ್ದಾಗ ಭೇಟಿಯಾದೆವು. ಮೊದಲ ನೋಟದಲ್ಲೇ ಇಬ್ಬರೂ ಪ್ರೀತಿಯಲ್ಲಿ ಬಿದ್ದೆವು. ಒಂದು ತಿಂಗಳ ನಂತರ ಅವರು ಸಶಸ್ತ್ರ ಪಡೆಗಳ ವೈದ್ಯಕೀಯ ಕಾಲೇಜಿಗೆ ಆಯ್ಕೆಯಾದರು. ವಾಸ್ತವವಾಗಿ ಅವರು ಬಹಳ ಬುದ್ಧಿವಂತ. ಒಂದು ತಿಂಗಳು ಭೇಟಿಯಾದ ನಂತರ ನಾವು 8 ವರ್ಷಗಳ ಕಾಲ ದೂರನೇ ಇದ್ದೆವು. ಇದಾದ ನಂತರ ನಾವಿಬ್ಬರೂ ಮದುವೆಯಾದೆವು.

ಮದುವೆಯಾಗಿ ಎರಡು ತಿಂಗಳ ನಂತರ ಸಿಯಾಚಿನ್‌ನಲ್ಲಿ ನಿಯೋಜನೆಗೊಂಡಿದ್ದರು. ಇದು ನಿಜವೆಂದು ನಂಬಲು 7-8 ಗಂಟೆ ತೆಗೆದುಕೊಂಡಿತ್ತು. ಆದರೆ ಈಗ ನನ್ನ ಕೈಯಲ್ಲಿ ಕೀರ್ತಿ ಚಕ್ರವಿದೆ ಎಂದು ಗದ್ಗದಿತರಾದ ಸ್ಮೃತಿ, ಅವರೇ ನನಗೆ ಹೀರೋ. ಇನ್ನೊಬ್ಬರ ಜೀವ ಉಳಿಸಲು ತನ್ನ ಪ್ರಾಣವನ್ನೇ ಕೊಟ್ಟರು. ನಾವು ಹೇಗಾದರೂ ನಮ್ಮ ಜೀವನವನ್ನು ನಡೆಸುತ್ತೇವೆ ಎಂದು ಕಣ್ಣೀರಿಟ್ಟರು.

ಕ್ಯಾ.ಅನ್ಶುಮನ್‌ ಸಿಂಗ್‌ ಅವರನ್ನು ಕಳೆದ ವರ್ಷ ಜುಲೈ ತಿಂಗಳಲ್ಲಿ ಪಂಜಾಬ್ ಬೆಟಾಲಿಯನ್‌ನ 403 ಫೀಲ್ಡ್ ಆಸ್ಪತ್ರೆಯಲ್ಲಿ ರೆಜಿಮೆಂಟಲ್ ಮೆಡಿಕಲ್ ಆಫೀಸರ್ ಆಗಿ ನೇಮಿಸಲಾಯಿತು. 2023 ರ ಜುಲೈ 19 ರಂದು ಶಾರ್ಟ್ ಸರ್ಕ್ಯೂಟ್‌ನಿಂದ ಸೇನೆಯ ಮದ್ದುಗುಂಡುಗಳ ಬಂಕರ್‌ನಲ್ಲಿ ಬೆಂಕಿ ಕಾಣಿಸಿಕೊಂಡಿತು. ಅನೇಕ ಸೈನಿಕರು ಈ ಬಂಕರ್‌ನಲ್ಲಿ ಸಿಲುಕಿಕೊಂಡರು. ಸೈನಿಕರನ್ನು ರಕ್ಷಿಸಲು ಕ್ಯಾ.ಅನ್ಶುಮನ್‌ ಸಿಂಗ್‌ ಬಂಕರ್ ಪ್ರವೇಶಿಸಿದರು. ಅಲ್ಲದೇ ಮೂವರು ಸೈನಿಕರನ್ನು ಸುರಕ್ಷಿತವಾಗಿ ಹೊರತೆಗೆದರು. ಆದರೆ ಅನ್ಶುಮನ್‌ ಸಿಂಗ್‌ ಅವರು ಗಂಭೀರ ಗಾಯಗೊಂಡರು. ಬಳಿಕ ಎಲ್ಲಾ ಸೈನಿಕರನ್ನು ಚಂಡೀಗಢಕ್ಕೆ ವಿಮಾನದಲ್ಲಿ ಕರೆದೊಯ್ಯಲಾಯಿತು. ಅಲ್ಲಿ ಅನ್ಶುಮನ್‌ ಸಿಂಗ್‌ ನಿಧನರಾದರು.

Share This Article